ADVERTISEMENT

Cricket: 600 ವಿಕೆಟ್, 6,000ಕ್ಕಿಂತ ಅಧಿಕ ರನ್; ದಿಗ್ಗಜರ ಸಾಲಿಗೆ ರವೀಂದ್ರ ಜಡೇಜ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 7 ಫೆಬ್ರುವರಿ 2025, 9:28 IST
Last Updated 7 ಫೆಬ್ರುವರಿ 2025, 9:28 IST
<div class="paragraphs"><p>ರವೀಂದ್ರ ಜಡೇಜ</p></div>

ರವೀಂದ್ರ ಜಡೇಜ

   

ಪಿಟಿಐ ಚಿತ್ರ

ನಾಗಪುರ: ಭಾರತದ ಸ್ಟಾರ್‌ ಆಲ್‌ರೌಂಡರ್‌ ರವೀಂದ್ರ ಜಡೇಜ ಅವರು ಇಂಗ್ಲೆಂಡ್‌ ವಿರುದ್ಧ ಗುರುವಾರ ನಡೆದ ಏಕದಿನ ಕ್ರಿಕೆಟ್‌ ಪಂದ್ಯದಲ್ಲಿ ಮೂರು ವಿಕೆಟ್‌ ಕಬಳಿಸುವ ಮೂಲಕ, ವಿಶೇಷ ಸಾಧನೆಯ ಶ್ರೇಯಕ್ಕೆ ಭಾಜನರಾಗಿದ್ದಾರೆ.

ADVERTISEMENT

ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಟ್ಟು 600 ವಿಕೆಟ್‌ ಹಾಗೂ 6,000ಕ್ಕಿಂತ ಅಧಿಕ ರನ್‌ ಗಳಿಸಿದ ಭಾರತದ ಎರಡನೇ ಹಾಗೂ ವಿಶ್ವದ ಆರನೇ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ.

ಭಾರತ ಪರ 600 ವಿಕೆಟ್‌ ಪಡೆದ 6ನೇ ಬೌಲರ್‌ ಹಾಗೂ ಮೊದಲ ಎಡಗೈ ಸ್ಪಿನ್ನರ್‌ ಎಂಬ ಸಾಧನೆಯೂ ಅವರದ್ದಾಗಿದೆ.

ಟೀಂ ಇಂಡಿಯಾ ಪರ ಈವರೆಗೆ 80 ಟೆಸ್ಟ್‌, 198 ಏಕದಿನ ಹಾಗೂ 74 ಟಿ20 ಪಂದ್ಯಗಳಲ್ಲಿ ಆಡಿರುವ ಜಡೇಜ ಕ್ರಮವಾಗಿ, 323, 223 ಹಾಗೂ 54 ವಿಕೆಟ್‌ಗಳನ್ನು ಉರುಳಿಸಿದ್ದಾರೆ. ಹಾಗೆಯೇ, ಟೆಸ್ಟ್‌ ಕ್ರಿಕೆಟ್‌ನಲ್ಲಿ 3,370 ರನ್‌, ಏಕದಿನದಲ್ಲಿ 2,788 ರನ್‌ ಹಾಗೂ ಟಿ20ಯಲ್ಲಿ 515 ರನ್‌ಗಳನ್ನು ಕಲೆಹಾಕಿದ್ದಾರೆ.

ಇಂಗ್ಲೆಂಡ್ ವಿರುದ್ಧ ಗುರುವಾರ ನಡೆದ ಪಂದ್ಯದಲ್ಲಿ ಮೂರು ವಿಕೆಟ್‌ಗಳನ್ನು ಪಡೆದ ಜಡೇಜ, ಬ್ಯಾಟಿಂಗ್‌ ವೇಳೆ ಅಜೇಯ 12 ರನ್‌ ಸಹ ಗಳಿಸಿದರು.

600 ವಿಕೆಟ್ ಹಾಗೂ 6,000ಕ್ಕಿಂತ ಅಧಿಕ ರನ್
ವಿಶ್ವ ಕ್ರಿಕೆಟ್‌ನಲ್ಲಿ, ಈ ವರೆಗೆ ಆರು ಮಂದಿಯಷ್ಟೇ ಈ ಸಾಧನೆ ಮಾಡಿದ್ದಾರೆ. ಜಡೇಜ ಮಾತ್ರವಲ್ಲದೆ, ಭಾರತದ ಕಪಿಲ್‌ ದೇವ್‌, ಪಾಕಿಸ್ತಾನ ವಾಸಿಂ ಅಕ್ರಮ್‌, ದಕ್ಷಿಣ ಆಫ್ರಿಕಾದ ಶಾನ್‌ ಪೊಲಾಕ್‌, ನ್ಯೂಜಿಲೆಂಡ್‌ನ ಡೆನಿಯಲ್‌ ವೆಟ್ಟೋರಿ ಹಾಗೂ ಬಾಂಗ್ಲಾದೇಶದ ಶಕೀಬ್‌ ಅಲ್‌ ಹಸನ್‌ ಅವರು ಈ ಪಟ್ಟಿಯಲ್ಲಿರುವ ಉಳಿದ ಐವರು.

  1. ಕಪಿಲ್‌ ದೇವ್‌: 9,031 ರನ್‌ ಹಾಗೂ 687 ವಿಕೆಟ್‌

  2. ವಾಸಿಂ ಅಕ್ರಮ್‌: 6,615 ರನ್ ಹಾಗೂ 916 ವಿಕೆಟ್‌

  3. ಶಾನ್‌ ಪೊಲಾಕ್‌: 8,091 ರನ್‌ ಹಾಗೂ 829 ವಿಕೆಟ್‌

  4. ಶಕೀಬ್‌ ಅಲ್‌ ಹಸನ್‌: 14,730 ರನ್‌ ಹಾಗೂ 712 ವಿಕೆಟ್‌

  5. ಡೆನಿಯಲ್‌ ವೆಟ್ಟೋರಿ: 6,989 ರನ್‌ ಹಾಗೂ 705 ವಿಕೆಟ್‌

  6. ರವೀಂದ್ರ ಜಡೇಜ: 6,653 ರನ್‌ ಹಾಗೂ 600 ವಿಕೆಟ್‌

ಭಾರತ ಪರ 600ಕ್ಕಿಂತ ಹೆಚ್ಚು ವಿಕೆಟ್‌ ಪಡೆದವರು

  1. ಅನಿಲ್‌ ಕುಂಬ್ಳೆ: 956 ವಿಕೆಟ್‌

  2. ಆರ್. ಅಶ್ವಿನ್‌: 765 ವಿಕೆಟ್‌

  3. ಹರ್ಭಜನ್‌ ಸಿಂಗ್‌:711 ವಿಕೆಟ್‌

  4. ಕಪಿಲ್‌ ದೇವ್‌: 687 ವಿಕೆಟ್‌

  5. ಜಹೀರ್‌ ಖಾನ್‌: 610 ವಿಕೆಟ್‌

  6. ರವೀಂದ್ರ ಜಡೇಜ: 600 ವಿಕೆಟ್‌

ಭಾರತಕ್ಕೆ ಜಯ
ನಾಗಪುರದಲ್ಲಿರುವ ವಿದರ್ಭ ಕ್ರಿಕೆಟ್‌ ಸಂಸ್ಥೆ ಕ್ರೀಡಾಂಗಣದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಂಗ್ಲರ ಬಳಗ, 47.4 ಓವರ್‌ಗಳಲ್ಲಿ 248 ರನ್‌ ಗಳಿಸಿ ಆಲೌಟ್‌ ಆಯಿತು.

ಪದಾರ್ಪಣೆ ಪಂದ್ಯವಾಡಿದ ಹರ್ಷಿತ್ ರಾಣಾ, 7 ಓವರ್‌ಗಳಲ್ಲಿ 53 ರನ್‌ ನೀಡಿ ಮೂರು ವಿಕೆಟ್‌ಗಳನ್ನು ಕಬಳಿಸಿದರು. ಅವರಿಗೆ ಉತ್ತಮ ಸಹಕಾರ ನೀಡಿದ ರವೀಂದ್ರ ಜಡೇಜ ಸಹ 3 ವಿಕೆಟ್‌ ಪಡೆದರು. 9 ಓವರ್‌ಗಳಲ್ಲಿ ಕೇವಲ 26 ರನ್‌ ನೀಡಿದ ಅವರು, ಜೋ ರೂಟ್‌, ಜೇಕಬ್‌ ಬೆಥೆಲ್‌, ಆದಿಲ್‌ ರಶೀದ್‌ ಅವರನ್ನು ಔಟ್‌ ಮಾಡಿದರು. ಮೊಹಮ್ಮದ್‌ ಶಮಿ, ಅಕ್ಷರ್‌ ಪಟೇಲ್‌ ಮತ್ತು ಕುಲದೀಪ್‌ ಯಾದವ್‌ ತಲಾ ಒಂದು ವಿಕೆಟ್‌ ಹಂಚಿಕೊಂಡರು.

ಈ ಗುರಿ ಬೆನ್ನತ್ತಿದ ಭಾರತ ಇನ್ನೂ 11.2 ಓವರ್‌ ಬಾಕಿ ಇರುವಂತೆಯೇ 6 ವಿಕೆಟ್‌ಗೆ 251 ರನ್‌ ಗಳಿಸಿ ಗೆದ್ದಿತು. ಶುಭಮನ್‌ ಗಿಲ್‌ (87 ರನ್‌), ಶ್ರೇಯಸ್‌ ಅಯ್ಯರ್‌ (59 ರನ್‌) ಹಾಗೂ ಅಕ್ಷರ್‌ ಪಟೇಲ್‌ (52 ರನ್‌) ಅರ್ಧಶತಕ ಗಳಿಸಿದರು.

ಈ ಜಯದೊಂದಿಗೆ ಭಾರತ, ಮೂರು ಪಂದ್ಯಗಳ ಸರಣಿಯಲ್ಲಿ 1–0 ಅಂತರದ ಮುನ್ನಡೆ ಸಾಧಿಸಿದೆ. ಮುಂದಿನ ಪಂದ್ಯವು ಕಟಕ್‌ನಲ್ಲಿ ಭಾನುವಾರ (ಫೆ.9ರಂದು) ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.