ಶಭಮನ್ ಗಿಲ್–ಅಭಿಷೇಕ್ ಶರ್ಮಾ
ದುಬೈ: ಪಾಕಿಸ್ತಾನ ವಿರುದ್ಧ ನಡೆದ ಸೂಪರ್ 4 ಹಂತದ ಪಂದ್ಯದಲ್ಲಿ ಭಾರತ ತಂಡ ಇನ್ನೂ 7 ಎಸೆತಗಳು ಬಾಕಿ ಇರುವಂತೆ ಜಯ ದಾಖಲಿಸಿದೆ. ಈ ಪಂದ್ಯದಲ್ಲಿ ಟೀಂ ಇಂಡಿಯಾ ಆರಂಭಿಕ ಆಟಗಾರರಾದ ಅಭಿಷೇಕ್ ಶರ್ಮಾ ಹಾಗೂ ಶುಭಮನ್ ಗಿಲ್ 105 ರನ್‌ಗಳ ಜೊತೆಯಾಟ ಆಡಿದರು. ಆ ಮೂಲಕ ಪಾಕಿಸ್ತಾನದ ವಿರುದ್ಧ ಟಿ–20ಐ ನಲ್ಲಿ ಭಾರತದ ಪರ ಅತಿ ಹೆಚ್ಚು ರನ್‌ಗಳ ಜೊತೆಯಾಟ ಆಡಿದ ಆರಂಭಿಕ ಜೋಡಿ ಎಂಬ ದಾಖಲೆ ಬರೆದರು.
ಇನ್ನು, ಟೀಂ ಇಂಡಿಯಾ ಆರಂಭಿಕ ಜೋಡಿಯ ಅಮೋಘ ಜೊತೆಯಾಟವನ್ನು ಕೊಂಡಾಡಿದ ನಾಯಕ ಸೂರ್ಯಕುಮಾರ್ ಯಾದವ್, ಗಿಲ್ ಹಾಗೂ ಅಭಿಷೇಕ್ ಇಬ್ಬರು ಮೈದಾನದ ಹೊರಗೂ ಒಳ್ಳೆಯ ಸ್ನೇಹಿತರು. ಅವರು ವಿಭಿನ್ನ ರೀತಿಯ ಆಟಗಾರರಾಗಿದ್ದಾರೆ. ತಂಡದಲ್ಲಿ ಈ ಇಬ್ಬರದ್ದು ಬೆಂಕಿ ಮತ್ತು ಮಂಜುಗಡ್ಡೆಯ ಸಂಯೋಜನೆಯಾಗಿದೆ ಎಂದು ಬಣ್ಣಿಸಿದರು.
ನಿನ್ನೆ (ಭಾನುವಾರ) ನಡೆದ ಪಂದ್ಯದಲ್ಲಿ ಅಭಿಷೇಕ್ ಶರ್ಮಾ 39 ಎಸೆತಗಳಲ್ಲಿ 74 ರನ್ ಗಳಿಸಿದರೆ ಶುಭಮನ್ ಗಿಲ್ 28 ಎಸೆತಗಳಲ್ಲಿ 47 ರನ್ ಸಿಡಿಸಿದರು. ಗಿಲ್ 3 ರನ್‌ಗಳ ಅಂತರದಲ್ಲಿ ತಮ್ಮ ಅರ್ಧಶತಕ ತಪ್ಪಿಸಿಕೊಂಡರು.
ಈ ಅಮೋಘ ಪ್ರದರ್ಶನದ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ನಾಯಕ ಸೂರ್ಯಕುಮಾರ್ ಯಾದವ್, ‘ಒಬ್ಬರು ಅತ್ಯುತ್ತಮವಾಗಿ ಬ್ಯಾಟಿಂಗ್ ಮಾಡುತ್ತಿರುವಾಗ, ಇನ್ನೊಬ್ಬರು ಅವರ ಬೆಂಬಲಕ್ಕೆ ನಿಂತು ಸ್ಟ್ರೈಕ್ ಬದಲಾಯಿಸಬೇಕು. ಉತ್ತಮ ಆರಂಭ ಸಿಗಬೇಕಾದರೆ ಇದು ಅಗತ್ಯ ಇತ್ತು. ಅವರು ಅದನ್ನು ಮಾಡಿದರು’ ಎಂದರು.
ಈ ಇಬ್ಬರು ಆಟಗಾರರು ಪಂಜಾಬ್ ಪರ ಅಂಡರ್–12 ಸಂದರ್ಭದಿಂದಲೂ ಒಟ್ಟಿಗೆ ಆಡುತ್ತಿದ್ದಾರೆ. ಹಾಗಾಗಿ ಅವರಿಗೆ ಎದುರಾಳಿಗಳ ಲೆಕ್ಕಾಚಾರ ಏನು? ಅವರನ್ನು ಹೇಗೆ ಎದುರಿಸಬೇಕು ಎಂಬುದನ್ನು ಬೇಗ ಅರ್ಥಮಾಡಿಕೊಳ್ಳುತ್ತಾರೆ. ಮಾತ್ರವಲ್ಲ ಈ ಇಬ್ಬರಿಗೂ ಸಂದರ್ಭಕ್ಕೆ ತಕ್ಕಂತೆ ಬ್ಯಾಟಿಂಗ್ ಮಾಡುವ ಸಾಮರ್ಥ್ಯವಿದೆ ಎಂದರು.
ಪಾಕಿಸ್ತಾನ ವಿರುದ್ಧದ ಪಂದ್ಯವನ್ನು ಗೆಲ್ಲಬೇಕಾದರೆ ನಮಗೆ ಉತ್ತಮ ಆರಂಭ ಸಿಗಬೇಕಿತ್ತು. ಅದು ಸಿಕ್ಕಿದ್ದರಿಂದಲೇ ಗೆಲುವು ಸುಲಭವಾಯಿತು. ಎಂದು ಟೀಂ ಇಂಡಿಯಾ ಆರಂಭಿಕ ಆಟಗಾರರ ಪ್ರದರ್ಶನವನ್ನು ನಾಯಕ ಸೂರ್ಯಕುಮಾರ್ ಹೊಗಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.