ಪಾಕಿಸ್ತಾನ ನಾಯಕ ಸಲ್ಮಾನ್ ಅಘಾ ಹಾಗೂ ಯುನೈಟೆಡ್ ಅರಬ್ ಎಮಿರೇಟ್ಸ್ ನಾಯಕ ಮುಹಮ್ಮದ್ ವಸೀಮ್
ಕೃಪೆ: @EmiratesCricket
ದುಬೈ: ಪ್ರಮುಖ ಬ್ಯಾಟರ್‌ಗಳ ವೈಫಲ್ಯದಿಂದ ಹಿನ್ನಡೆ ಅನುಭವಿಸಿದ ಪಾಕಿಸ್ತಾನ ತಂಡ, ಏಷ್ಯಾ ಕಪ್ ಟಿ20 ಕ್ರಿಕೆಟ್ ಟೂರ್ನಿಯ ಯುಎಇ ವಿರುದ್ಧದ ಪಂದ್ಯದಲ್ಲಿ ಸಾಧಾರಣ ಮೊತ್ತ ಕಲೆಹಾಕಿದೆ.
ಒಂದು ತಾಸು ವಿಳಂಬವಾಗಿ ಆರಂಭವಾದ ಪಂದ್ಯದಲ್ಲಿ ಟಾಸ್ ಗೆದ್ದ ಯುಎಇ ನಾಯಕ ಮುಹಮ್ಮದ್ ವಸೀಮ್, ಎದುರಾಳಿಯನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದರು. ನಾಯಕನ ನಿರ್ಧಾರವನ್ನು ಸಮರ್ಥಿಸಿಕೊಳ್ಳುವಂತೆ ಆಡಿದ ಬೌಲರ್‌ಗಳು, ಪಾಕ್ ಪಡೆಗೆ ಆರಂಭದಲ್ಲೇ ಪೆಟ್ಟು ಕೊಟ್ಟರು.
ತಂಡದ ಮೊತ್ತ 9 ರನ್ ಆಗುವಷ್ಟರಲ್ಲೇ ಪಾಕಿಸ್ತಾನ ತಂಡದ ಆರಂಭಿಕರಿಬ್ಬರನ್ನೂ ಪೆವಿಲಿಯನ್‌ಗೆ ಅಟ್ಟಿದ ಯುಎಇ, ಆರಂಭಿಕ ಯಶಸ್ಸು ಸಾಧಿಸಿತು. ಈ ಹಂತದಲ್ಲಿ ಜೊತೆಯಾದ ಅನುಭವಿ ಫಖರ್ ಜಮಾನ್ ಮತ್ತು ನಾಯಕ ಸಲ್ಮಾನ್ ಅಘಾ, ಮೂರನೇ ವಿಕೆಟ್ ಪಾಲುದಾರಿಕೆಯಲ್ಲಿ 61 ರನ್ ಸೇರಿಸಿದರು. ಜಮಾನ್ (50 ರನ್) ಅರ್ಧಶತಕ ಗಳಿಸಿದರೆ, ಸಲ್ಮಾನ್ 20 ರನ್ ಗಳಿಸಿದರು.
ಕೊನೆಯಲ್ಲಿ ಗುಡುಗಿದ ಶಾಹೀನ್ ಅಫ್ರಿದಿ, (14 ಎಸೆತ, ಅಜೇಯ 29 ರನ್) ತಂಡದ ಮೊತ್ತವನ್ನು 150ರ ಸನಿಹಕ್ಕೆ ಕೊಂಡೊಯ್ದರು. ಉಳಿದವರಿಂದ ಸಾಮರ್ಥ್ಯಕ್ಕೆ ತಕ್ಕ ಆಟ ಮೂಡಿಬರಲಿಲ್ಲ. ಹೀಗಾಗಿ, ಪಾಕ್ ಪಡೆ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 146 ರನ್ ಗಳಿಸಲಷ್ಟೇ ಸಾಧ್ಯವಾಯಿತು.
ಯುಎಇ ಪರ ಜುನೈದ್ ಸಿದ್ಧಿಕಿ ನಾಲ್ಕು ವಿಕೆಟ್ ಪಡೆದರೆ, ಸಿಮ್ರನ್‌ಜಿತ್ ಸಿಂಗ್ ಮೂರು ವಿಕೆಟ್ ಕಿತ್ತರು. ಇನ್ನೊಂದು ವಿಕೆಟ್ ಧ್ರುವ್ ಪರಾಷರ್ ಪಾಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.