ADVERTISEMENT

Asia Cup: ಲಂಕಾ ವಿರುದ್ಧ ಪಾಕಿಸ್ತಾನಕ್ಕೆ 5 ವಿಕೆಟ್ ಗೆಲುವು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 23 ಸೆಪ್ಟೆಂಬರ್ 2025, 19:47 IST
Last Updated 23 ಸೆಪ್ಟೆಂಬರ್ 2025, 19:47 IST
<div class="paragraphs"><p>ಶಾಹಿನ್ ಶಾ ಅಫ್ರಿದಿ</p></div>

ಶಾಹಿನ್ ಶಾ ಅಫ್ರಿದಿ

   

ಅಬುಧಾಬಿ: ಬೌಲರ್‌ಗಳ ಸಂಘಟಿತ ಪ್ರಯತ್ನದಿಂದ ಪಾಕಿಸ್ತಾನ ತಂಡವು ಏಷ್ಯಾ ಕಪ್ ಟಿ20 ಕ್ರಿಕೆಟ್‌ ಟೂರ್ನಿಯ ಸೂಪರ್ ಫೋರ್ ಪಂದ್ಯದಲ್ಲಿ ಮಂಗಳವಾರ ಶ್ರೀಲಂಕಾ ತಂಡವನ್ನು ಐದು ವಿಕೆಟ್‌ಗಳಿಂದ ಮಣಿಸಿತು. ಇದರೊಂದಿಗೆ ಲಂಕಾ ಪಡೆಯ ಫೈನಲ್‌ ಕನಸು ಬಹುತೇಕ ಕಮರಿದೆ. 

ಲಂಕಾ ನೀಡಿದ್ದ 134 ರನ್‌ಗಳ ಗುರಿ ಬೆನ್ನಟ್ಟಿದ ಪಾಕ್‌ ತಂಡಕ್ಕೆ  ಸಾಹೀಬ್‌ ಝಾದ ಫರ್ಹಾನ್ (24;15ಎ) ಮತ್ತು ಫಕಾರ್‌ ಖಾನ್‌ (17;19) ಅವರು ಮೊದಲ ವಿಕೆಟ್‌ಗೆ 45 ರನ್‌ ಸೇರಿಸಿ ಉತ್ತಮ ಆರಂಭ ಒದಗಿಸಿದರು. ಆದರೆ, 80 ರನ್‌ ಗಳಿಸುವಷ್ಟರಲ್ಲಿ ಐದು ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ‌

ADVERTISEMENT

ನಂತರದಲ್ಲಿ  ಹುಸೇನ್ ತಲತ್ (ಔಟಾಗದೇ 32;30ಎ) ಮತ್ತು ಮೊಹಮ್ಮದ್‌ ನವಾಜ್‌ (ಔಟಾಗದೇ 38;24ಎ) ಎಚ್ಚರಿಕೆಯ ಆಟವಾಡಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಪಾಕ್‌ ತಂಡ 18 ಓವರ್‌ಗಳಲ್ಲಿ 5 ವಿಕೆಟ್‌ಗೆ 138 ರನ್‌ ಗಳಿಸಿ ಸಂಭ್ರಮಿಸಿತು.

ಅಫ್ರಿದಿ ಮಿಂಚು:

ಇದಕ್ಕೂ ಮೊದಲು ಟಾಸ್‌ ಗೆದ್ದ ಪಾಕ್‌ ಫೀಲ್ಡಿಂಗ್ ಆಯ್ದುಕೊಂಡಿತು. ಶಾಹಿನ್ ಶಾ ಅಫ್ರಿದಿ (28ಕ್ಕೆ3) ಅವರು ಆರಂಭ ಆಟಗಾರರ ವಿಕೆಟ್‌ಗಳನ್ನು ಬೇಗನೇ ಪಡೆದು ಪೆಟ್ಟು ನೀಡಿದರು. ಮಧ್ಯಮ ಹಂತದ ಓವರುಗಳಲ್ಲಿ ಹುಸೇನ್ ತಲತ್‌ (18ಕ್ಕೆ2) ಕಡಿವಾಣ ಹಾಕಿದರು.

ಆದರೆ, ಹೆಚ್ಚು ಪರಿಣಾಮಕಾರಿ ಎನಿಸಿದವರು 27 ವರ್ಷ ವಯಸ್ಸಿನ ಲೆಗ್‌ಬ್ರೇಕ್ ಬೌಲರ್ ಅಬ್ರಾರ್ ಅಹ್ಮದ್ (4–0–8–1) ಅವರು ವೈವಿಧ್ಯಮಯ ಎಸೆತಗಳ ಮೂಲಕ ಲಂಕಾ
ಬ್ಯಾಟರ್‌ಗಳನ್ನು ಕಟ್ಟಿಹಾಕಿದರು.

ಸೊಗಸಾಗಿ ಆಡಿದ ಕಮಿಂದು ಮೆಂಡಿಸ್‌ 44 ಎಸೆತಗಳಲ್ಲಿ 50 ರನ್ (4x3, 6x2) ಬಾರಿಸಿ ಒಂಟಿಯಾಗಿ ಪ್ರತಿರೋಧ ತೋರಿದರು. ಹೀಗಾಗಿ ತಂಡವು 8 ವಿಕೆಟ್‌ಗೆ 133 ರನ್‌ ಗಳಿಸಿತ್ತು.

ಸೂಪರ್‌ ಫೋರ್‌ ಹಂತದಲ್ಲಿ ಲಂಕಾ ತಂಡಕ್ಕೆ ಇದು ಸತತ ಎರಡನೇ ಸೋಲಾಗಿದೆ. ಇದಕ್ಕೂ ಮೊದಲು ಬಾಂಗ್ಲಾದೇಶ ವಿರುದ್ಧ ಪರಾಭವಗೊಂಡಿತ್ತು. ಪಾಕ್‌ ತಂಡವು ಭಾರತ ವಿರುದ್ಧ ಸೋಲು ಕಂಡಿತ್ತು.

ಸ್ಕೋರುಗಳು:

ಶ್ರೀಲಂಕಾ: 20 ಓವರುಗಳಲ್ಲಿ 8ಕ್ಕೆ133 (ಚರಿತ್ ಅಸಲಂಕ 20, ಕಮಿಂದು ಮೆಂಡಿಸ್ 50; ಶಾಹಿನ್ ಶಾ ಅಫ್ರಿದಿ 28ಕ್ಕೆ3, ಹ್ಯಾರಿಸ್ ರವುಫ್‌ 37ಕ್ಕೆ2, ಹುಸೇನ್ ತಲತ್ 18ಕ್ಕೆ2)

ಪಾಕಿಸ್ತಾನ: 18 ಓವರ್‌ಗಳಲ್ಲಿ 5 ವಿಕೆಟ್‌ಗೆ 138 (ಸಾಹೀಬ್‌ ಝಾದ ಫರ್ಹಾನ್ 24, ಹುಸೇನ್ ತಲತ್ ಔಟಾಗದೇ 32, ಮೊಹಮ್ಮದ್‌ ನವಾಜ್‌ ಔಟಾಗದೇ 38; ಮಹೀಶ ತೀಕ್ಷಣ 24ಕ್ಕೆ 2, ವನಿಂದು ಹಸರಂಗ 27ಕ್ಕೆ 2). ಫಲಿತಾಂಶ: ಪಾಕಿಸ್ತಾನಕ್ಕೆ 5 ವಿಕೆಟ್‌ಗಳ ಜಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.