ADVERTISEMENT

ಚುಟುಕು ಕ್ರಿಕೆಟ್: ಮಹಾರಾಜ ಟ್ರೋಫಿ ಟೂರ್ನಿಗೆ ವೇದಿಕೆ ಸಿದ್ಧ

ಆಗಸ್ಟ್ 7ರಿಂದ 26ರವರೆಗೆ ಚುಟುಕು ಕ್ರಿಕೆಟ್

​ಪ್ರಜಾವಾಣಿ ವಾರ್ತೆ
Published 16 ಜುಲೈ 2022, 18:32 IST
Last Updated 16 ಜುಲೈ 2022, 18:32 IST
ಟ್ರೋಫಿ ಅನಾವರಣಗೊಳಿಸಿದ ಕೆಎಸ್‌ಸಿಎ ಅಧ್ಯಕ್ಷ ರೋಜರ್ ಬಿನ್ನಿ –ಪ್ರಜಾವಾಣಿ ಚಿತ್ರ
ಟ್ರೋಫಿ ಅನಾವರಣಗೊಳಿಸಿದ ಕೆಎಸ್‌ಸಿಎ ಅಧ್ಯಕ್ಷ ರೋಜರ್ ಬಿನ್ನಿ –ಪ್ರಜಾವಾಣಿ ಚಿತ್ರ   

ಬೆಂಗಳೂರು:ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಆಶ್ರಯದಲ್ಲಿ ಮಹಾರಾಜ ಟ್ರೋಫಿ ಟಿ20 ಕ್ರಿಕೆಟ್ ಟೂರ್ನಿಯನ್ನು ಆಗಸ್ಟ್ 7ರಿಂದ 26ರವರೆಗೆ ಆಯೋಜಿಸಲಿದೆ.

ಆದರೆ ಇದು ಕರ್ನಾಟಕ ಪ್ರೀಮಿಯರ್ ಲೀಗ್ ಮಾದರಿಯ ಫ್ರ್ಯಾಂಚೈಸಿ ಲೀಗ್ ಅಲ್ಲ. ಪ್ರಾಯೋಜಕತ್ವ ಆಧಾರಿತ ಟಿ20 ಟೂರ್ನಿಯಾಗಿದೆ. ಆಟಗಾರರ ಆಯ್ಕೆಯೂ ಡ್ರಾಫ್ಟ್‌ ಮೂಲಕ ನಡೆಯಲಿದೆ. ಟೂರ್ನಿಯ ಆಯೋಜನೆ ಸಂಪೂರ್ಣ ಹೊಣೆಯು ಕೆಎಸ್‌ಸಿಎದ್ದೇ ಆಗಲಿದೆ.

ಶನಿವಾರ ನಡೆದ ಪತ್ರಿಕಾಗೋಷ್ಟಿಯಲ್ಲಿ ಈ ನೂತನ ಟೂರ್ನಿಯ ಟ್ರೋಫಿಯನ್ನು ಕೆಎಸ್‌ಸಿಎ ಅಧ್ಯಕ್ಷ ರೋಜರ್ ಬಿನ್ನಿ ಅನಾವರಣಗೊಳಿಸಿದರು.

ADVERTISEMENT

‘ಕ್ರಿಕೆಟ್‌ನ ಹೊಸ ಮಾದರಿಗಳ ಟೂರ್ನಿಆಯೋಜಿಸುವಲ್ಲಿ ರಾಜ್ಯ ಸಂಸ್ಥೆ ಸದಾ ಮುಂಚೂಣಿಯಲ್ಲಿದೆ. ಈ ಟೂರ್ನಿಯಿಂದ ಗ್ರಾಮಾಂತರ ಭಾಗದ ಆಟಗಾರರಿಗೆ ಹೆಚ್ಚಿನ ಅವಕಾಶಗಳು ದೊರೆಯಲಿವೆ’ ಎಂದು ಭಾರತ ತಂಡದ ಮಾಜಿ ಆಟಗಾರರೂ ಆಗಿರುವ ಬಿನ್ನಿ ಹೇಳಿದರು.

ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಶಿವಮೊಗ್ಗ, ರಾಯಚೂರು ಮತ್ತು ಮಂಗಳೂರಿನ ತಂಡಗಳು ಟೂರ್ನಿಯಲ್ಲಿ ಆಡಲಿವೆ.

‘35 ವರ್ಷ ವಯೋಮಿತಿಯೊಳಗಿನ ಹಾಗೂ ಕೆಎಸ್‌ಸಿಎ ನೋಂದಾಯಿತ ಆಟಗಾರರು ಈ ಟೂರ್ನಿಯಲ್ಲಿ ಆಡುವ ಅವಕಾಶ ಪಡೆಯಲಿದ್ದಾರೆ. ನಾಲ್ಕು ಗುಂಪುಗಳಲ್ಲಿ ಆಟಗಾರರನ್ನು ವಿಂಗಡಿಸಲಾಗುವುದು. ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯ ನಿಯಮಗಳು ಈ ಟೂರ್ನಿಗೂ ಅನ್ವಯಿಸಲಿವೆ. ಲೀಗ್, ಕ್ವಾಲಿಫೈಯರ್, ಎಲಿಮಿ ನೇಟರ್ ಮತ್ತು ಫೈನಲ್ ಪಂದ್ಯಗಳು ನಡೆಯಲಿವೆ. ಉದ್ಘಾಟನೆಯು ಮೈಸೂರಿನಲ್ಲಿ ನಡೆಯಲಿದ್ದು ಒಟ್ಟು 18 ಪಂದ್ಯಗಳು ಅಲ್ಲಿ ನಡೆಯಲಿವೆ. ಫೈನಲ್ ಬೆಂಗಳೂರಿನಲ್ಲಿ ನಡೆಯುವುದು’ ಎಂದು ಈ ಸಂದರ್ಭದಲ್ಲಿ ಕೆಎಸ್‌ಸಿಎ ಕಾರ್ಯದರ್ಶಿ ಸಂತೋಷ್ ಮೆನನ್ ತಿಳಿಸಿದರು.

‘ತಂಡಗಳ ಆಯ್ಕೆ, ಕೋಚ್‌ ಮತ್ತು ನೆರವು ಸಿಬ್ಬಂದಿ ನಿಯೋಜನೆ ಹೊಣೆಯನ್ನು ಕೆಎಸ್‌ಸಿಎ ನಿಭಾಯಿಸಲಿದೆ. ರೋಜರ್‌ ಬಿನ್ನಿ ನೇತೃತ್ವದ ಕ್ರಿಕೆಟ್ ಸಮಿತಿಯು ಮುಖ್ಯ ಕೋಚ್‌ಗಳು, ಸಹಾಯಕ ಕೋಚ್ ಮತ್ತು ಆಯ್ಕೆ ಸಮಿತಿಯನ್ನು ನೇಮಕ ಮಾಡಿದೆ. ಬಿಗ್‌ಬ್ಯಾಷ್ ಲೀಗ್ ಮಾದರಿ ಅನುಸರಿಸುತ್ತಿದ್ದೇವೆ’ ಎಂದರು.

ತೆರಿಗೆ ಹೊರೆ ತಪ್ಪಿಸಲು ಮಾದರಿ ಬದಲು: ವಿನಯ್

ಕೆಎಸ್‌ಸಿಎಯು ಈ ಹಿಂದೆ ಕರ್ನಾಟಕ ಪ್ರೀಮಿಯರ್ ಲೀಗ್ ಟೂರ್ನಿಯನ್ನು ಎಂಟು ಆವೃತ್ತಿಗಳಲ್ಲಿ ಯಶಸ್ವಿಯಾಗಿ ನಡೆಸಿತ್ತು. ಆದರೆ ನಿವೃತ್ತ ನ್ಯಾಯಮೂರ್ತಿ ಆರ್.ಎಂ. ಲೋಧಾ ಸಮಿತಿಯ ಶಿಫಾರಸುಗಳ ಅನ್ವಯ ರೂಪಿತವಾಗಿರುವ ಹೊಸ ನಿಯಮಾವಳಿಯನ್ನು 2019ರಿಂದ ನಾವು ಅಳವಡಿಸಿಕೊಂಡಿದ್ದೇವೆ. ಆ ನಿಯಮದ ಪ್ರಕಾರ ಫ್ರ್ಯಾಂಚೈಸಿ ಲೀಗ್ ನಡೆಸುವುದು ಲಾಭದಾಯಕ ವಾಣಿಜ್ಯ ಚಟುವಟಿಕೆ ಆಗಲಿದೆ. ಸಹಕಾರ ಸಂಘದ ನಿಯಮದಲ್ಲಿ ಸಂಸ್ಥೆಯು ನೋಂದಣಿಯಾಗಿರುವುದರಿಂದ ವಾಣಿಜ್ಯ ಚಟುವಟಿಕೆ ನಡೆಸಿದರೆ, ದೊಡ್ಡ ಮೊತ್ತದ ತೆರಿಗೆ ಕಟ್ಟಬೇಕಾಗುತ್ತದೆ. ಆದ್ದರಿಂದ ತೆರಿಗೆಯನ್ನು ಉಳಿಸಿಕೊಳ್ಳಲು ಪರಿಣತರ ಸಲಹೆಯ ಮೇರೆಗೆ ಮಾದರಿಯನ್ನು ಬದಲಾಯಿಸಿದ್ದೇವೆ. ಹೆಸರನ್ನೂ ಕೂಡ ಬದಲಿಸಲಾಗಿದೆ. ಕೆಎಸ್‌ಸಿಎಯು ನಡೆಸುವ ಇನ್ನಿತರ ಟೂರ್ನಿಗಳಂತೆಯೇ ಇದೂ ಒಂದಾಗಲಿದೆ ಎಂದು ಖಜಾಂಚಿ ವಿನಯ್ ಮೃತ್ಯುಂಜಯ ವಿವರಿಸಿದರು.

ಮೋಸದಾಟ ತಡೆಗೆ ಕಟ್ಟುನಿಟ್ಟಿನ ಕ್ರಮ: ಮೆನನ್

‘ಪಂದ್ಯಗಳು ಟಿವಿಯಲ್ಲಿ ನೇರಪ್ರಸಾರವಾಗಲಿವೆ. ಆದ್ದರಿಂದ ಭ್ರಷ್ಟಾಚಾರ ನಿಗ್ರಹ ಪಡೆಯ ತಂಡವನ್ನು ನಿಯೋಜಿಸುವಂತೆ ಬಿಸಿಸಿಐಗೆ ಮನವಿ ಮಾಡಿದ್ದೇವೆ. ಅಲ್ಲದೇ ಸ್ಥಳೀಯ ಪರಿಣತರ ಪಡೆಯನ್ನೂ ನಿಯೋಜಿಸಲಾಗುತ್ತಿದೆ. ಯಾವುದೇ ರೀತಿಯ ಮೋಸದಾಟ, ಫಿಕ್ಸಿಂಗ್ ಪ್ರಕರಣಗಳಿಗೆ ಆಸ್ಪದವಿಲ್ಲ. ನೂತನ ತಂತ್ರಜ್ಞಾನದ ಬಳಕೆಗೂ ಪ್ರಯತ್ನಿಸುತ್ತಿದ್ದೇವೆ. ತಂತ್ರಜ್ಞರೊಂದಿಗೆ ಮಾತುಕತೆ ಜಾರಿಯಲ್ಲಿದೆ’ ಎಂದು ಸಂತೋಷ್ ಮೆನನ್ ಹೇಳಿದರು.

2019ರಲ್ಲಿ ಕೆಪಿಎಲ್ ಆವೃತ್ತಿಯಲ್ಲಿ ಕೆಲವು ಆಟಗಾರರು ಮತ್ತು ಫ್ರ್ಯಾಂಚೈಸಿ ಮಾಲೀಕರು ಮ್ಯಾಚ್ ಫಿಕ್ಸಿಂಗ್ ಆರೋಪ ಎದುರಿಸಿದ್ದರು. ಹಲವು ಕ್ರಿಕೆಟಿಗರು ಮತ್ತು ಅಧಿಕಾರಿಗಳನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದರು. ನಂತರ ಕೋರ್ಟ್‌ನಲ್ಲಿ ವಿಚಾರಣೆ ನಡೆದು ಆಟಗಾರರು ಖುಲಾಸೆಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.