ADVERTISEMENT

IND vs AUS | ಅಶ್ವಿನ್ ಸ್ಪಿನ್‌ ಮೋಡಿಗೆ ಕನಲಿದ ಆಸ್ಟ್ರೇಲಿಯಾ

ಜಸ್‌ಪ್ರೀತ್ ಬೂಮ್ರಾ –ಉಮೇಶ್ ಯಾದವ್ ಬಿರುಗಾಳಿ. ಭಾರತಕ್ಕೆ ಮೊದಲ ಇನಿಂಗ್ಸ್ ಮುನ್ನಡೆ

ಪಿಟಿಐ
Published 18 ಡಿಸೆಂಬರ್ 2020, 22:09 IST
Last Updated 18 ಡಿಸೆಂಬರ್ 2020, 22:09 IST
ಆರ್‌. ಅಶ್ವಿನ್‌ಗೆ ವಿರಾಟ್ ಕೊಹ್ಲಿ ಮತ್ತು ಸಹ ಆಟಗಾರರಿಂದ ಅಭಿನಂದನೆ  –ಎಪಿ ಚಿತ್ರ
ಆರ್‌. ಅಶ್ವಿನ್‌ಗೆ ವಿರಾಟ್ ಕೊಹ್ಲಿ ಮತ್ತು ಸಹ ಆಟಗಾರರಿಂದ ಅಭಿನಂದನೆ –ಎಪಿ ಚಿತ್ರ   
""

ಅಡಿಲೇಡ್: ಟೆಸ್ಟ್ ಕ್ರಿಕೆಟ್ ಅಂಗಳದಲ್ಲಿ ತಾವು ಎಷ್ಟು ಪರಿಣಾಮಕಾರಿ ಎಂಬುದನ್ನು ರವಿಚಂದ್ರನ್ ಅಶ್ವಿನ್ ಶುಕ್ರವಾರ ತೋರಿಸಿಕೊಟ್ಟರು.

ವಿದೇಶಿ ಪಿಚ್‌ನಲ್ಲಿ ನಸುಗೆಂಪು ವರ್ಣದ ಚೆಂಡಿನಲ್ಲಿಯೂ ತಮ್ಮ ಸ್ಪಿನ್‌ ಮೋಡಿ ಮೆರೆದ ಅಶ್ವಿನ್ ಇಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಆಸ್ಟ್ರೇಲಿಯಾಕ್ಕೆ ಸಿಂಹಸ್ವಪ್ನರಾದರು.

ಅಶ್ವಿನ್ (18–3–55–4) ಕರಾಮತ್ತಿನಿಂದಾಗಿ ಭಾರತವು ಮೊದಲ ಇನಿಂಗ್ಸ್‌ನಲ್ಲಿ 53 ರನ್‌ಗಳ ಮುನ್ನಡೆ ಗಳಿಸಿತು. ವಿರಾಟ್ ಕೊಹ್ಲಿ ಬಳಗವು ಪ್ರಥಮ ಇನಿಂಗ್ಸ್‌ನಲ್ಲಿ ಗಳಿಸಿದ್ದ 244 ರನ್‌ಗಳಿಗೆ ಉತ್ತರವಾಗಿ ಆತಿಥೇಯ ತಂಡವು 71.2 ಓವರ್‌ಗಳಲ್ಲಿ 191 ರನ್ ಗಳಿಸಿ ಸರ್ವಪತನ ಕಂಡಿತು. ಎರಡನೇ ದಿನದಾಟದ ಕೊನೆಗೆ ಎರಡನೇ ಇನಿಂಗ್ಸ್ ಆರಂಭಿಸಿರುವ ಭಾರತವು 6 ಓವರ್‌ಗಳಲ್ಲಿ 1 ವಿಕೆಟ್‌ಗೆ 9 ರನ್ ಗಳಿಸಿದೆ.

ADVERTISEMENT

ಆರಂಭಿಕ ಬ್ಯಾಟ್ಸ್‌ಮನ್ ಪೃಥ್ವಿ ಶಾ (4 ರನ್) ಮತ್ತೊಮ್ಮೆ ನಿರಾಶೆ ಮೂಡಿಸಿದರು. ಮಯಂಕ್ ಅಗರವಾಲ್ (ಬ್ಯಾಟಿಂಗ್ 5) ಮತ್ತು ’ರಾತ್ರಿ ಕಾವಲುಗಾರ‘ ಜಸ್‌ಪ್ರೀತ್ ಬೂಮ್ರಾ ಕ್ರೀಸ್‌ನಲ್ಲಿದ್ದಾರೆ. 11 ಎಸೆತಗಳನ್ನು ಎದುರಿಸಿರುವ ಬೂಮ್ರಾ ಖಾತೆ ತೆರೆದಿಲ್ಲ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದ ಭಾರತ ತಂಡವು ಮೊದಲ ದಿನದಾಟದಲ್ಲಿ 6 ವಿಕೆಟ್‌ಗಳಿಗೆ 233 ರನ್ ಗಳಿಸಿತ್ತು. ಎರಡನೇ ದಿನ ಈ ಮೊತ್ತಕ್ಕೆ ಕೇವಲ 11 ರನ್‌ಗಳನ್ನು ಸೇರಿಸಿದ ತಂಡವು ಉಳಿದ ವಿಕೆಟ್‌ಗಳನ್ನು ಕಳೆದುಕೊಂಡಿತು. ಸಾಧಾರಣ ಮೊತ್ತವನ್ನು ಸುಲಭವಾಗಿ ಮೀರಿ ನಿಲ್ಲುವ ಆತ್ಮವಿಶ್ವಾಸದಲ್ಲಿದ್ದ ಆತಿಥೇಯ ಬಳಗಕ್ಕೆ ಜಸ್‌ಪ್ರೀತ್ ಬೂಮ್ರಾ ಮೊದಲ ಪೆಟ್ಟುಕೊಟ್ಟರು.

ಇನಿಂಗ್ಸ್‌ನ 15 ಮತ್ತು 17ನೇ ಓವರ್‌ನಲ್ಲಿ ಬೂಮ್ರಾ ಮ್ಯಾಥ್ಯೂ ವೇಡ್ ಮತ್ತು ಜೋ ಬರ್ನ್ಸ್‌ ಅವರಿಬ್ಬರನ್ನೂ ಎಲ್‌ಬಿಡಬ್ಲ್ಯು ಬಲೆಗೆ ಕೆಡವಿದರು. ನಂತರ ಅಶ್ವಿನ್ ಆಟ ಆರಂಭವಾಯಿತು.

ಪ್ರಮುಖ ಬ್ಯಾಟ್ಸ್‌ಮನ್ ಸ್ಟೀವನ್ ಸ್ಮಿತ್ ಕೇವಲ ಒಂದು ರನ್ ಗಳಿಸಿ ನಿರ್ಗಮಿಸಲು ಅಶ್ವಿನ್ ಕಾರಣರಾದರು. ಟ್ರಾವಿಸ್ ಹೆಡ್, ಗ್ರೀನ್ ಮತ್ತು ಕೊನೆಯಲ್ಲಿ ನೇಥನ್ ಲಯನ್ ಅವರಿಗೆ ಅಶ್ವಿನ್ ಪೆವಿಲಿಯನ್ ದಾರಿ ತೋರಿಸಿದರು. ಅದರಲ್ಲೂ ಕ್ಯಾಮರೂನ್ ಗ್ರೀನ್ ಅವರ ಕ್ಯಾಚ್‌ನ್ನು ತಮ್ಮ ಬಲಕ್ಕೆ ಹಾರಿ ಪಡೆದ ವಿರಾಟ್ ಕೊಹ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಅಪಾರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಸಂಜೆ ಹೊನಲು ಬೆಳಕು ಚೆಲ್ಲಿದ ಮೇಲೆ ಮಿಂಚಿದ ಉಮೇಶ್ ಯಾದವ್ (40ಕ್ಕೆ3) ಆತಿಥೇಯರ ಆಟಕ್ಕೆ ಕಡಿವಾಣ ಹಾಕಿದರು.

ಮಣ್ಣುಪಾಲಾದ ಕ್ಯಾಚುಗಳು
ಆಸ್ಟ್ರೇಲಿಯಾ ತಂಡವನ್ನು ಇನ್ನೂ ಕಡಿಮೆ ಮೊತ್ತಕ್ಕೆ ಕಟ್ಟಿಹಾಕುವ ಅವಕಾಶ ಭಾರತಕ್ಕಿತ್ತು. ಆದರೆ, ಕೈಚೆಲ್ಲಿದ ನಾಲ್ಕು ಕ್ಯಾಚ್‌ಗಳಿಂದಾಗಿ ಮಾರ್ನಸ್‌ ಲಾಬುಷೇನ್ (47; 119ಎ) ಮತ್ತು ನಾಯಕ ಟಿಮ್ ಪೇನ್ (ಔಟಾಗದೆ 73; 99ಎ) ಇನಿಂಗ್ಸ್‌ಗೆ ಬಲ ತುಂಬುವ ಪ್ರಯತ್ನ ಮಾಡಿದರು.

ಮಾರ್ನಸ್‌ ಕ್ಯಾಚ್‌ ಅನ್ನು 18ನೇ ಓವರ್‌ನಲ್ಲಿ ಬೂಮ್ರಾ ಮತ್ತು 23ನೇ ಓವರ್‌ನಲ್ಲಿ ಪೃಥ್ವಿ ಶಾ ಕೈಚೆಲ್ಲಿದರು. ಪೇನ್ ಮತ್ತು ಮಿಚೆಲ್ ಸ್ಟಾರ್ಕ್ ಅವರಿಗೂ ತಲಾ ಒಂದು ಜೀವದಾನ ಲಭಿಸಿತು. 55ನೇ ಓವರ್‌ನಲ್ಲಿ ಪೇನ್ ಕೊಟ್ಟ ಕ್ಯಾಚ್ ಪಡೆಯುವಲ್ಲಿ ಮಯಂಕ್ ಅಗರವಾಲ್ ವಿಫಲರಾದರು. ಅದರಿಂದಾಗಿ ಅವರು ಅರ್ಧಶತಕ ಗಳಿಸಲು ಸಾಧ್ಯವಾಯಿತು.

ಮುಖ್ಯಾಂಶಗಳು

15: ಶುಕ್ರವಾರ ಒಂದೇ ದಿನ ಪತನವಾದ ಒಟ್ಟು ವಿಕೆಟ್‌ಗಳು

04: ಭಾರತದ ಆಫ್‌ಸ್ಪಿನ್ನರ್ ಆರ್. ಅಶ್ವಿನ್ ಗಳಿಸಿದ ವಿಕೆಟ್‌ಗಳು

04: ಭಾರತದ ಫೀಲ್ಡರ್‌ಗಳು ಕೈಚೆಲ್ಲಿದ ಕ್ಯಾಚುಗಳು

04: ಭಾರತ ತಂಡವು ಕಣಕ್ಕಿಳಿಸಿದ ಬೌಲರ್‌ಗಳು.

02: ನಾಯಕ ವಿರಾಟ್ ಕೊಹ್ಲಿ ಪಡೆದ ಕ್ಯಾಚುಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.