ನವದೆಹಲಿ: ಏಷ್ಯಾ ಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ಪಂದ್ಯದ ಟಾಸ್ ವೇಳೆ ಎರಡು ದೇಶಗಳ ನಾಯಕರು ಹಸ್ತಲಾಘವ ಮಾಡಲೇಬೇಕು ಎಂದು ಒತ್ತಾಯಿಸಲು ಮ್ಯಾಚ್ ರೆಫ್ರಿ ಆ್ಯಂಡಿ ಪೈಕ್ರಾಫ್ಟ್ ಅವರು ಶಾಲಾ ಶಿಕ್ಷಕ ಅಥವಾ ಪ್ರಾಂಶುಪಾಲರಲ್ಲ. ಅವರ ಕೆಲಸವನ್ನು ಅವರು ಸರಿಯಾಗಿ ನಿರ್ವಹಿಸಿದ್ದಾರೆ ಎಂದು ಭಾರತದ ಮಾಜಿ ಕ್ರಿಕೆಟಿಗ ರವಿಚಂದ್ರ ಅಶ್ವಿನ್ ಅವರು ಪೈಕ್ರಾಫ್ಟ್ ಬೆಂಬಲಕ್ಕೆ ನಿಂತಿದ್ದಾರೆ
ಪಾಕಿಸ್ತಾನ ವಿರುದ್ಧದ ಏಷ್ಯಾ ಕಪ್ ಲೀಗ್ ಪಂದ್ಯದ ಟಾಸ್ ವೇಳೆ ಹಾಗೂ ಪಂದ್ಯದ ನಂತರ ಭಾರತೀಯ ಆಟಗಾರರು ಪಾಕ್ ಆಟಗಾರರ ಜೊತೆ ಹಸ್ತಲಾಘವ ಮಾಡಲು ನಿರಾಕರಿಸಿದ್ದರು. ಈ ಘಟನೆಯು ಕ್ರೀಡಾ ಸ್ಫೂರ್ತಿಯ ವಿರುದ್ಧವಾಗಿದ್ದು, ಮ್ಯಾಚ್ ರೆಫ್ರಿ ಆ್ಯಂಡಿ ಪೈಕ್ರಾಫ್ಟ್ ಅವರು ಭಾರತದ ಪರವಾಗಿದ್ದಾರೆ ಎಂದು ಪಾಕ್ ಆರೋಪಿಸಿತ್ತು.
‘ಭಾರತವು ಪಂದ್ಯಕ್ಕೂ ಮುನ್ನವೇ ತನ್ನ ನಿಲುವನ್ನು ಮ್ಯಾಚ್ ರೆಫ್ರಿ ಅವರ ಬಳಿ ಹೇಳಿಕೊಂಡಿದೆ. ಭಾರತೀಯ ಆಟಗಾರರು ಪಾಕಿಸ್ತಾನಿಯರೊಂದಿಗೆ ಹಸ್ತಲಾಘವ ಮಾಡುವುದನ್ನು ಆ್ಯಂಡಿ ಪೈಕ್ರಾಫ್ಟ್ ತಪ್ಪಿಸುವ ಮೂಲಕ, ಅದನ್ನು ನೋಡುವುದರಿಂದ ನಮೆಲ್ಲರನ್ನು ಉಳಿಸಿದ್ದಾರೆ. ಪಂದ್ಯ ಸೋತ ಬಳಿಕ ಪಾಕಿಸ್ತಾನವು ನಾಟಕವಾಡುವುದರಲ್ಲಿ ಅರ್ಥವಿಲ್ಲ’ ಎಂದು ಅಶ್ವಿನ್ ಅವರು ತಮ್ಮ ಯ್ಯೂಟ್ಯೂಬ್ ಚಾನೆಲ್ ‘ಆ್ಯಶ್ ಕಿ ಬಾತ್’ನಲ್ಲಿ ಹೇಳಿಕೊಂಡಿದ್ದಾರೆ.
ಆ್ಯಂಡಿ ಪೈಕ್ರಾಫ್ಟ್ ಅವರನ್ನು ಟೂರ್ನಿಯಿಂದ ಹೊರಗಿಡಬೇಕು, ಪಾಕ್ ಪಂದ್ಯಗಳಿಗಾದರೂ ಅವರನ್ನು ಹೊರಗಿಡಬೇಕು ಎಂದು ಪಾಕಿಸ್ತಾನವು ಐಸಿಸಿ ಬಳಿ ಮನವಿ ಮಾಡಿಕೊಂಡಿತ್ತು. ಇಲ್ಲದಿದ್ದರೆ ಟೂರ್ನಿಯಿಂದ ಹಿಂದೆ ಸರಿಯುವುದಾಗಿ ಕೂಡ ಪಾಕ್ ಹೇಳಿಕೊಂಡಿತ್ತು. ಆದರೆ, ಪಾಕ್‌ನ ಎರಡೂ ಮನವಿಯನ್ನು ಐಸಿಸಿ ನಿರಾಕರಿಸಿತ್ತು.
ಭಾರತ ಮತ್ತು ಪಾಕಿಸ್ತಾನ ವಿರುದ್ಧ ಇಂದು(ಸೆ.21) ನಡೆಯಲಿರುವ ಸೂಪರ್–4 ಪಂದ್ಯದಲ್ಲೂ ಆ್ಯಂಡಿ ಪೈಕ್ರಾಫ್ಟ್ ಅವರೇ ಮ್ಯಾಚ್ ರೆಫ್ರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.