ADVERTISEMENT

ಆ್ಯಷಸ್‌ ಸರಣಿಯ ನಾಲ್ಕನೇ ಟೆಸ್ಟ್‌: ಮೊದಲ ದಿನವೇ 20 ವಿಕೆಟ್‌ಗಳ ಪತನ

ಬಾಕ್ಸಿಂಗ್ ಡೇ ಟೆಸ್ಟ್‌: ಆಸ್ಟ್ರೇಲಿಯಾಕ್ಕೆ ಅಲ್ಪ ಮುನ್ನಡೆ

ಏಜೆನ್ಸೀಸ್
Published 26 ಡಿಸೆಂಬರ್ 2025, 16:17 IST
Last Updated 26 ಡಿಸೆಂಬರ್ 2025, 16:17 IST
5 ವಿಕೆಟ್‌ ಪಡೆದ ಇಂಗ್ಲೆಂಡ್ ತಂಡದ ವೇಗದ ಬೌಲರ್ ಜೋಶ್ ಟಂಗ್
5 ವಿಕೆಟ್‌ ಪಡೆದ ಇಂಗ್ಲೆಂಡ್ ತಂಡದ ವೇಗದ ಬೌಲರ್ ಜೋಶ್ ಟಂಗ್   

ಮೆಲ್ಬರ್ನ್‌: ಆ್ಯಷಸ್‌ ಸರಣಿಯ ನಾಲ್ಕನೇ ಟೆಸ್ಟ್‌ನ ಮೊದಲ ದಿನವಾದ ಶುಕ್ರವಾರವೇ 20 ವಿಕೆಟ್‌ಗಳು ಪತನವಾದವು. ಆಸ್ಟ್ರೇಲಿಯಾ ತಂಡ 152 ರನ್‌ಗಳಿಗೆ ಕುಸಿಯಿತು. ಆದರೆ ಇಂಗ್ಲೆಂಡ್‌ ತಂಡಕ್ಕೆ ತಿರುಗೇಟು ನೀಡಿ 110 ರನ್‌ಗಳಿಗೆ ಉರುಳಿಸಿತು. ಹೀಗಾಗಿ ಪಂದ್ಯ ಮೊದಲ ದಿನವೇ ಕುತೂಹಲಕರ ಸ್ಥಿತಿಗೆ ತಲುಪಿತು.

ದಿನದಾಟದ ಕೊನೆಗೆ ಆಸ್ಟ್ರೇಲಿಯಾ ಎರಡನೇ ಇನಿಂಗ್ಸ್‌ನಲ್ಲಿ ವಿಕೆಟ್‌ ನಷ್ಟವಿಲ್ಲದೇ 4 ರನ್ ಗಳಿಸಿದ್ದು, ಒಟ್ಟಾರೆ 46 ರನ್ ಮುಂದಿದೆ. ಟ್ರಾವಿಸ್‌ ಹೆಡ್ ಜೊತೆ ಆಟ ಆರಂಭಿಸಿದ ಬೌಲರ್ ಸ್ಕಾಟ್ ಬೋಲ್ಯಾಂಡ್ ಅಜೇಯ 4 ರನ್ ಗಳಿಸಿದ್ದಾರೆ.

ಹಸಿರಿನಿಂದ ಕೂಡಿದ್ದ ಎಂಸಿಜಿ ಪಿಚ್‌ನಲ್ಲಿ ಟಾಸ್‌ ಗೆದ್ದ ಇಂಗ್ಲೆಂಡ್ ನಾಯಕ ಬೆನ್‌ ಸ್ಟೋಕ್ಸ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. 94,199 ಪ್ರೇಕ್ಷಕರು ಹಾಜರಿದ್ದು, ಇದು ಈ ಕ್ರೀಡಾಂಗಣದಲ್ಲಿ ಅತಿ ಹೆಚ್ಚು ಎನಿಸಿತು. 2015ರ ಏಕದಿನ ವಿಶ್ವಕಪ್‌ ಫೈನಲ್‌ಗೆ 93,013 ಪ್ರೇಕ್ಷಕರು ಸೇರಿದ್ದು ಈ ಹಿಂದಿನ ದಾಖಲೆಯಾಗಿತ್ತು.

ADVERTISEMENT

ಜೋಶ್ ಟಂಗ್‌ (45ಕ್ಕೆ5) ನೇತೃತ್ವದಲ್ಲಿ ಇಂಗ್ಲೆಂಡ್‌ ವೇಗಿಗಳು ನಾಯಕನ ನಿರ್ಧಾರ ಸಮರ್ಥಿಸುವಂತೆ  ಬೌಲಿಂಗ್ ಮಾಡಿದರು. ಆತಿಥೇಯ ತಂಡ 45.2 ಓವರುಗಳಲ್ಲಿ ಆಲೌಟ್ ಆಯಿತು. ಕೆಳಕ್ರಮಾಂಕದಲ್ಲಿ ಮೈಕೆಲ್ ನೆಸೆರ್‌ 35 ರನ್ (49ಎ, 4X7) ಗಳಿಸಿದ್ದೇ ತಂಡದ ಪರ ಅತಿ ಹೆಚ್ಚಿನ ವೈಯಕ್ತಿಕ ಕಾಣಿಕೆಯಾಯಿತು.

ಇಂಗ್ಲೆಂಡ್ ತಂಡದ ಸಂತಸ ಹೆಚ್ಚು ಕಾಲ ಉಳಿಯಲಿಲ್ಲ. ವೇಗದ ಬೌಲರ್ ನೆಸೆರ್ (45ಕ್ಕೆ4)  ಬೌಲಿಂಗ್‌ನಲ್ಲೂ ಮಿಂಚಿದರು. ಇಂಗ್ಲೆಂಡ್ 30 ಓವರುಗಳ ಒಳಗೆ 110 ರನ್ನಿಗೆ ಆಲೌಟ್ ಆಯಿತು. ಮಿಚೆಲ್ ಸ್ಟಾರ್ಕ್ ಎರಡು ಮತ್ತು ಬೋಲ್ಯಾಂಡ್ ಮೂರು ವಿಕೆಟ್‌ಗಳನ್ನು ಗಳಿಸಿದರು.

ಮೊದಲ ನಾಲ್ಕು ಕ್ರಮಾಂಕದ ಆಟಗಾರರು– ಕ್ರಾಲಿ (5), ಡಕೆಟ್‌ (2), ಬೆಥೆಲ್ (1), ರೂಟ್ (0)– ಮೊತ್ತ 16 ರನ್‌ಗಳಾಗುವಷ್ಟರಲ್ಲಿ ನಿರ್ಗಮಿಸಿದ್ದರು. ಹ್ಯಾರಿ ಬ್ರೂಕ್ (41) ಮತ್ತು ಅಟ್ಕಿನ್ಸನ್ (28) ಅವರ ಆಟದಿಂದ ಇಂಗ್ಲೆಂಡ್ ನೂರರ ಗಡಿ ದಾಟಲು ಸಾಧ್ಯವಾಯಿತು.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಆಸ್ಟ್ರೇಲಿಯಾ: 45.2 ಓವರುಗಳಲ್ಲಿ 152 (ಉಸ್ಮಾನ್ ಖ್ವಾಜಾ 20, ಅಲೆಕ್ಸ್ ಕ್ಯಾರಿ 20, ಮೈಕೆಲ್ ನೇಸರ್ 35; ಗಸ್‌ ಅಟ್ಕಿನ್ಸನ್ 28ಕ್ಕೆ2, ಜೋಶ್ ಟಂಗ್ 45ಕ್ಕೆ5); ಇಂಗ್ಲೆಂಡ್‌: 29.5 ಓವರುಗಳಲ್ಲಿ 110 (ಹ್ಯಾರಿ ಬ್ರೂಕ್ 41, ಗಸ್‌ ಅಟ್ಕಿನ್ಸನ್‌ 28; ಮಿಚೆಲ್‌ ಸ್ಟಾರ್ಕ್ 23ಕ್ಕೆ2, ಮೈಕೆಲ್ ನೆಸೆರ್‌ 45ಕ್ಕೆ4, ಸ್ಕಾಟ್‌ ಬೋಲ್ಯಾಂಡ್ 30ಕ್ಕೆ3); ಎರಡನೇ ಇನಿಂಗ್ಸ್‌: ಆಸ್ಟ್ರೇಲಿಯಾ: 1 ಓವರಿನಲ್ಲಿ ವಿಕೆಟ್‌ ನಷ್ಟವಿಲ್ಲದೇ 4

ಎಂಸಿಜಿಯಲ್ಲಿ 1998ರ ನಂತರ ಐದು ವಿಕೆಟ್‌ ಪಡೆದ ಇಂಗ್ಲೆಂಡ್‌ನ ಮೊದಲ ಬೌಲರ್ ಎಂಬ ಶ್ರೇಯ ಟಂಗ್ ಅವರದಾಯಿತು. 1998ರಲ್ಲಿ ಡೀನ್ ಹ್ಯಾಡ್ಲಿ ಮತ್ತು ಡ್ಯಾರೆನ್ ಗಾಫ್‌ ಪಂಚ ವಿಕೆಟ್‌ಗಳ ಗುಚ್ಛ ಪಡೆದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.