ADVERTISEMENT

ಆ್ಯಷಸ್: ಜೋ ರೂಟ್ ದಾಖಲೆ ಹೊರತಾಗಿಯೂ ಮುಗ್ಗರಿಸಿದ ಇಂಗ್ಲೆಂಡ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 26 ಡಿಸೆಂಬರ್ 2021, 12:46 IST
Last Updated 26 ಡಿಸೆಂಬರ್ 2021, 12:46 IST
ಜೋ ರೂಟ್
ಜೋ ರೂಟ್   

ಮೆಲ್ಬರ್ನ್: ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಆ್ಯಷಸ್ ಟೆಸ್ಟ್ ಸರಣಿ ಮೂರನೇ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲೇ ಇಂಗ್ಲೆಂಡ್ ತಂಡವು ಮುಗ್ಗರಿಸಿದೆ.

ಈ ನಡುವೆ ಆಕರ್ಷಕ ಅರ್ಧಶತಕ ಗಳಿಸಿರುವ ಆಂಗ್ಲರ ಪಡೆಯ ನಾಯಕ ಜೋ ರೂಟ್, ಮಗದೊಂದು ಸ್ಮರಣೀಯ ದಾಖಲೆ ಬರೆದಿದ್ದಾರೆ.

ಟೆಸ್ಟ್ ಕ್ರಿಕೆಟ್‌ನಲ್ಲಿ ಕ್ಯಾಲೆಂಡರ್ ವರ್ಷವೊಂದರಲ್ಲಿ ಅತಿ ಹೆಚ್ಚು ರನ್ ಗಳಿಸಿದ ಕಪ್ತಾನ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.

ADVERTISEMENT

ಈ ಮೂಲಕ ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಗ್ರೇಮ್ ಸ್ಮಿತ್ ದಾಖಲೆಯನ್ನು ಮುರಿದರು. ಪ್ರಸಕ್ತ ಸಾಲಿನಲ್ಲಿ ರೂಟ್ ಇದುವರೆಗೆ 1,680 ರನ್ ಕಲೆ ಹಾಕಿದ್ದಾರೆ. ಅತ್ತ ಸ್ಮಿತ್ 2008ರಲ್ಲಿ 1,656 ರನ್ ಗಳಿಸಿದ್ದರು.

ಇನ್ನು ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಟೆಸ್ಟ್ ಬ್ಯಾಟರ್ ಸಾಲಿನಲ್ಲಿ ರೂಟ್ ಮೂರನೇ ಸ್ಥಾನದಲ್ಲಿದ್ದಾರೆ. ಈ ಪಟ್ಟಿಯನ್ನು ಪಾಕಿಸ್ತಾನದ ಮಾಜಿ ಬ್ಯಾಟರ್ ಮೊಹಮ್ಮದ್ ಯೂಸುಫ್ (1,788 ರನ್, 2006ರಲ್ಲಿ) ಹಾಗೂ ವೆಸ್ಟ್‌ಇಂಡೀಸ್‌ನ ಮಾಜಿ ದಿಗ್ಗಜ ವಿವಿಯನ್ ರಿಚರ್ಡ್ಸ್ (1,710 ರನ್, 1976ರಲ್ಲಿ) ಮುನ್ನಡೆಸುತ್ತಿದ್ದಾರೆ.

ಮೆಲ್ಬರ್ನ್‌ನಲ್ಲಿ ನಡೆಯುತ್ತಿರುವ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಇಂಗ್ಲೆಂಡ್ ಕೇವಲ 185 ರನ್ನಿಗೆ ಆಲೌಟ್ ಆಗಿದೆ. ಆಸೀಸ್ ಪರ ನಾಯಕ ಪ್ಯಾಟ್ ಕಮಿನ್ಸ್ ಹಾಗೂ ನಥನ್ ಲಯನ್ ತಲಾ ಮೂರು ವಿಕೆಟ್‌ಗಳನ್ನು ಹಂಚಿಕೊಂಡರು.ಬಳಿಕ ಉತ್ತರ ನೀಡಿದ ಆಸೀಸ್, ಮೊದಲ ದಿನದಂತ್ಯಕ್ಕೆ ಒಂದು ವಿಕೆಟ್ ನಷ್ಟಕ್ಕೆ 61 ರನ್ ಗಳಿಸಿದೆ.

ದಿಟ್ಟ ಹೋರಾಟ ತೋರಿದ ರೂಟ್ ಆಕರ್ಷಕ ಅರ್ಧಶತಕ ಗಳಿಸಿದರು. 82 ಎಸೆತಗಳನ್ನು ಎದುರಿಸಿದ ರೂಟ್ ನಾಲ್ಕು ಬೌಂಡರಿ ನೆರವಿನಿಂದ 50 ರನ್ ಗಳಿಸಿದರು.

ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾ 2-0 ಅಂತರದ ಮುನ್ನಡೆ ಕಾಯ್ದುಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.