ADVERTISEMENT

ಅಂತಿಮ ಕ್ರಿಕೆಟ್ ಟೆಸ್ಟ್: ಪಾಕಿಸ್ತಾನದ ದಿಟ್ಟ ಹೋರಾಟ

ಏಜೆನ್ಸೀಸ್
Published 24 ಆಗಸ್ಟ್ 2020, 19:30 IST
Last Updated 24 ಆಗಸ್ಟ್ 2020, 19:30 IST
ಪಾಕಿಸ್ತಾನದ ಆರಂಭಿಕ ಆಟಗಾರ ಅಬಿದ್ ಅಲಿ ಅವರ ಬ್ಯಾಟಿಂಗ್ ಶೈಲಿ –ಎಎಫ್‌ಪಿ ಚಿತ್ರ
ಪಾಕಿಸ್ತಾನದ ಆರಂಭಿಕ ಆಟಗಾರ ಅಬಿದ್ ಅಲಿ ಅವರ ಬ್ಯಾಟಿಂಗ್ ಶೈಲಿ –ಎಎಫ್‌ಪಿ ಚಿತ್ರ   

ಸೌತಾಂಪ್ಟನ್: ಮೊದಲ ಇನಿಂಗ್ಸ್‌ನಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಪಾಕಿಸ್ತಾನ ತಂಡ ಎರಡನೇ ಇನಿಂಗ್ಸ್‌ನಲ್ಲಿ ಆತಿಥೇಯ ಇಂಗ್ಲೆಂಡ್‌ಗೆ ದಿಟ್ಟ ಉತ್ತರ ನೀಡಿದೆ. ಇಲ್ಲಿ ನಡೆಯುತ್ತಿರುವ ಮೂರನೇ ಹಾಗೂ ಅಂತಿಮ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ಫಾಲೊ ಆನ್‌ಗೆ ಒಳಗಾಗಿರುವ ಪಾಕಿಸ್ತಾನಕ್ಕೆ ಆರಂಭಿಕ ಆಟಗಾರರಾದ ಶಾನ್ ಮಸೂದ್ ಮತ್ತು ಅಬಿದ್ ಅಲಿ ಉತ್ತಮ ಬುನಾದಿ ಹಾಕಿದರು. ಇದರ ಪರಿಣಾಮ ನಾಲ್ಕನೇ ದಿನವಾದ ಸೋಮವಾರ ಬೆಳಕಿನ ಅಭಾವದಿಂದ ಆಟ ನಿಂತಾಗ ತಂಡ 56 ಓವರ್‌ಗಳಲ್ಲಿ ಎರಡು ವಿಕೆಟ್ ಕಳೆದುಕೊಂಡು 100 ರನ್ ಗಳಿಸಿದೆ.

ಎದುರಾಳಿ ತಂಡದ ಮೊದಲ ಇನಿಂಗ್ಸ್ ಮೊತ್ತವನ್ನು ಹಿಂದಿಕ್ಕಲು ಪಾಕಿಸ್ತಾನ ಇನ್ನೂ 210 ರನ್ ಗಳಿಸಬೇಕಾಗಿದೆ. ಹೀಗಾಗಿ ಇಂಗ್ಲೆಂಡ್‌ಗೆ ಪಂದ್ಯ ಗೆದ್ದು ಸರಣಿಯನ್ನು 2–0 ಅಂತರದಲ್ಲಿ ತನ್ನದಾಗಿಸಿಕೊಳ್ಳಲು ಉತ್ತಮ ಅವಕಾಶವಿದೆ.

ಟೆಸ್ಟ್ ಕ್ರಿಕೆಟ್‌ನಲ್ಲಿ 600 ವಿಕೆಟ್ ಗಳಿಸಿದ ಮೊದಲ ವೇಗದ ಬೌಲರ್ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಳ್ಳುವ ಕಾತರದಲ್ಲಿದ್ದ ಜೇಮ್ಸ್ ಆ್ಯಂಡರ್ಸನ್‌ಗೆ ಸೋಮವಾರ ನಿರಾಸೆ ಕಾಡಿತು. ಹವಾಮಾನ ವೈಪರೀತ್ಯ, ಪಾಕ್ ಬ್ಯಾಟ್ಸ್‌ಮನ್‌ಗಳ ಹೋರಾಟ ಮತ್ತು ವಿಕೆಟ್ ಕೀಪರ್ ಜೋಸ್ ಬಟ್ಲರ್ ಕ್ಯಾಚ್ ಕೈಚೆಲ್ಲಿದ್ದು ಆ್ಯಂಡರ್ಸ್‌ನ್‌ ಕನಸಿಗೆ ಧಕ್ಕೆಯಾಯಿತು. ಆದರೂ ದಿನದಾಟದಲ್ಲಿ 12 ಓವರ್‌ ಬೌಲಿಂಗ್ ಮಾಡಿದ ಅವರು ಒಂದು ವಿಕೆಟ್ ಕಬಳಿಸಿದ್ದು ದಾಖಲೆ ಬರೆಯಲು ಇನ್ನು ಒಂದೇ ವಿಕೆಟ್ ಬೇಕಾಗಿದೆ.

ADVERTISEMENT

ಇಂಗ್ಲೆಂಡ್‌ ಮೊದಲ ಇನಿಂಗ್ಸ್‌ನಲ್ಲಿ ಎಂಟು ವಿಕೆಟ್‌ಗಳಿಗೆ 583 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತ್ತು. ಮೂರನೇ ದಿನವಾದ ಭಾನುವಾರ ಪಾಕಿಸ್ತಾನ 273 ರನ್‌ಗಳಿಗೆ ಆಲೌಟಾಗಿತ್ತು. ದಿನದಾಟದ ಮುಕ್ತಾಯಕ್ಕೆ ಅರ್ಧ ತಾಸು ಇದ್ದರೂ ಮಳೆಯಿಂದಾಗಿ ಪಾಕಿಸ್ತಾನದ ಎರಡನೇ ಇನಿಂಗ್ಸ್ ಆರಂಭಿಸಲು ಆಗಲಿಲ್ಲ. 598 ವಿಕೆಟ್ ಗಳಿಸಿದ್ದ ಆ್ಯಂಡರ್ಸನ್‌ಗೆ ಸೋಮವಾರ ಬೆಳಿಗ್ಗೆಯೇ ವಿಕೆಟ್ ಗಳಿಸುವ ಅವಕಾಶ ಇತ್ತು. ಅದರೆ ಶಾನ್ ಮಸೂದ್ ಬ್ಯಾಟಿನ ಅಂಚಿಗೆ ತಾಗಿದ ಚೆಂಡನ್ನು ಹಿಡಿತಕ್ಕೆ ಪಡೆದುಕೊಳ್ಳುವಲ್ಲಿ ಜೋಸ್ ಬಟ್ಲರ್ ವಿಫಲರಾದರು.

ಮಳೆ ಸುರಿದ ಕಾರಣ ನಿಗದಿಗಿಂತ ಮೊದಲೇ ಭೋಜನಕ್ಕೆ ತೆರಳಲು ನಿರ್ಧರಿಸಲಾಯಿತು. ಮಳೆ ಮುಂದುವರಿದ ಕಾರಣ ಕೆಲವು ತಾಸುಗಳ ನಂತರವಷ್ಟೇ ಪಂದ್ಯವನ್ನು ಮತ್ತೆ ಆರಂಭಿಸಲು ಸಾಧ್ಯವಾಯಿತು. ಸ್ಟುವರ್ಟ್ ಬ್ರಾಡ್ ಎಸೆತದಲ್ಲಿ ಶಾನ್ ಮಸೂದ್ ವಿಕೆಟ್ ಕಳೆದುಕೊಂಡರು. ನಂತರ ಅಬಿದ್ ಅಲಿ ಜೊತೆಗೂಡಿದ ಮೊದಲ ಇನಿಂಗ್ಸ್‌ನ ಶತಕ ವೀರ, ನಾಯಕ ಅಜರ್ ಅಲಿ ಇನಿಂಗ್ಸ್ ಕಟ್ಟಿದರು. ಅರ್ಧಶತಕದತ್ತ ಹೆಜ್ಜೆ ಹಾಕಿದ್ದ ಅಬಿದ್ ಅಲಿ (42; 162 ಎಸೆತ, 2 ಬೌಂಡರಿ) ಆ್ಯಂಡರ್ಸನ್ ಅವರ ಎಲ್‌ಬಿಡಬ್ಲ್ಯು ಬಲೆಯಲ್ಲಿ ಸಿಲುಕಿದರು. ಆರು ಓವರ್‌ಗಳ ನಂತರ ಬೆಳಕಿನ ಅಭಾವ ಕಾಡಿತು. ಹೀಗಾಗಿ ದಿನದಾಟವನ್ನು ಮುಕ್ತಾಯಗೊಳಿಸಲು ನಿರ್ಧರಿಸಲಾಯಿತು.

ಆ್ಯಂಡರ್ಸನ್ ಈಗ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಗಳಿಸಿದವರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಮೊದಲ ಮೂರು ಸ್ಥಾನಗಳಲ್ಲಿ ಕ್ರಮವಾಗಿ ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ (800 ವಿಕೆಟ್), ಆಸ್ಟ್ರೇಲಿಯಾದ ಶೇನ್ ವಾರ್ನ್ (708) ಮತ್ತು ಭಾರತದ ಅನಿಲ್ ಕುಂಬ್ಳೆ (619) ಇದ್ದಾರೆ. ಆಸ್ಟ್ರೇಲಿಯಾದ ಮಾಜಿ ವೇಗಿ ಗ್ಲೆನ್ ಮೆಗ್ರಾ (563) ಐದನೇ ಸ್ಥಾನದಲ್ಲಿದ್ದಾರೆ.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್‌, ಇಂಗ್ಲೆಂಡ್‌: 8ಕ್ಕೆ 583 ಡಿಕ್ಲೇರ್; ಪಾಕಿಸ್ತಾನ: 273; ಎರಡನೇ ಇನಿಂಗ್ಸ್‌, ಪಾಕಿಸ್ತಾನ (ಫಾಲೊ ಆನ್): 56 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 100(ಶಾನ್ ಮಸೂದ್ 18, ಅಬಿದ್ ಅಲಿ 42, ಅಜರ್ ಅಲಿ ಬ್ಯಾಟಿಂಗ್ 29, ಬಾಬರ್ ಆಜಂ ಬ್ಯಾಟಿಂಗ್ 4; ಜೇಮ್ಸ್‌ ಆ್ಯಂಡರ್ಸನ್‌ 18ಕ್ಕೆ ,1 ಸ್ಟುವರ್ಟ್ ಬ್ರಾಡ್ 23ಕ್ಕೆ1). ನಾಲ್ಕನೇ ದಿನದಾಟದ ಅಂತ್ಯಕ್ಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.