ADVERTISEMENT

ಏಷ್ಯಾಕಪ್ ಟ್ರೋಫಿ ವಿವಾದ : ನಖ್ವಿ ಭೇಟಿಯಾಗಿ ಚರ್ಚಿಸಲಾಗಿದೆ ಎಂದ BCCIನ ಸೈಕಿಯಾ

ಪಿಟಿಐ
Published 8 ನವೆಂಬರ್ 2025, 11:31 IST
Last Updated 8 ನವೆಂಬರ್ 2025, 11:31 IST
<div class="paragraphs"><p>ಏಷ್ಯಾ ಕಪ್ ಗೆದ್ದ ಸಂಭ್ರಮದಲ್ಲಿ ಭಾರತ ತಂಡ</p></div>

ಏಷ್ಯಾ ಕಪ್ ಗೆದ್ದ ಸಂಭ್ರಮದಲ್ಲಿ ಭಾರತ ತಂಡ

   

ಚಿತ್ರ ಕೃಪೆ: @yogeshgoswami_

ನವದೆಹಲಿ: ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ಮಂಡಳಿಗಳು ಏಷ್ಯಾ ಕಪ್ ಟ್ರೋಫಿ ವಿವಾದವನ್ನು ತಣ್ಣಗಾಗಿಸಲು ಮುಂದಾಗಿವೆ. ಆ ನಿಟ್ಟಿನಲ್ಲಿ ತಾವೇ ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿಯವರನ್ನು ಭೇಟಿಯಾಗಿ ಮಾತುಕತೆ ನಡೆಸಿರುವುದಾಗಿ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಪಿಟಿಐಗೆ ತಿಳಿಸಿದ್ದಾರೆ.

ADVERTISEMENT

ದುಬೈನಲ್ಲಿ ನಡೆದ ಐಸಿಸಿ ಸಭೆಯ ಹೊರತಾಗಿ ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿಯವರನ್ನು ಪ್ರತ್ಯೇಕವಾಗಿ ಭೇಟಿಯಾದ ಬಳಿಕ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಅವರು ಪ್ರತಿಕ್ರಿಯೆ ನೀಡಿದ್ದಾರೆ.

‘ನಾನು ಐಸಿಸಿಯ ಅನೌಪಚಾರಿಕ ಮತ್ತು ಔಪಚಾರಿಕ ಸಭೆಯ ಭಾಗವಾಗಿದ್ದೆ. ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಕೂಡ ಹಾಜರಿದ್ದರು. ಸಭೆಯ ಸಂದರ್ಭದಲ್ಲಿ ನಾವು ಏಷ್ಯಾ ಕಪ್ ಟ್ರೋಫಿ ಕುರಿತು ಚರ್ಚಿಸಲು ಸಾಧ್ಯವಾಗಲಿಲ್ಲ’.

‘ಆದರೆ, ನಮ್ಮ ಕೋರಿಕೆಯ ಮೇರೆಗೆ ಐಸಿಸಿ ಹಿರಿಯ ಅಧಿಕಾರಿಯೊಬ್ಬರು ಈ ವಿಚಾರವಾಗಿ ನಮ್ಮ ಹಾಗೂ ಪಿಸಿಬಿ ಮುಖ್ಯಸ್ಥರ ಜೊತೆ ಪ್ರತ್ಯೇಕ ಸಭೆಗೆ ಅನುಕೂಲ ಮಾಡಿಕೊಟ್ಟರು’ ಎಂದು ಸೈಕಿಯಾ ಶನಿವಾರ ಪಿಟಿಐಗೆ ತಿಳಿಸಿದರು.

‘ಮಾತುಕತೆಯ ಪ್ರಕ್ರಿಯೆ ಪ್ರಾರಂಭಿಸುವುದು ನಿಜಕ್ಕೂ ಒಳ್ಳೆಯ ಬೆಳವಣಿಗೆ. ಐಸಿಸಿ ಮಂಡಳಿ ಸಭೆಯ ಹೊರತಾಗಿ ನಡೆದ ಸಭೆಯಲ್ಲಿ ಎರಡೂ ಕಡೆಯವರು ಸೌಹಾರ್ದಯುತವಾಗಿ ಭಾಗವಹಿಸಿದ್ದೇವೆ. ಶೀಘ್ರದಲ್ಲೇ ಪರಿಹಾರ ಕಂಡುಕೊಳ್ಳಲಾಗುವುದು’ ಎಂದು ಅವರು ಹೇಳಿದರು.

ಸದ್ಯ ಏಷ್ಯಾ ಕಪ್ ಟ್ರೋಫಿಯನ್ನು ದುಬೈನಲ್ಲಿರುವ ಎಸಿಸಿ ಪ್ರಧಾನ ಕಚೇರಿಯಲ್ಲಿ ಇರಿಸಲಾಗಿದೆ. ಅಲ್ಲಿನ ಸಿಬ್ಬಂದಿಗೆ ನಖ್ವಿ ಅವರು ತಮ್ಮ ಅನುಮತಿಯಿಲ್ಲದೆ ಅದನ್ನು ಸ್ಥಳಾಂತರಿಸದಂತೆ ಸೂಚನೆ ನೀಡಿದ್ದಾರೆ.

‘ಎರಡೂ ಕಡೆಯವರು ಆದಷ್ಟು ಬೇಗ ಸಮಸ್ಯೆಯನ್ನು ಪರಿಹರಿಸಲು ಏನಾದರೂ ಕ್ರಮ ಕೈಗೊಳ್ಳುತ್ತಾರೆ. ಈಗ ವಿವಾದ ಸ್ವಲ್ಪ ತಣ್ಣಗಾಗಿದೆ. ಹಾಗಾಗಿ ವಿವಿಧ ಪರಿಹಾರ ಕ್ರಮಗಳು ನಮ್ಮ ಮುಂದಿವೆ’ ಎಂದು ಸೈಕಿಯಾ ತಿಳಿಸಿದ್ದಾರೆ.

ಸೆಪ್ಟೆಂಬರ್ 28ರಂದು ನಡೆದ ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು ಸೋಲಿಸಿ ಚಾಂಪಿಯನ್ ಆದ ಭಾರತ ತಂಡ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಅಧ್ಯಕ್ಷರಾಗಿರುವ ನಖ್ವಿ ಕೈಯಿಂದ ಟ್ರೋಫಿ ಪಡೆಯಲು ನಿರಾಕರಿಸಿತ್ತು. ಈ ಹಿನ್ನೆಲೆಯಲ್ಲಿ ನಖ್ವಿ ಅವರು ಏಷ್ಯಾ ಕಪ್ ಟ್ರೋಫಿಯನ್ನು ಭಾರತಕ್ಕೆ ಪ್ರದಾನ ಮಾಡದೆ ತಮ್ಮ ಜೊತೆಗೆ ತೆಗೆದುಕೊಂಡು ಹೋಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.