ADVERTISEMENT

ಅಂತಿಮ ಟೆಸ್ಟ್ ಗೆದ್ದ ಆಸ್ಟ್ರೇಲಿಯಾ: 4–1 ಅಂತರದಲ್ಲಿ ಸರಣಿ ಕೈವಶ

ಇಂಗ್ಲೆಂಡ್‌ಗೆ ನಿರಾಸೆ

​ಪ್ರಜಾವಾಣಿ ವಾರ್ತೆ
Published 8 ಜನವರಿ 2026, 12:49 IST
Last Updated 8 ಜನವರಿ 2026, 12:49 IST
ಟ್ರೋಫಿಯೊಂದಿಗೆ ಸಂಭ್ರಮಿಸಿದ ಸ್ಟೀವ್‌ ಸ್ಮಿತ್ ಮತ್ತು ನಾಯಕ ಪ್ಯಾಟ್‌ ಕಮಿನ್ಸ್‌ ಜೊತೆ ಆಸ್ಟ್ರೇಲಿಯಾ ತಂಡದ ಸಹ ಆಟಗಾರರು.
ಎಪಿ/ಪಿಟಿಐ ಚಿತ್ರ
ಟ್ರೋಫಿಯೊಂದಿಗೆ ಸಂಭ್ರಮಿಸಿದ ಸ್ಟೀವ್‌ ಸ್ಮಿತ್ ಮತ್ತು ನಾಯಕ ಪ್ಯಾಟ್‌ ಕಮಿನ್ಸ್‌ ಜೊತೆ ಆಸ್ಟ್ರೇಲಿಯಾ ತಂಡದ ಸಹ ಆಟಗಾರರು. ಎಪಿ/ಪಿಟಿಐ ಚಿತ್ರ   

ಸಿಡ್ನಿ: ಆಸ್ಟ್ರೇಲಿಯಾ ತಂಡ, ಆ್ಯಷಸ್‌ ಸರಣಿಯ ಐದನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್‌ ತಂಡವನ್ನು ಗುರುವಾರ ಐದು ವಿಕೆಟ್‌ಗಳಿಂದ ಸೋಲಿಸಿತು. ಸರಣಿಯನ್ನು 4–1 ರಿಂದ ಗೆದ್ದುಕೊಂಡಿತು.

ಆರಂಭ ಆಟಗಾರ ಉಸ್ಮಾನ್ ಖ್ವಾಜಾ ಗೆಲುವಿನೊಡನೆ ಅಂತಿಮ ಟೆಸ್ಟ್ ಸ್ಮರಣೀಯವಾಗಿಸಿದರು.

ಗೆಲುವಿಗಾಗಿ ನಿಗದಿಯಾಗಿದ್ದ 160 ರನ್‌ ಗಳಿಸುವ ಹಾದಿಯಲ್ಲಿ ಆತಿಥೇಯರು ಸ್ವಲ್ಪ ಪರದಾಡಿದರು. 121 ರನ್‌ಗಳಿಗೆ ಐದು ವಿಕೆಟ್‌ಗಳು ಉರುಳಿದ್ದವು. ಲಂಚ್‌ ನಂತರ ಕ್ಯಾಮೆರಾನ್ ಗ್ರೀನ್ (ಅಜೇಯ 22) ಮತ್ತು ಅಲೆಕ್ಸ್‌ ಕ್ಯಾರಿ (ಅಜೇಯ 16) ಅವರು ಮುರಿಯದ ಆರನೇ ವಿಕೆಟ್‌ಗೆ 40 ರನ್ ಸೇರಿಸಿ ತಂಡದ ಗೆಲುವನ್ನು ಪೂರೈಸಿದರು.

ADVERTISEMENT

88ನೇ ಹಾಗೂ ಕೊನೆಯ ಟೆಸ್ಟ್‌ ಇನಿಂಗ್ಸ್‌ನಲ್ಲಿ ಖ್ವಾಜಾ ಆರು ರನ್ ಗಳಿಸಿ ಜೋಶ್ ಟಂಗ್ (42ಕ್ಕೆ3) ಬೌಲಿಂಗ್‌ನಲ್ಲಿ ಬೌಲ್ಡ್ ಆದರು.

‘ಈ ಗೆಲುವು ನನ್ನ ಪಾಲಿಗೆ ಮಹತ್ವದ್ದು. ಪಂದ್ಯದಲ್ಲಿ ಗೆಲುವಿನ ರನ್ ಹೊಡೆಯಬೇಕೆಂಬ ಆಸೆಯೂ ಇತ್ತು’ ಎಂದು ಖ್ವಾಜಾ ಹೇಳಿದರು. ಕೊನೆಯ ಇನಿಂಗ್ಸ್ ಆಡಲು ಮೈದಾನಕ್ಕಿಳಿದಾಗ ಭಾವೋದ್ವೇಗದಲ್ಲಿದ್ದ ಅವರಿಗೆ ಪ್ರೇಕ್ಷಕರು ಎದ್ದುನಿಂತು ಚಪ್ಪಾಳೆಯ ಗೌರವ ಸಲ್ಲಿಸಿದರು. 

‘ಆಸ್ಟ್ರೇಲಿಯಾ ಅದ್ಭುತ ತಂಡ’ ಎಂದು ಸ್ಟೋಕ್ಸ್‌ ಮೆಚ್ಚುಗೆ ಸೂಚಿಸಿದರು. ‘ಅವರಲ್ಲಿ ಪಂದ್ಯ ಗೆಲ್ಲಿಸುವ ಆಟಗಾರರು ಸಕಾಲದಲ್ಲಿ ಉತ್ತಮ ಆಟ ಪ್ರದರ್ಶಿಸುತ್ತಾರೆ. ನಮ್ಮಿಂದ ಇನ್ನೂ ಉತ್ತಮ ಆಟ ಬರಬೇಕಿತ್ತು. ಆತ್ಮಾವಲೋಕನಕ್ಕೆ ಇದು ಸೂಕ್ತ ಸಮಯ’ ಎಂದು ಇಂಗ್ಲೆಂಡ್ ಕ್ಯಾಪ್ಟನ್ ಬೆನ್ ಸ್ಟೋಕ್ಸ್‌ ಹೇಳಿದರು.

ಬುಧವಾರ 8 ವಿಕೆಟ್‌ಗೆ 302 ರನ್ ಗಳಿಸಿದ್ದ ಇಂಗ್ಲೆಂಡ್ ಕೊನೆಯ ದಿನ ಆ ಮೊತ್ತಕ್ಕೆ 40 ರನ್ ಸೇರಿಸಿ ಆಲೌಟ್ ಆಯಿತು. ಜೇಕಬ್ ಬೆಥೆಲ್ (154) ಅವರು ಒಂಬತ್ತನೆಯವರಾಗಿ ನಿರ್ಗಮಿಸಿದರು.

ಐದು ಪಂದ್ಯಗಳನ್ನು ಒಟ್ಟು 8,60,000 ಪ್ರೇಕ್ಷಕರು ವೀಕ್ಷಿಸಿದರು. ಸಿಡ್ನಿಯ ಟೆಸ್ಟ್ ಪಂದ್ಯವನ್ನು 2,11,000 ಜನರು ವೀಕ್ಷಿಸಿದರು.

ಐದು ಟೆಸ್ಟ್‌ಗಳಲ್ಲಿ 31 ವಿಕೆಟ್‌ಗಳ ಜೊತೆ 153 ರನ್ ಬಾರಿಸಿದ ಮಿಚೆಲ್ ಸ್ಟಾಕ್ ‘ಸರಣಿಯ ಸರ್ವೋತ್ತಮ’ ಎನಿಸಿದರು.

ಸಂಕ್ಷಿಪ್ತ ಸ್ಕೋರು: ಇಂಗ್ಲೆಂಡ್‌: 384 ಮತ್ತು 88.2 ಓವರುಗಳಲ್ಲಿ 342 (ಜೇಕಬ್ ಬೆಥೆಲ್ 154, ಸ್ಟಾರ್ಕ್ 72ಕ್ಕೆ3, ಬ್ಯೂ ವೆಬ್‌ಸ್ಟರ್ 64ಕ್ಕೆ3); ಆಸ್ಟ್ರೇಲಿಯಾ: 567 ಮತ್ತು 31.2 ಓವರುಗಳಲ್ಲಿ 5 ವಿಕೆಟ್‌ಗೆ 161 (ಟ್ರಾವಿಸ್‌ ಹೆಡ್‌ 29, ಜೇಕ್ ವಿಥೆರಾಲ್ಡ್ 34, ಮಾರ್ನ‌ಸ್ ಲಾಬುಷೇನ್ 37; ಜೋಶ್ ಟಂಗ್ 42ಕ್ಕೆ3). ಪಂದ್ಯದ ಆಟಗಾರ: ಟ್ರಾವಿಸ್ ಹೆಡ್ (163, 29).

ಐದನೇ ಟೆಸ್ಟ್ ಪಂದ್ಯದ ಅಂತಿಮ ದಿನವಾದ ಗುರುವಾರ ಔಟ್‌ ಆಗಿ ಮೈದಾನ ತೊರೆಯುವ ಮೊದಲು ಉಸ್ಮಾನ್‌ ಖ್ವಾಜಾ ಪಿಚ್‌ಗೆ ಮುತ್ತಿಕ್ಕಿದರು. ಎಪಿ/ಪಿಟಿಐ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.