ADVERTISEMENT

ಏಷ್ಯಾ ಕಪ್ | ಪಾಕ್ ಮೂಲದ ಎಸಿಸಿ ಅಧ್ಯಕ್ಷನಿಂದ ಪ್ರಶಸ್ತಿ ಸ್ವೀಕರಿಸಲಿದೆಯೇ ಭಾರತ ?

ಪಿಟಿಐ
Published 27 ಸೆಪ್ಟೆಂಬರ್ 2025, 13:19 IST
Last Updated 27 ಸೆಪ್ಟೆಂಬರ್ 2025, 13:19 IST
   

ದುಬೈ: ಭಾರತ ಮತ್ತು ಪಾಕಿಸ್ತಾನ ನಡುವಿನ ಏಷ್ಯಾ ಕಪ್‌ ಫೈನಲ್‌ ಪಂದ್ಯಕ್ಕೂ ಮುನ್ನ ಹೊಸ ತೊಂದರೆಯೊಂದು ತಲೆದೋರಿದೆ. ಒಂದು ವೇಳೆ ಭಾರತವು ಫೈನಲ್‌ ಪಂದ್ಯದಲ್ಲಿ ಗೆದ್ದರೆ, ಪಾಕ್‌ ಸಚಿವರಿಂದ ಪ್ರಶಸ್ತಿ ಸ್ವೀಕರಿಸಲಿದೆಯೇ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ.

ಭಾರತ ವಿರೋಧಿ ಧೋರಣೆಯನ್ನು ಹೊಂದಿರುವ ಪಾಕಿಸ್ತಾನದ ಸಚಿವ ಹಾಗೂ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ(ಪಿಸಿಬಿ) ಅಧ್ಯಕ್ಷರಾಗಿರುವ ಮೊಹ್ಸಿನ್ ನಖ್ವಿ ಅವರು ಏಷ್ಯನ್‌ ಕ್ರಿಕೆಟ್‌ ಕೌನ್ಸಿಲ್‌(ಎಸಿಸಿ) ಅಧ್ಯಕ್ಷರಾಗಿದ್ದು, ಭಾರತ ಮತ್ತು ಪಾಕ್‌ ನಡುವೆ ಭಾನುವಾರ(ಸೆ.27) ನಡೆಯಲಿರುವ ಫೈನಲ್‌ ಪಂದ್ಯದಲ್ಲಿ ಭಾಗವಹಿಸಲಿದ್ದಾರೆ.

ಆಪರೇಷನ್‌ ಸಿಂಧೂರ ಬಳಿಕ ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದ್ದು, ಮೈದಾನದಲ್ಲಿ ಪಾಕ್‌ ತಂಡದೊಂದಿಗೆ ಹಸ್ತಲಾಘವ ಮಾಡಲು ಭಾರತೀಯ ಆಟಗಾರರು ನಿರಾಕರಿಸಿದ್ದರು. ಇದೀಗ ಎಸಿಸಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರಿಗೆ ಪಂದ್ಯದ ವೇಳೆ ಉಭಯ ದೇಶಗಳ ಆಟಗಾರರ ನಡುವೆ ಹಸ್ತಲಾಘವ ಮಾಡುವ ಹಾಗೂ ಪ‍ಂದ್ಯದ ಬಳಿಕ ಪ್ರಶಸ್ತಿ ನೀಡುವ ಅಧಿಕಾರವಿದೆ. ಪಾಕ್‌ ಆಟಗಾರರೊಂದಿಗೆ ಹಸ್ತಲಾಘವ ಮಾಡಲು ನಿರಾಕರಿಸಿದ್ದ ಭಾರತೀಯ ಆಟಗಾರರು, ಪಾಕ್‌ ಸಚಿವರಿಂದ ಪ್ರಶಸ್ತಿ ಸ್ವೀಕರಿಸಲಿದ್ದಾರೆಯೇ ಎನ್ನುವ ಪ‍್ರಶ್ನೆ ಎದುರಾಗಿದೆ.

ADVERTISEMENT

ಪಾಕಿಸ್ತಾನ ವಿರುದ್ಧದ ಗೆಲುವನ್ನು ಭಾರತೀಯ ಸೇನೆಗೆ ಅರ್ಪಿಸಿದ್ದಕ್ಕೆ, ಭಾರತ ಕ್ರಿಕೆಟ್‌ ತಂಡದ ನಾಯಕ ಸೂರ್ಯಕುಮಾರ್‌ ಯಾದವ್‌ ಅವರನ್ನು ಫೈನಲ್‌ ಪಂದ್ಯದಿಂದ ಹೊರಗಿಡುವಂತೆ ಮೊಹ್ಸಿನ್ ನಖ್ವಿ ಅವರು ಎಸಿಸಿ ಮೇಲೆ ಒತ್ತಡ ಹೇರಿದ್ದರು.

ಎಸಿಸಿ ಮುಖ್ಯಸ್ಥರಾಗಿರುವ ಮೊಹ್ಸಿನ್ ನಖ್ವಿ ಅವರು ಪ್ರಶಸ್ತಿ ಸಮಾರಂಭದಲ್ಲಿ ಭಾಗವಹಿಸುವುದು ಬಹುತೇಕ ಖಚಿತವಾಗಿದ್ದು, ಭಾರತೀಯ ಆಟಗಾರರು ನಖ್ವಿ ಅವರಿಂದ ಪ್ರಶಸ್ತಿ ಸ್ವೀಕರಿಸಲಿದ್ದಾರೆಯೇ ಎನ್ನುವ ಕುರಿತು ಬಿಸಿಸಿಐ ಯಾವುದೇ ಬಹಿರಂಗ ಪ್ರಕಟಣೆಯನ್ನು ಮಾಡಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.