ADVERTISEMENT

ಮ್ಯಾಚ್ ವಿನ್ನರ್ ಅಶ್ವಿನ್‌: ಅನಿಲ್ ಕುಂಬ್ಳೆ ಶ್ಲಾಘನೆ

ಪಿಟಿಐ
Published 17 ಮಾರ್ಚ್ 2024, 13:45 IST
Last Updated 17 ಮಾರ್ಚ್ 2024, 13:45 IST
ಅನಿಲ್ ಕುಂಬ್ಳೆ 
ಅನಿಲ್ ಕುಂಬ್ಳೆ    

ಚೆನ್ನೈ: ಆಫ್‌ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು ತಮಗೆ ಎದುರಾದ ಯಾವುದೇ ಸವಾಲಿನಿಂದಲೂ ಎದೆಗುಂದಲಿಲ್ಲ. ಯಾವುದೇ ಸವಾಲೂ ತಮ್ಮ ಪ್ರಗತಿಯನ್ನು ಕುಂಠಿತಗೊಳಿಸಲು ಆಸ್ಪದ ನೀಡಲಿಲ್ಲ. ಅದರಿಂದಾಗಿ ‘ಗೆಲುವಿನ ರೂವಾರಿ’ಯಾಗಿ ಬೆಳೆದರು ಎಂದು ಕ್ರಿಕೆಟಿಗ ಅನಿಲ್ ಕುಂಬ್ಳೆ ಶ್ಲಾಘಿಸಿದ್ಧಾರೆ.

ಲೆಗ್‌ಸ್ಪಿನ್ನರ್ ಕುಂಬ್ಳೆ (619) ಭಾರತದ ಅತ್ಯಧಿಕ ವಿಕೆಟ್ ಗಳಿಸಿದ ಬೌಲರ್ ಆಗಿದ್ದಾರೆ. ಅವರ ನಂತರದ ಸ್ಥಾನದಲ್ಲಿ ಅಶ್ವಿನ್ (516) ಇದ್ದಾರೆ. 

ಈಚೆಗೆ ಅಶ್ವಿನ್ 100ನೇ ಟೆಸ್ಟ್ ಪಂದ್ಯ ಆಡಿದರು. ಈ ಹಿನ್ನೆಲೆಯಲ್ಲಿ ತಮಿಳುನಾಡು ಕ್ರಿಕೆಟ್ ಸಂಸ್ಥೆ (ಟಿಎನ್‌ಸಿಎ)ಯು  ಅವರನ್ನು ಸನ್ಮಾನಿಸಿತು. ಈ ಕಾರ್ಯಕ್ರಮದಲ್ಲಿ ಕುಂಬ್ಳೆ ಮಾತನಾಡಿದರು. 

ADVERTISEMENT

‘ಭಾರತದಲ್ಲಿ ಒಂದು ಎತ್ತರದ ಸಾಧನೆಯನ್ನು ಮಾಡಿದ ನಂತರವೇ ಹೆಚ್ಚು ಸವಾಲುಗಳು ಇರುತ್ತವೆ. ಆ ಸಾಧನೆಯನ್ನು ನಿರಂತರವಾಗಿ ಮುಂದುವರಿಸಿಕೊಂಡು ಹೋಗುವುದು ಕಷ್ಟ.  ಯಾವಾಗಲೂ ಐದು ವಿಕೆಟ್‌ ಪಡೆಯಲೇಬೇಕು ಎಂಬ ಭಾವನೆ ಮೂಡುತ್ತದೆ. ಅದಕ್ಕಿಂತ ಕಡಿಮೆ ವಿಕೆಟ್‌ ಗಳಿಸುವುದು ವೈಫಲ್ಯವೆಂದೇ ಹೇಳಲಾಗುತ್ತದೆ. ಈ ಒತ್ತಡವನ್ನು ಅಶ್ವಿನ್ ಸಮರ್ಥವಾಗಿ ನಿರ್ವಹಿಸಿದ್ದಾರೆ’ ಎಂದು ಕುಂಬ್ಳೆ ಹೇಳಿದರು. 

‘ಒಬ್ಬ ಬೌಲರ್ ವಿಕೆಟ್‌ ಗಳಿಸುವುದು ತಂಡದ ಜಯಕ್ಕೆ ಕಾರಣವಾಗಬೇಕು.  ಆಗಷ್ಟೇ ಆ ಸಾಧನೆಗೆ ಅರ್ಥ ಬರುತ್ತದೆ. ಅಶ್ವಿನ್ ಅಂತಹ ಅರ್ಥಪೂರ್ಣ ಸಾಧಕ. ಅವರ ಸಾಧನೆಗಳ ಅಂಕಿ ಸಂಖ್ಯೆಯನ್ನು ನೋಡಿದರೆ ಅದು ಅರ್ಥವಾಗುತ್ತದೆ’ ಎಂದರು. 

‘ಬೌಲಿಂಗ್‌ ಅಷ್ಟೇ ಅಲ್ಲ. ಬ್ಯಾಟಿಂಗ್, ಫೀಲ್ಡಿಂಗ್ ಮೂಲಕವೂ ತಂಡಕ್ಕೆ ನೆರವಾಗುತ್ತಾರೆ. ಸೀಮಿತ ಓವರ್‌ಗಳ ಪಂದ್ಯಗಳಲ್ಲಿಯೂ ಅವರು ಬೌಲಿಂಗ್‌ನಲ್ಲಿ ಪ್ರಯೋಗಗಳನ್ನು ಮಾಡಲು ಹಿಂಜರಿಯುವುದಿಲ್ಲ. ಅವರು ಕೆಲವೊಮ್ಮೆ ಲೆಗ್‌ ಸ್ಪಿನ್ ಪ್ರಯೋಗಿಸಿದ್ದಾರೆ.  ಇದರಿಂದ ಅವರು ಎಷ್ಟು ಆತ್ಮವಿಶ್ವಾಸಿಯಾಗಿದ್ದಾರೆಂಬುದು ಅರ್ಥವಾಗುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.