
ಹೊಬಾರ್ಟ್: ಇಲ್ಲಿನ ಬೆಲ್ಲೆರಿವ್ ಓವಲ್‌ನಲ್ಲಿ ನಡೆಯುತ್ತಿರುವ ಭಾರತ ಹಾಗೂ ಆಸ್ಟ್ರೇಲಿಯಾ ಮಹಿಳಾ ತಂಡಗಳ ನಡುವಿನ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾದ ಆರಂಭಿಕ ಬ್ಯಾಟರ್ ಅಲಿಸಾ ಹೀಲಿ ಸ್ಫೋಟಕ ಶತಕ ಸಿಡಿಸಿ ಮಿಂಚಿದ್ದಾರೆ.
ಅಲಿಸಾ ಹೀಲಿ ಅವರು ಏಕದಿನ ಅಂತರರಾಷ್ಟ್ರೀಯ ಕ್ರಿಕೆಟ್ ವೃತ್ತಿ ಜೀವನದ ತಮ್ಮ ಕೊನೆಯ ಪಂದ್ಯದಲ್ಲಿ ಭಾರತದ ವಿರುದ್ಧ ಸ್ಫೋಟಕ ಶತಕ ಸಿಡಿಸಿ ಮಿಂಚಿದ್ದಾರೆ.
ಇನ್ನೂ, ಈ ಪಂದ್ಯವನ್ನು ಕಾಮೆಂಟರಿ ಬಾಕ್ಸ್‌ನಲ್ಲಿ ಕುಳಿತು ವೀಕ್ಷಿಸುತ್ತಿದ್ದ ಆಸ್ಟ್ರೇಲಿಯಾ ತಂಡದ ವೇಗಿ ಹಾಗೂ ಅಲಿಸಾ ಹೀಲಿ ಅವರ ಪತಿ ಮಿಚೆಲ್ ಸ್ಟಾರ್ಕ್ ಅವರು ಭಾವುಕರಾದ ಘಟನೆಯೂ ನಡೆದಿದೆ.
ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಆಸ್ಟ್ರೇಲಿಯಾ ತಂಡಕ್ಕೆ ನಾಯಕಿ ಹೀಲಿ ಉತ್ತಮ ಆರಂಭ ಒದಗಿಸಿದರು, ಸ್ಫೋಟಕ ಬ್ಯಾಟಿಂಗ್ ಮಾಡಿದ ಅವರು, ತಮ್ಮ ಕೊನೆಯ ಏಕದಿನ ಪಂದ್ಯದಲ್ಲಿ ಏಕದಿನ ಕ್ರಿಕೆಟ್ ವೃತ್ತಿಜೀವನದ ತಮ್ಮ 9ನೇ ಶತಕ ಸಿಡಿಸಿ ಮಿಂಚಿದರು.
ಮಾತ್ರವಲ್ಲ, ಶತಕದ ಬಳಿಕವೂ ಉತ್ತಮ ಬ್ಯಾಟಿಂಗ್ ನಡೆಸಿದ ಅವರು, ಕೇವಲ 98 ಎಸೆತಗಳಲ್ಲಿ 27 ಬೌಂಡರಿ ಹಾಗೂ 2 ಆಕರ್ಷಕ ಸಿಕ್ಸರ್ ಸಹಿತ 158 ರನ್ ಗಳಿಸಿದರು.
ಅಲೀಸಾ ಹೀಲಿ ಶತಕ ಸಿಡಿಸುತ್ತಿದ್ದಂತೆ, ಕಾಮೆಂಟರಿ ಗ್ಯಾಲರಿಯಲ್ಲಿ ಕುಳಿತಿದ್ದ ಮಿಚೆಲ್ ಸ್ಟಾರ್ಕ್ ಅವರು ಕೈಯಲ್ಲಿ ಮೈಕ್ ಇದ್ದರೂ ಕೂಡ ಮಾತನಾಡದೆ, ಮೌನವಾಗಿ ಚಪ್ಪಾಳೆ ತಟ್ಟುತ್ತಾ, ಭಾವುಕರಾಗಿದ್ದು ಕಂಡು ಬಂದಿತು.
ಹೀಲಿ ಅವರ, ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಆಸ್ಟ್ರೇಲಿಯಾ ತಂಡವು 50 ಓವರ್‌ಗಳಲ್ಲಿ 409 ರನ್ ಕಲೆಹಾಕಿತು. ಈ ಬೃಹತ್ ಗುರಿ ಬೆನ್ನಟ್ಟಿದ ಭಾರತ ತಂಡವು 224 ರನ್‌ಗಳಿಗೆ ಆಲೌಟ್ ಆಗುವ ಮೂಲಕ 185ರನ್‌ಗಳ ಹೀನಾಯ ಸೋಲು ಅನುಭವಿಸಿತು.
ಹೀಲಿ ಮತ್ತು ಸ್ಟಾರ್ಕ್ ಇಬ್ಬರೂ ಆಸ್ಟ್ರೇಲಿಯಾ ರಾಷ್ಟ್ರೀಯ ಕ್ರಿಕೆಟ್ ತಂಡದ ಪರ ಅನೇಕ ಪಂದ್ಯಗಳನ್ನು ಆಡಿದ್ದಾರೆ. ಅವರು 2016ರಲ್ಲಿ ಮದುವೆಯಾಗಿದ್ದರು. ಈ ಜೋಡಿಯು ಆಸ್ಟ್ರೇಲಿಯಾ ಪರ, ಏಕದಿನ ಮತ್ತು ಟಿ20ಐ ಕ್ರಿಕೆಟ್‌ನಲ್ಲಿ ಒಟ್ಟಾರೆ 11 ವಿಶ್ವಕಪ್ ಟ್ರೋಫಿಗಳನ್ನು ಗೆದ್ದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.