
ಸಿಡ್ನಿ: 5 ಪಂದ್ಯಗಳ ಆ್ಯಷಸ್ ಟೆಸ್ಟ್ ಸರಣಿಯನ್ನು ಇನ್ನೂ ಒಂದು ಪಂದ್ಯ ಇರುವಂತೆ ಗೆದ್ದಿರುವ ಆಸ್ಟ್ರೇಲಿಯಾ ತಂಡ, ಇಲ್ಲಿ ಆರಂಭಗೊಂಡಿರುವ ಐದನೇ ಹಾಗೂ ಅಂತಿಮ ಪಂದ್ಯದಲ್ಲಿ ಈ ಹಿಂದೆ ಎಂದೂ ಮಾಡಿರದ ವಿಶೇಷ ಪ್ರಯೋಗ ಒಂದನ್ನು ಮಾಡಿದೆ.
ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಆರಂಭವಾಗಿರುವ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಮೊದಲು ಬೌಲಿಂಗ್ ಆಯ್ದುಕೊಂಡಿದೆ. ಈ ವೇಳೆ ನಾಯಕ ಪ್ಯಾಟ್ ಕಮಿನ್ಸ್ ಅನುಪಸ್ಥಿತಿಯಲ್ಲಿ ನಾಯಕತ್ವ ವಹಿಸಿಕೊಂಡಿರುವ ಸ್ಟೀವ್ ಸ್ಮಿತ್ ಅಚ್ಚರಿ ನಿರ್ಧಾರ ಒಂದನ್ನು ತೆಗೆದುಕೊಂಡಿದ್ದಾರೆ. ಅದು ಕೂಡ ಆಸೀಸ್ ತಂಡದ ಆಡುವ 11ರ ಬಳಗದಲ್ಲಿ ತಜ್ಞ ಸ್ಪಿನ್ ಬೌಲರ್ ಇಲ್ಲದೆ ಕಣಕ್ಕಿಳಿಯುವ ಮೂಲಕ.
ಇದಕ್ಕೂ ಮೊದಲು ಆಸ್ಟ್ರೇಲಿಯಾ ತಂಡ 1888ರಲ್ಲಿ ಈ ಪ್ರಯೋಗ ಮಾಡಿತ್ತು. ಸದ್ಯ ನಡೆಯುತ್ತಿರುವ ಆ್ಯಷಸ್ ಟೆಸ್ಟ್ ಸರಣಿಯ ಮೊದಲ ನಾಲ್ಕು ಪಂದ್ಯಗಳಿಂದ ಆಸೀಸ್ ಸ್ಪಿನ್ ಬೌಲರ್‌ಗಳು ಕೇವಲ 9 ವಿಕೆಟ್‌ಗಳನ್ನು ಮಾತ್ರ ಪಡೆದುಕೊಂಡಿದ್ದಾರೆ. ಇದು ಸಿಡ್ನಿ ಟೆಸ್ಟ್ ಪಂದ್ಯದ ಮೇಲೆ ನೇರ ಪರಿಣಾಮ ಬೀರಿತು.
ತಂಡದಲ್ಲಿ ನಾಥನ್ ಲಿಯಾನ್ ಬದಲು ಸ್ಥಾನ ಪಡೆದಿರುವ ಟಾಡ್ ಮರ್ಫಿ ಅವರನ್ನು ಐದನೇ ಪಂದ್ಯದಿಂದ ಕೈಬಿಟ್ಟು ಅವರ ಜಾಗದಲ್ಲಿ ಆಲ್‌ರೌಂಡರ್ ವೆಬ್‌ಸ್ಟರ್ ಅವರಿಗೆ ಅವಕಾಶ ನೀಡಲಾಗಿದೆ. ಆ ಮೂಲಕ ಆಸ್ಟ್ರೇಲಿಯಾ ಕ್ರಿಕೆಟ್ ತಂಡ ಕಳೆದ 138 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಪೂರ್ಣ ಪ್ರಮಾಣದ ತಜ್ಞ ಸ್ಪಿನ್ ಬೌಲರ್ ಇಲ್ಲದೆ ಕಣಕ್ಕಿಳಿದಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ಆಸ್ಟ್ರೇಲಿಯಾ ತಂಡದ ನಾಯಕ ಸ್ಟೀವ್ ಸ್ಮಿತ್, ‘ಇಲ್ಲಿ ಸ್ಪಿನ್ ಬೌಲಿಂಗ್ ಪ್ರಮುಖ ಪಾತ್ರ ವಹಿಸುತ್ತದೆ ಎಂದು ನನಗೆ ಅನಿಸುವುದಿಲ್ಲ. ಬದಲಾಗಿ ಸೀಮ್ ಹಾಗೂ ಪಿಚ್‌ನಲ್ಲಿರುವ ಬಿರುಕುಗಳು ಪ್ರಮುಖ ಪಾತ್ರ ವಹಿಸುತ್ತವೆ’ ಎಂದು ಸ್ಪಷ್ಟನೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.