ADVERTISEMENT

ಪುದುಚೇರಿ ತಂಡಕ್ಕೆ ಆವಿಷ್ಕಾರ್‌ ಕೋಚ್‌

ಪಿಟಿಐ
Published 4 ಜುಲೈ 2020, 14:13 IST
Last Updated 4 ಜುಲೈ 2020, 14:13 IST
ಆವಿಷ್ಕಾರ್‌ ಸಾಳ್ವಿ (ಬಲ)–ಟ್ವಿಟರ್‌ ಚಿತ್ರ 
ಆವಿಷ್ಕಾರ್‌ ಸಾಳ್ವಿ (ಬಲ)–ಟ್ವಿಟರ್‌ ಚಿತ್ರ    

ಚೆನ್ನೈ/ಮುಂಬೈ: ಭಾರತದ ಹಿರಿಯ ಕ್ರಿಕೆಟಿಗ ಆವಿಷ್ಕಾರ್‌ ಸಾಳ್ವಿ ಅವರು‍ಪುದುಚೇರಿ ಸೀನಿಯರ್‌ ಕ್ರಿಕೆಟ್‌ ತಂಡದ ಮುಖ್ಯ ಕೋಚ್‌ ಆಗಿ ಶನಿವಾರ ನೇಮಕಗೊಂಡಿದ್ದಾರೆ.

ಈ ಮೊದಲು ಕರ್ನಾಟಕದ ಜೆ.ಅರುಣ್‌ ಕುಮಾರ್‌ ಅವರು ಈ ಹುದ್ದೆಯಲ್ಲಿದ್ದರು. ಅವರು ಇತ್ತೀಚೆಗೆ ಅಮೆರಿಕ ಕ್ರಿಕೆಟ್‌ ತಂಡದ ಮುಖ್ಯ ಕೋಚ್‌ ಆಗಿ ನೇಮಕವಾಗಿದ್ದರು.

‘ಮುಂಬೈನ ಹಿರಿಯ ಪ್ರಥಮ ದರ್ಜೆ ಕ್ರಿಕೆಟಿಗ ಓಂಕಾರ್‌ ಕಾನ್ವಿಲ್ಕರ್‌‌ ಮತ್ತು ರಾಜಸ್ಥಾನ ಕ್ರಿಕೆಟ್‌ ತಂಡದಲ್ಲಿ ಈ ಹಿಂದೆ ವಿಕೆಟ್‌ ಕೀಪರ್‌ ಆಗಿದ್ದ ದಿಶಾಂತ್‌ ಯಾಜ್ಞಿಕ್‌ ಅವರು ಕ್ರಮವಾಗಿ ಸಹಾಯಕ ಕೋಚ್‌ ಹಾಗೂ ಫೀಲ್ಡಿಂಗ್‌ ಕೋಚ್‌ ಆಗಿ ಕೆಲಸ ಮಾಡಲಿದ್ದಾರೆ’ ಎಂದು ಪುದುಚೇರಿ ಕ್ರಿಕೆಟ್‌ ಸಂಸ್ಥೆಯ (ಸಿಎಪಿ) ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ADVERTISEMENT

‘ಈ ಮೊದಲು ಸಾಳ್ವಿ ಅವರು ಪುದುಚೇರಿ ತಂಡದ ಮಾರ್ಗದರ್ಶಕರಾಗಿ‌ ಕೆಲಸ ಮಾಡಿದ್ದರು. ಆಟಗಾರರೊಂದಿಗೆ ಅವರು ಉತ್ತಮ ಬಾಂಧವ್ಯ ಹೊಂದಿದ್ದಾರೆ. ಹೀಗಾಗಿ ಅವರನ್ನು ಮತ್ತೊಮ್ಮೆ ಕೋಚ್‌ ಆಗಿ ನೇಮಿಸಿದ್ದೇವೆ’ ಎಂದು ಅವರು ತಿಳಿಸಿದ್ದಾರೆ.

ಇವರೆಲ್ಲರ ಜೊತೆ ಒಂದು ವರ್ಷದ ಅವಧಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ.ಇವರು ಮುಂದಿನ ದೇಶಿಯ ಋತುವಿನಲ್ಲಿ ತಂಡಕ್ಕೆ ಮಾರ್ಗದರ್ಶನ ನೀಡಲಿದ್ದಾರೆ.

‘ಎರಡನೇ ಅವಧಿಗೆ ಪುದುಚೇರಿ ತಂಡದ ಮುಖ್ಯ ಕೋಚ್‌ ಆಗಿ ಕೆಲಸ ಮಾಡುವ ಅವಕಾಶ ಸಿಕ್ಕಿರುವುದಕ್ಕೆ ಖುಷಿಯಾಗಿದೆ. ಕೋವಿಡ್‌ ಬಿಕ್ಕಟ್ಟು ಮುಂದುವರಿದಿರುವ ಕಾರಣ ದೇಶಿಯ ಋತು ಯಾವಾಗ ಆರಂಭವಾಗುತ್ತದೆ ಎಂಬುದು ಗೊತ್ತಿಲ್ಲ. ಮುಂದಿನ ಋತುವಿನಲ್ಲಿ ತಂಡದಿಂದ ಶ್ರೇಷ್ಠ ಸಾಮರ್ಥ್ಯ ಮೂಡಿಬರಬೇಕು. ಇದನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡುತ್ತೇನೆ’ ಎಂದು ಮುಂಬೈನ ಸಾಳ್ವಿ ಹೇಳಿದ್ದಾರೆ.

38 ವರ್ಷ ವಯಸ್ಸಿನ ಸಾಳ್ವಿ ಅವರು ಭಾರತ ತಂಡದ ಪರ ನಾಲ್ಕು ಏಕದಿನ ಪಂದ್ಯಗಳನ್ನು ಆಡಿದ್ದು ನಾಲ್ಕು ವಿಕೆಟ್‌ ಉರುಳಿಸಿದ್ದಾರೆ. ನಾಲ್ಕು ರನ್‌ಗಳನ್ನೂ ಗಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.