ಏಷ್ಯಾ ಕಪ್
(ಚಿತ್ರ ಕೃಪೆ: X/@ACCMedia1)
ದುಬೈ: ಗುಂಪು ಹಂತದಲ್ಲಿ ಅಜೇಯವಾಗುಳಿದಿರುವ ಶ್ರೀಲಂಕಾ ತಂಡ, ಶನಿವಾರ ನಡೆಯುವ ಏಷ್ಯಾ ಕಪ್ ಟಿ20 ಟೂರ್ನಿಯ ಸೂಪರ್ ಫೋರ್ ಹಂತದ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವನ್ನು ಎದುರಿಸಲಿದೆ.
ಚರಿತ್ ಅಸಲಂಕ ಸಾರಥ್ಯದ ಲಂಕಾ ತಂಡ ‘ಬಿ’ ಗುಂಪಿನಲ್ಲಿ ಆಡಿದ ಮೂರೂ ಪಂದ್ಯಗಳಲ್ಲಿ ಜಯಗಳಿಸಿದೆ. ಬಾಂಗ್ಲಾದೇಶ, ಟಿ20 ವಿಶ್ವಕಪ್ ಸೆಮಿಫೈನಲ್ ತಲುಪಿದ್ದ ಅಫ್ಗಾನಿಸ್ತಾನ ತಂಡವನ್ನು ಸೋಲಿಸಿದೆ.
ಆದರೆ ಮಧ್ಯಮ ಕ್ರಮಾಂಕ ಅಸ್ಥಿರವಾಗಿರುವುದು ದ್ವೀಪರಾಷ್ಟ್ರಕ್ಕೆ ಚಿಂತೆ ಮೂಡಿಸಿದೆ. ದುರ್ಬಲ ಹಾಂಗ್‌ಕಾಂಗ್ ವಿರುದ್ಧವೂ ಮಧ್ಯಮ ಕ್ರಮಾಂಕದಲ್ಲಿ ವೈಫಲ್ಯ ಅನುಭವಿಸಿತ್ತು.
ಪಥುಮ್ ನಿಸಾಂಕ 3 ಪಂದ್ಯಗಳಲ್ಲಿ 124 ರನ್ ಸೇರಿಸಿ ಲಂಕಾ ಪರ ಮಿಂಚಿದ್ದಾರೆ. ಕುಸಲ್ ಮೆಂಡಿಸ್ ಅವರು ಅಫ್ಗಾನಿಸ್ತಾನ ವಿರುದ್ಧ ಅರ್ಧಶತಕ ಬಾರಿಸಿದ್ದಾರೆ. ಆದರೆ ನಾಯಕ ಅಸಲಂಕ, ಸೀನಿಯರ್ ಬ್ಯಾಟರ್‌ಗಳಾದ ಕುಸಲ್ ಪೆರೀರಾ, ದಸುನ ಶನಕ ಅವರಿಂದ ತಂಡ ಉಪಯುಕ್ತ ಕಾಣಿಕೆಯ ನಿರೀಕ್ಷೆಯಲ್ಲಿದೆ.
ತಂಡದ ಬೌಲಿಂಗ್ ಮತ್ತು ಫಿಲ್ಡಿಂಗ್ ಉತ್ತಮವಾಗಿದೆ. ನುವಾನ್ ತುಷಾರ ಐದು ವಿಕೆಟ್ ಗಳಿಸಿದ್ದಾರೆ. ದುಷ್ಮಂತ ಚಮೀರ ಸಹ ಯಶಸ್ಸು ಗಳಿಸಿದ್ದಾರೆ. ಗುರುವಾರ ರಾತ್ರಿ ತಂದೆ ನಿಧನರಾದ ಸುದ್ದಿ ತಿಳಿದು ಸ್ಪಿನ್ ಆಲ್‌ರೌಂಡರ್, 22 ವರ್ಷ ವಯಸ್ಸಿನ ದುನಿತ್ ವೆಲ್ಲಾಳಗೆ ತವರಿಗೆ ಮರಳಿದ್ದಾರೆ.
ಲಂಕಾದ ದಯೆಯಿಂದ ಬಾಂಗ್ಲಾ ಈ ಹಂತಕ್ಕೆ ತಲುಪಿದೆ. ಲಂಕಾ ಗುರುವಾರ ಅಫ್ಗಾನ್ ಪಡೆಗೆ ಸೋತಿದ್ದಲ್ಲಿ ಬಾಂಗ್ಲಾ ಹೊರಬೀಳುತಿತ್ತು. ಬಾಂಗ್ಲಾ ತಂಡದ ಬ್ಯಾಟರ್‌ಗಳು ಸ್ಥಿರ ಪ್ರದರ್ಶನ ನೀಡಿಲ್ಲ. ಲಿಟನ್ ದಾಸ್, ಸೈಫ್ ಹಸನ್, ತಂಜಿದ್ ಹಸನ್, ತೌಹಿಕ್ ಹೃದಯ್ ಪರದಾಡುತ್ತಿದ್ದಾರೆ.
ಕ್ಯಾಚಿಂಗ್ ಸಹ ಕಳಪೆಯಾಗಿದೆ. ಬೌಲರ್‌ಗಳೂ ಪರಿಣಾಮಕಾಯಾಗಿಲ್ಲ. ನಸುಮ್ ಅಹ್ಮದ್ ಮತ್ತು ಮುಸ್ತಫಿಜುರ್ ರಹಮಾನ್ ಅವರಿಂದ ತಂಡ ಉತ್ತಮ ಬೌಲಿಂಗ್ ನಿರೀಕ್ಷಿಸುತ್ತಿದೆ.
ಪಂದ್ಯ ಆರಂಭ: ರಾತ್ರಿ 8.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.