ADVERTISEMENT

ತವರಿನಂಗಳದಲ್ಲಿ ಅಕ್ಷರ್ ಪಟೇಲ್‌ ಕಮಾಲ್

ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮಿಂಚಿದ ಅಶ್ವಿನ್: ತತ್ತರಿಸಿದ ಇಂಗ್ಲೆಂಡ್

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2021, 18:10 IST
Last Updated 24 ಫೆಬ್ರುವರಿ 2021, 18:10 IST
ಅಕ್ಷರ್ ಪಟೇಲ್ ಸಂಭ್ರಮ –ಪಿಟಿಐ ಚಿತ್ರ
ಅಕ್ಷರ್ ಪಟೇಲ್ ಸಂಭ್ರಮ –ಪಿಟಿಐ ಚಿತ್ರ   

ಅಹಮದಾಬಾದ್: ನರೇಂದ್ರ ಮೋದಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಬುಧವಾರ ಸಂಜೆ ಹೊನಲು ಬೆಳಕು ಚೆಲ್ಲುವ ಮುನ್ನವೇ ಎಡಗೈ ಸ್ಪಿನ್ನರ್ ಅಕ್ಷರ್ ಪಟೇಲ್ ಸ್ಪಿನ್ ಮೋಡಿಗೆ ಇಂಗ್ಲೆಂಡ್ ತಂಡವು ತತ್ತರಿಸಿತು.

ತಮ್ಮ ವೃತ್ತಿಜೀವನದ ದ್ವಿತೀಯ ಟೆಸ್ಟ್‌ ಪಂದ್ಯದಲ್ಲಿಯೂ ಐದು ವಿಕೆಟ್‌ಗಳ ಗೊಂಚಲು ಗಳಿಸಿದ ಅಕ್ಷರ್ (38ಕ್ಕೆ6) ಇಂಗ್ಲೆಂಡ್ ಎದುರಿನ ಸರಣಿಯ ಮೂರನೇ ಟೆಸ್ಟ್‌ನ ಮೊದಲ ದಿನವೇ ಭಾರತಕ್ಕೆ ಮುನ್ನಡೆ ತಂದುಕೊಟ್ಟರು.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಇಂಗ್ಲೆಂಡ್ ತಂಡವು 48.4 ಓವರ್‌ಗಳಲ್ಲಿ 112 ರನ್‌ಗಳಿಗೆ ಆಲೌಟ್ ಆಯಿತು. ಅದಕ್ಕುತ್ತರವಾಗಿ ಭಾರತ ತಂಡವು ದಿನದಾಟದ ಅಂತ್ಯಕ್ಕೆ ** ಓವರ್‌ಗಳಲ್ಲಿ ** ವಿಕೆಟ್‌ಗಳಿಗೆ ** ರನ್ ಗಳಿಸಿತು.

ADVERTISEMENT

ಮೊದಲ ಪೆಟ್ಟು ಕೊಟ್ಟ ಇಶಾಂತ್: ನೂರನೇ ಟೆಸ್ಟ್ ಪಂದ್ಯ ಆಡುತ್ತಿರುವ ಇಶಾಂತ್ ಶರ್ಮಾ ಇನಿಂಗ್ಸ್‌ನ ಮೂರನೇ ಓವರ್‌ನಲ್ಲಿ ಡಾಮ್ ಸಿಬ್ಲಿ ವಿಕೆಟ್ ಗಳಿಸುವ ಮೂಲಕ ತಂಡಕ್ಕೆ ಉತ್ತಮ ಆರಂಭ ಕೊಟ್ಟರು.

ಅಕ್ಷರ್ ಮೋಡಿ: ತವರಿನಂಗಳದಲ್ಲಿ ಆಡುವ ಅವಕಾಶ ಪಡೆದ ಅಕ್ಷರ್‌ ಏಳನೇ ಓವರ್‌ನಲ್ಲಿ ಮೊದಲ ಬೇಟೆಯಾಡಿದರು. ತಮ್ಮ ತವರು ರಾಜ್ಯದ ಅಭಿಮಾನಿಗಳ ಎದುರು ಜಾನಿ ಬೆಸ್ಟೊ ಅವರನ್ನು ಎಲ್‌ಬಿಡಬ್ಲ್ಯು ಬಲೆಗೆ ಕೆಡವಿದರು.

ನಿಧಾನಗತಿಯ ಮತ್ತು ನೇರ ಎಸೆತಗಳನ್ನೇ ಹೆಚ್ಚು ಪ್ರಯೋಗಿಸಲು ಆರಂಭಿಸಿದ ಅಕ್ಷರ್ ಯಶಸ್ಸು ಗಳಿಸಿದರು. ಬೆನ್ ಸ್ಟೋಕ್ಸ್‌ ಮತ್ತು ಅರ್ಧಶತಕ ಗಳಿಸಿದ ಜ್ಯಾಕ್ ಕ್ರಾಲಿ ಅವರನ್ನು ಎಲ್‌ಬಿಡಬ್ಲ್ಯು ಜಾಲದಲ್ಲಿ ಕೆಡವಿದರು. ಅದೇ ತಂತ್ರವನ್ನು ಮುಂದುವರಿಸಿದ ಅಕ್ಷರ್ ಮೋಡಿಗೆ ಜೋಫ್ರಾ ಆರ್ಚರ್ ಮತ್ತು ಬೆನ್ ಫೋಕ್ಸ್‌ ಕ್ಲೀನ್ ಬೋಲ್ಡ್‌ ಆದರು. ಸ್ಟುವರ್ಟ್‌ ಬ್ರಾಡ್ ಕೂಡ ಪಟೇಲ್ ಎಸೆತದಲ್ಲಿ ಜಸ್‌ಪ್ರೀತ್ ಬೂಮ್ರಾಗೆ ಕ್ಯಾಚಿತ್ತರು. ಅಕ್ಷರ್ ವೃತ್ತಿಜೀವನದ ಎರಡನೇ ಟೆಸ್ಟ್ ಇದಾಗಿದೆ. ಈಚೆಗೆ ಚೆನ್ನೈನಲ್ಲಿ ಪದಾರ್ಪಣೆ ಮಾಡಿದ್ದ ಪಂದ್ಯದಲ್ಲಿಯೂ ಐದು ವಿಕೆಟ್‌ಗಳ ಗೊಂಚಲು ಗಳಿಸಿದ್ದರು.

ಇನ್ನೊಂದು ಬದಿಯಲ್ಲಿ ಮಿಂಚಿದ ಆಫ್‌ಸ್ಪಿನ್ನರ್ ಅಶ್ವಿನ್ ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ (17; 37ಎ) ಅವರನ್ನು ಖೆಡ್ಡಾದಲ್ಲಿ ಕೆಡವಿದರು. ಒಲಿ ಪೋಪ್ ಮತ್ತು ಜ್ಯಾಕ್ ಲೀಚ್ ವಿಕೆಟ್‌ಗಳನ್ನು ಬುಟ್ಟಿಗೆ ಹಾಕಿಕೊಂಡರು. ಇರಿಂದಾಗಿ ಇಂಗ್ಲೆಂಡ್ ಅಲ್ಪಮೊತ್ತಕ್ಕೆ ಕುಸಿಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.