ಟ್ರೋಫಿ ಇಲ್ಲದೆ ಸಂಭ್ರಮಿಸಿದ್ದ ಭಾರತ ತಂಡದ ಆಟಗಾರರು
-ಎಕ್ಸ್ ಚಿತ್ರ (ಬಿಸಿಸಿಐ)
ದುಬೈ: ಏಷ್ಯಾ ಕಪ್ ಗೆದ್ದ ಭಾರತ ತಂಡಕ್ಕೆ ಟ್ರೋಫಿ ನೀಡದಿರುವ ಕ್ರಮಕ್ಕೆ ಮಂಗಳವಾರ ನಡೆದ ಏಷ್ಯನ್ ಕ್ರಿಕೆಟ್ ಮಂಡಳಿ (ಎಸಿಸಿ) ವಾರ್ಷಿಕ ಮಹಾಸಭೆಯಲ್ಲಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತೀವ್ರ ಆಕ್ಷೇಪ ವ್ಯಕ್ತಪಡಿಸಿತು. ಆದರೆ, ಎಸಿಸಿ ಅಧ್ಯಕ್ಷ ಮೊಹ್ಸಿನ್ ನಖ್ವಿ ತನ್ನ ಹಠವನ್ನು ಸಡಿಲಿಸಿಲ್ಲ.
ಎಸಿಸಿ ವಾರ್ಷಿಕ ಮಹಾಸಭೆಯಲ್ಲಿ ಬಿಸಿಸಿಐ ಪರ ಉಪಾಧ್ಯಕ್ಷ ರಾಜೀವ್ ಶುಕ್ಲಾ ಮತ್ತು ಮಾಜಿ ಖಜಾಂಚಿ ಆಶಿಶ್ ಶೇಲರ್ ಭಾಗವಹಿಸಿದ್ದರು.
ಏಷ್ಯಾ ಕಪ್ ಟ್ರೋಫಿ ಈಗಲೂ ಎಸಿಸಿ ಕಚೇರಿಯಲ್ಲಿದೆ. ಅದು ವಿಜೇತ ತಂಡಕ್ಕೆ ಯಾವಾಗ ಸಿಗಲಿದೆ ಎಂಬ ಬಗ್ಗೆ ಇನ್ನೂ ಸ್ಪಷ್ಟತೆಯಿಲ್ಲ.
ಪಾಕಿಸ್ತಾನ ಸರ್ಕಾರದಲ್ಲಿ ಸಚಿವ ಮತ್ತು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷರೂ ಆಗಿರುವ ನಖ್ವಿ ಅವರಿಂದ ಟ್ರೋಫಿ ಪಡೆಯಲು ಭಾರತ ನಿರಾಕರಿಸಿತ್ತು. ಎಸಿಸಿ ಅಧ್ಯಕ್ಷರಾಗಿ ಟ್ರೋಫಿ ಪ್ರದಾನ ಮಾಡುವುದು ತಮ್ಮ ಹಕ್ಕು ಎಂದು ಪ್ರತಿಪಾದಿಸಿದ ನಕ್ವಿ ಅವರು ಟ್ರೋಫಿಯೊಡನೆ ಹೊರಟಿದ್ದರು.
‘ಟ್ರೋಫಿಯನ್ನು ವಿಜೇತ ತಂಡಕ್ಕೆ ಹಸ್ತಾಂತರಿಸದಿರುವ ಬಗ್ಗೆ ಮತ್ತು ಪಂದ್ಯಾನಂತರದ ಪ್ರಶಸ್ತಿ ಪ್ರದಾನ ಸಮಾರಂಭದ ವೇಳೆ ಎಸಿಸಿ ಅಧ್ಯಕ್ಷರು ನಡೆಸಿದ ಹೈಡ್ರಾಮಾದ ಬಗ್ಗೆ ಎಸಿಸಿ ಸಭೆಯಲ್ಲಿ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿತು’ ಎಂದು ಎಸಿಸಿ ಮೂಲವೊಂದು ಪಿಟಿಐಗೆ ತಿಳಿಸಿದೆ.
‘ಟ್ರೋಫಿಯನ್ನು ವಿಜೇತ ತಂಡಕ್ಕೆ ಹಸ್ತಾಂತರಿಸಬೇಕು ಎಂಬುದಾಗಿ ಶುಕ್ಲಾ ಸ್ಪಷ್ಟವಾಗಿ ಹೇಳಿದರು. ಅದು ಎಸಿಸಿ ಟ್ರೋಫಿಯಾಗಿದ್ದು, ಯಾವುದೇ ವ್ಯಕ್ತಿಗೆ ಸೇರಿದ್ದಲ್ಲ ಎಂದು ಅವರು ಪ್ರತಿಪಾದಿಸಿದರು’ ಎಂದು ಮೂಲ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.