
ಅಡಿಲೇಡ್: ದಿಟ್ಟ ಶತಕ ಬಾರಿಸಿದ ಅಲೆಕ್ಸ್ ಕ್ಯಾರಿ ಮತ್ತು ಅರ್ಧಶತಕ ಗಳಿಸಿದ ಉಸ್ಮಾನ್ ಖ್ವಾಜಾ ಅವರು ಬುಧವಾರ ಇಲ್ಲಿ ಆರಂಭವಾದ ಆ್ಯಷಸ್ ಸರಣಿಯ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ಆಸರೆಯಾದರು.
ಟಾಸ್ ಗೆದ್ದ ಆತಿಥೇಯ ತಂಡವು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆದರೆ ಇಂಗ್ಲೆಂಡ್ ತಂಡದ ವೇಗಿ ಜೋಫ್ರಾ ಆರ್ಚರ್ (29ಕ್ಕೆ3) ಮತ್ತು ಬ್ರೈಡನ್ ಕಾರ್ಸ್ (70ಕ್ಕೆ2) ಅವರ ದಾಳಿಗೆ ಆಸ್ಟ್ರೇಲಿಯಾದ ಆರಂಭಿಕರು ಎಡವಿದರು. ಇದರಿಂದಾಗಿ 94 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡಿತು.
ಈ ಹಂತದಲ್ಲಿ ಅಲೆಕ್ಸ್ (106; 143ಎ, 4X8, 6X1) ಮತ್ತು ಉಸ್ಮಾನ್ (82; 126ಎ, 4X10) ಐದನೇ ವಿಕೆಟ್ ಜೊತೆಯಾಟದಲ್ಲಿ 91 ರನ್ ಸೇರಿಸಿ ಇನಿಂಗ್ಸ್‌ಗೆ ಚೇತರಿಕೆ ನೀಡಿದರು. ಇದರಿಂದಾಗಿ ತಂಡವು ದಿನದಾಟದ ಮುಕ್ತಾಯಕ್ಕೆ 83 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 326 ರನ್ ಗಳಿಸಿತು.
ಸ್ಟೀವ್ ಸ್ಮಿತ್ ಅವರು ಅನಾರೋಗ್ಯದಿಂದಾಗಿ ಕಣಕ್ಕಿಳಿಯಲಿಲ್ಲ. ಟಾಸ್ ಹಾಕುವುದಕ್ಕಿಂತ ಸ್ವಲ್ಪ ಹೊತ್ತಿನ ಮುಂಚೆಯಷ್ಟೇ ಸ್ಮಿತ್ ಅವರ ಬದಲು ಉಸ್ಮಾನ್ ಕಣಕ್ಕಿಳಿಯುವ ನಿರ್ಧಾರವನ್ನು ತಂಡ ಪ್ರಕಟಿಸಿತು. ಗುರುವಾರ ತಮ್ಮ 39ನೇ ಜನ್ಮದಿನ ಆಚರಿಸಿಕೊಳ್ಳಲಿರುವ ಉಸ್ಮಾನ್ ಈ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡರು. 5 ರನ್ ಗಳಿಸಿದ ಉಸ್ಮಾನ್ ಅವರಿಗೆ ಒಂದು ‘ಜೀವದಾನ’ ಕೂಡ ಲಭಿಸಿತ್ತು. ಆದರೆ ಶತಕದ ಸನಿಹದಲ್ಲಿದ್ದಾಗ ಉಸ್ಮಾನ್ ಅವರು ವಿಲ್ ಜ್ಯಾಕ್ಸ್ ಎಸೆತವನ್ನು ಸ್ಲಾಗ್ ಸ್ವೀಪ್ ಮಾಡಿ ಜೋಷ್ ಟಂಗ್ ಅವರಿಗೆ ಕ್ಯಾಚಿತ್ತರು.
ಕ್ಯಾರಿ ಮತ್ತು ಜೋಷ್ ಆರನೇ ವಿಕೆಟ್ ಜೊತೆಯಾಟದಲ್ಲಿ 59 (81ಎ) ರನ್ ಸೇರಿಸಿದರು. ಅಲೆಕ್ಸ್ ಶತಕ ಗಳಿಸಿದ ನಂತರ ವಿಲ್ ಜ್ಯಾಕ್ಸ್ ಬೌಲಿಂಗ್‌ನಲ್ಲಿ ಔಟಾದರು. ಇಂಗ್ಲಿಸ್ ಅವರನ್ನು ಜೋಷ್ ಟಂಗ್ ಕ್ಲೀನ್‌ಬೌಲ್ಡ್ ಮಾಡಿದರು.
ಆದರೆ ಕೊನೆಯ ಹಂತದಲ್ಲಿ ಮಿಚೆಲ್ ಸ್ಟಾರ್ಕ್ (ಔಟಾಗದೇ 33) ಮತ್ತು ಅಲೆಕ್ಸ್ ಅವರು 9ನೇ ವಿಕೆಟ್ ಜತೆಯಾಟದಲ್ಲಿ 50 ರನ್ ಸೇರಿಸಿದರು. ಸ್ಟಾರ್ಕ್ ಮತ್ತು ನೇಥನ್ ಲಯನ್ ಅವರು ಕ್ರೀಸ್‌ನಲ್ಲಿದ್ದಾರೆ.
ಶ್ರದ್ಧಾಂಜಲಿ: ಬೋಂಡಿ ಬೀಚ್‌ನಲ್ಲಿ ಈಚೆಗೆ ನಡೆದ ಭಯೋತ್ಪಾದನಾ ದಾಳಿಯಲ್ಲಿ ಮೃತಪಟ್ಟವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಪಂದ್ಯ ಆರಂಭಕ್ಕೂ ಮುನ್ನ ನಡೆದ ಕಾರ್ಯಕ್ರಮದಲ್ಲಿ ಜಾನಪದ ಗಾಯಕ ಜಾನ್ ವಿಲಿಯಮ್ಸನ್ ಅವರು ‘ಟ್ರೂ ಬ್ಲ್ಯೂ’ ಗೀತೆಯನ್ನು ಪ್ರಸ್ತುತಪಡಿಸಿದರು. ಆಟಗಾರರು, ಪ್ರೇಕ್ಷಕರು ಒಂದು ನಿಮಿಷ ಮೌನಾಚರಣೆ ಮಾಡಿದರು. ಧ್ವಜಗಳನ್ನು ಅರ್ಧ ಎತ್ತರಕ್ಕೆ ಆರೋಹಣ ಮಾಡಲಾಯಿತು.
ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಆಸ್ಟ್ರೇಲಿಯಾ: 83 ಓವರ್‌ಗಳಲ್ಲಿ 8ಕ್ಕೆ326 (ಉಸ್ಮಾನ್ ಖ್ವಾಜಾ 82, ಅಲೆಕ್ಸ್ ಕ್ಯಾರಿ 106, ಜೋಶ್ ಇಂಗ್ಲಿಸ್ 32, ಜೋಫ್ರಾ ಆರ್ಚರ್ 29ಕ್ಕೆ3, ಬ್ರೈಡನ್ ಕಾರ್ಸ್ 70ಕ್ಕೆ2, ವಿಲ್ ಜ್ಯಾಕ್ಸ್ 105ಕ್ಕೆ2)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.