ADVERTISEMENT

ಪೋಲಿಶ್‌ ಗ್ರ್ಯಾನ್‌ಪ್ರಿ ಶೂಟಿಂಗ್: ಅಖಿಲ್‌, ಅನೀಶ್‌ಗೆ ಚಿನ್ನ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2024, 12:49 IST
Last Updated 18 ಮಾರ್ಚ್ 2024, 12:49 IST
<div class="paragraphs"><p>ಶೂಟಿಂಗ್ ( ಸಾಂದರ್ಭಿಕ ಚಿತ್ರ)</p></div>

ಶೂಟಿಂಗ್ ( ಸಾಂದರ್ಭಿಕ ಚಿತ್ರ)

   

ನವದೆಹಲಿ: ಪ್ಯಾರಿಸ್‌ ಒಲಿಂಪಿಕ್ಸ್‌ ಕೋಟಾ ಸಂಪಾದಿಸಿರುವ ಅಖಿಲ್ ಶ್ಯೆರಾಣ್ ಮತ್ತು ಅನೀಶ್‌ ಭಾನವಾಲಾ ಅವರು ಪೋಲಿಶ್‌ ಗ್ರ್ಯಾನ್‌ಪ್ರಿ ಶೂಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಭಾನುವಾರ ಒಂದೊಂದು ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ಆ ಮೂಲಕ ಈ ಕೂಟದಲ್ಲಿ ಭಾರತ ಒಟ್ಟು ಆರು ಪದಕಗಳೊಡನೆ ಅಭಿಯಾನ ಮುಗಿಸಿದಂತಾಗಿದೆ.

ಶ್ಯೆರಾಣ್ ಅವರು ವ್ರೊಕ್ಲಾವಿಯಾ ಆ್ಯಂಡ್‌ ಡೊಲ್ನೆಗೊ ಸ್ಲಾಸ್ಕಾ ಗ್ರ್ಯಾನ್‌ಪ್ರಿ ಕೂಟದ ಪುರುಷರ 50 ಮೀ. ರೈಫಲ್ 3–ಪೊಸಿಷನ್‌ನ ಎರಡನೇ ಸ್ಪರ್ಧೆಯಲ್ಲಿ 468.4 ಸ್ಕೋರ್‌ನೊಡನೆ ವಿಶ್ವ ದಾಖಲೆ ಮುರಿದರು. 2.2 ಪಾಯಿಂಟ್‌ ಅಂತರದಿಂದ ಹಿಂದೆಬಿದ್ದು ಎರಡನೇ ಸ್ಥಾನ ಪಡೆದ  ಝೆಕ್‌ ರಿಪ‍ಬ್ಲಿಕ್‌ನ ಪ್ಯಾಟ್ರಿಕ್ ಜಾನಿ ಕೂಡ ಹಳೆಯ ದಾಖಲೆ ಸುಧಾರಿಸಿದರು. ಇಬ್ಬರ ಸ್ಕೋರ್‌ಗಳು ಕೂಡ ಈ ಹಿಂದಿನ ವಿಶ್ವದಾಖಲೆ (466.1) ಗಿಂತ ಹೆಚ್ಚು. ಹಳೆಯ ದಾಖಲೆ ಝೆಕ್‌ ರಿಪಬ್ಲಿಕ್‌ನ ಜಿರಿ ಪ್ರಿವ್ಲಾಟ್‌ಸ್ಕಿ ಹೆಸರಿನಲ್ಲಿತ್ತು.

ADVERTISEMENT

ಭಾನವಾಲಾ ಅವರು ಜೋಸೆಫ್‌ ಝಪೆಡ್‌ಝ್ಕಿ ಗ್ರ್ಯಾನ್‌ಪ್ರಿ ಟೂರ್ನಿಯ ಪುರುಷರ 25 ಮೀ. ರ್‍ಯಾಪಿಡ್‌ ಫೈರ್‌ ಪಿಸ್ತೂಲ್ ವಿಭಾಗದಲ್ಲಿ ಚಿನ್ನ ಗೆದ್ದರು.

ಭಾರತದ 50 ಮೀ. ರೈಫಲ್ ಮತ್ತು 25 ಮೀ. ಪಿಸ್ತೂಲ್ ತಂಡದ ಕೆಲವು ಶೂಟರ್‌ಗಳು, ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಮೊದಲು ಅನುಭವ ಸಂಪಾದಿಸುವ ಉದ್ದೇಶದಿಂದ ವಿವಿಧ ಟೂರ್ನಿಗಳಿಂದ ಭಾಗವಹಿಸಲು ಯುರೋಪ್‌ ಪ್ರವಾಸದಲ್ಲಿದ್ದಾರೆ.

ನೌಕಾಪಡೆಯಲ್ಲಿರುವ ಶೂಟರ್‌ ನೀರಜ್ ಕುಮಾರ್‌ ಪುರಷರ ರೈಫಲ್ 3 ಪೊಸಿಷನ್‌ನ ಎರಡೂ ಸ್ಪರ್ಧೆಗಳಲ್ಲಿ ಕಂಚಿನ ಪದಕ ಪಡೆದರು. ಅವರು ಇಲ್ಲಿ ಎರಡು ಪದಕ ಪಡೆದ ಏಕೈಕ ಭಾರತೀಯ ಸ್ಪರ್ಧಿ ಎನಿಸಿದರು. ಎರಡು ಕ್ವಾಲಿಫಿಕೇಷನ್ ಪಂದ್ಯಗಳಲ್ಲಿ ಅವರು 595 ಮತ್ತು 594 ಪಾಯಿಂಟ್ಸ್ ಪಡೆದರು.

ಮೊದಲ ಸ್ಪರ್ಧೆಯಲ್ಲಿ ಅವರು ಜಾನಿ ಮತ್ತು ರಿಯೊ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತ ಸೆರ್‌ಹಿ ಕುಲಿಶ್ (ಉಕ್ರೇನ್‌) ಅವರ ನಂತರ ಮೂರನೇ ಸ್ಥಾನ ಪಡೆದರು.

ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿರುವ ಶ್ರೀಯಾಂಕಾ ಸದಂಗಿ ಮಹಿಳೆಯರ 3ಪಿ ಸ್ಪರ್ಧೆಯಲ್ಲಿ ಕಂಚಿನ ಪದಕ ಮತ್ತು ಆಶಿ ಚೋಸ್ಕಿ ಮಹಿಳೆಯರ 3ಪಿ ಎರಡನೇ ಸ್ಪರ್ಧೆಯಲ್ಲಿ ಬೆಳ್ಳಿಯ ಪದಕ ಪಡೆದರು.

ಭಾರತದ ಸ್ಪರ್ಧಿಗಳು ಮಂಗಳವಾರ ಜರ್ಮನಿಗೆ ತೆರಳಲಿದ್ದು, ಡೋರ್ಟ್‌ಮುಂಡ್‌ನಲ್ಲಿ ನಡೆಯಲಿರುವ ಐಎಸ್‌ಎಸ್‌ ಡೋರ್ಟ್‌ಮುಂಡ್‌ ಟೂರ್ನಿಯಲ್ಲಿ ಭಾಗವಹಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.