
ಸಿಡ್ನಿ: ಜೋ ರೂಟ್ ಮತ್ತು ಹ್ಯಾರಿ ಬ್ರೂಕ್ ಅವರಿಬ್ಬರ ಶತಕದ ಜೊತೆಯಾಟವು ಭಾನುವಾರ ಆರಂಭವಾದ ಆ್ಯಷಸ್ ಟೆಸ್ಟ್ ಸರಣಿಯ ಕೊನೆಯ ಪಂದ್ಯದ ಮೊದಲ ದಿನದಾಟದಲ್ಲಿ ಇಂಗ್ಲೆಂಡ್ ತಂಡಕ್ಕೆ ಆಸರೆಯಾಯಿತು.
ಈಚೆಗೆ ನಡೆದ ಬೊಂಡಿ ಭಯೋತ್ಪಾದನಾ ದಾಳಿಯಲ್ಲಿ ಮೃತರಾದವರಿಗೆ ಶ್ರದ್ಧಾಂಜಲಿ ಸಲ್ಲಿಸುವುದರೊಂದಿಗೆ ಪಂದ್ಯ ಆರಂಭವಾಯಿತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಇಂಗ್ಲೆಂಡ್ ತಂಡವು 57 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡಿತು. ಈ ಹಂತದಲ್ಲಿ ಜೊತೆಯಾದ ರೂಟ್ ಮತ್ತು ಬ್ರೂಕ್ ಅವರು ಮುರಿಯದ ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 154ರನ್ ಸೇರಿಸಿದರು. ಮಂದಬೆಳಕಿನ ಕಾರಣಕ್ಕೆ ದಿನದಾಟ ಮುಕ್ತಾಯವಾದಾಗ ಇಂಗ್ಲೆಂಡ್ 45 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 211 ರನ್ ಗಳಿಸಿತು. ರೂಟ್ (ಬ್ಯಾಟಿಂಗ್ 72; 103ಎ) ಮತ್ತು ಬ್ರೂಕ್ (ಬ್ಯಾಟಿಂಗ್ 78; 92ಎ) ಕ್ರೀಸ್‌ನಲ್ಲಿದ್ದಾರೆ. ಐದು ಪಂದ್ಯಗಳ ಈ ಸರಣಿಯಲ್ಲಿ ಇಂಗ್ಲೆಂಡ್ ತಂಡದಿಂದ ಹೊರಹೊಮ್ಮಿದ ಅತ್ಯಧಿಕ ರನ್‌ಗಳ ಜೊತೆಯಾಟ ಇದಾಗಿದೆ. ರೂಟ್ ಅವರಿಗೆ ಇದು ಟೆಸ್ಟ್ ಕ್ರಿಕೆಟ್‌ನಲ್ಲಿ 67ನೇ ಅರ್ಧಶತಕ. ಹ್ಯಾರಿಗೆ 15ನೇಯದ್ದು.
ಪ್ರವಾಸಿ ಬಳಗವು ಆರಂಭದಲ್ಲಿಯೇ ಎಡವಿತ್ತು. ಬೆನ್ ಡಕೆಟ್ (27; 24ಎ, 4X5) ಮತ್ತು ಜಾಕ್ ಕ್ರಾಲಿ (16; 29ಎ, 4X3) ಮೊದಲ ವಿಕೆಟ್ ಜೊತೆಯಾಟದಲ್ಲಿ 35 ರನ್ ಸೇರಿಸಿದರು. ಮಿಚೆಲ್ ಸ್ಟಾರ್ಕ್ ಅವರು 7ನೇ ಓವರ್‌ನಲ್ಲಿ ಡಕೆಟ್ ವಿಕೆಟ್ ಗಳಿಸಿ ಜೊತೆಯಾಟ ಮುರಿದರು. ನಾಲ್ಕು ಓವರ್‌ಗಳ ನಂತರ ಮೈಕೆಲ್ ನೆಸರ್ ಅವರು ಬೀಸಿದ ಎಲ್‌ಬಿಡಬ್ಲ್ಯು ಬಲೆಯಲ್ಲಿ ಕ್ರಾಲಿ ಬಿದ್ದರು. ಆತಿಥೇಯ ವೇಗಿ ಸ್ಕಾಟ್ ಬೊಲ್ಯಾಂಡ್ ಎಸೆತದಲ್ಲಿ ಅಲೆಕ್ಸ್ ಕ್ಯಾರಿಗೆ ಕ್ಯಾಚ್ ಕೊಟ್ಟ ಜೇಕಬ್ ಬೆಥೆಲ್ ಆಟಕ್ಕೆ ತೆರೆ ಬಿತ್ತು. ಈ ಹೊತ್ತಿನಲ್ಲಿ ರೂಟ್ ಮತ್ತು ಬ್ರೂಕ್ ಎಚ್ಚರಿಕೆಯ ಆಟವಾಡುತ್ತ ಇನಿಂಗ್ಸ್‌ಗೆ ಚೇತರಿಕೆ ನೀಡಿದರು.
ಸರಣಿಯ ಕಳೆದ ನಾಲ್ಕು ಪಂದ್ಯಗಳಲ್ಲಿ ಆಸ್ಟ್ರೇಲಿಯಾ 3 ಗೆದ್ದಿದೆ. ಒಂದರಲ್ಲಿ ಮಾತ್ರ ಇಂಗ್ಲೆಂಡ್ ಗೆದ್ದಿತ್ತು.
ಸಂಕ್ಷಿಪ್ತ ಸ್ಕೋರು: ಇಂಗ್ಲೆಂಡ್: 45 ಓವರ್‌ಗಳಲ್ಲಿ 3ಕ್ಕೆ211 (ಬೆನ್ ಡಕೆಟ್ 27, ಜೋ ರೂಟ್ ಬ್ಯಾಟಿಂಗ್ 72, ಹ್ಯಾರಿ ಬ್ರೂಕ್ ಬ್ಯಾಟಿಂಗ್ 78, ಮಿಚೆಲ್ ಸ್ಟಾರ್ಕ್ 53ಕ್ಕೆ1, ಮೈಕೆಲ್ ನೆಸೆರ್ 36ಕ್ಕೆ1, ಸ್ಕಾಟ್ ಬೊಲ್ಯಾಂಡ್ 48ಕ್ಕೆ1) ವಿರುದ್ಧ ಆಸ್ಟ್ರೇಲಿಯಾ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.