ADVERTISEMENT

ಗಾಯದ ಸಮಸ್ಯೆ: ಆಸ್ಟ್ರೇಲಿಯಾ ಸರಣಿಯಿಂದ ಕೆಎಲ್ ರಾಹುಲ್ ಹೊರಕ್ಕೆ

ಏಜೆನ್ಸೀಸ್
Published 5 ಜನವರಿ 2021, 7:30 IST
Last Updated 5 ಜನವರಿ 2021, 7:30 IST
ಕೆ.ಎಲ್. ರಾಹುಲ್
ಕೆ.ಎಲ್. ರಾಹುಲ್   

ಸಿಡ್ನಿ: ಭಾರತ ಕ್ರಿಕೆಟ್ ತಂಡದ ವಿಕೆಟ್ ಕೀಪರ್, ಬ್ಯಾಟ್ಸ್‌ಮನ್ ಕೆ.ಎಲ್. ರಾಹುಲ್ ಅಭ್ಯಾಸದ ವೇಳೆ ಗಾಯಗೊಂಡಿದ್ದಾರೆ. ಹೀಗಾಗಿ ಅವರು ಆಸ್ಟ್ರೇಲಿಯಾ ವಿರುದ್ಧದ ಉಳಿದೆರಡು ಟೆಸ್ಟ್ ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಪ್ರಕಟಿಸಿದೆ.

'ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಮೂರು ವಾರಗಳ ವಿಶ್ರಾಂತಿ ಅಗತ್ಯ ಇರುವುದರಿಂದ ಕೆಎಲ್ ರಾಹುಲ್ ಅವರು ಬಾರ್ಡರ್-ಗವಾಸ್ಕರ್ ಸರಣಿಯ ಉಳಿದೆರಡು ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ' ಎಂದು ಬಿಸಿಸಿಐ ತಿಳಿಸಿದೆ. ನೆಟ್ಸ್‌‌ನಲ್ಲಿ ಅಭ್ಯಾಸ ಮಾಡುವಾಗ ರಾಹುಲ್ ಮಣಿಕಟ್ಟಿಗೆ ಪೆಟ್ಟಾಗಿದೆ.

ನಾಲ್ಕು ಪಂದ್ಯಗಳ ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಉಭಯ ತಂಡಗಳು ತಲಾ ಒಂದೊಂದು ಜಯ ಸಾಧಿಸಿವೆ. ಈ ಎರಡೂ ಪಂದ್ಯಗಳಲ್ಲಿ ರಾಹುಲ್‌ಗೆ ಅವಕಾಶ ಸಿಕ್ಕಿರಲಿಲ್ಲ. ಆದರೆ ಮೂರನೇ ಪಂದ್ಯದಲ್ಲಿ ಕಣಕ್ಕಿಳಿಯುವ ಸಾಧ್ಯತೆ ಇತ್ತು. ಈ ಪಂದ್ಯ ಜನವರಿ 7ರಿಂದ ಸಿಡ್ನಿಯಲ್ಲಿ ಆರಂಭವಾಗಲಿದೆ.

ADVERTISEMENT

ತಂಡದ ನಾಯಕ ವಿರಾಟ್ ಕೊಹ್ಲಿ ತಂದೆಯಾಗುವ ಸಂಭ್ರಮದಲ್ಲಿದ್ದು, ಮೊದಲ ಪಂದ್ಯದ ಬಳಿಕ ತವರಿಗೆ ಮರಳಿದ್ದಾರೆ. ವೇಗಿಗಳಾದ ಮೊಹಮ್ಮದ್ ಶಮಿ ಮತ್ತು ಉಮೇಶ್ ಯಾದವ್ ಅವರೂ ಗಾಯಗೊಂಡು ಹೊರಬಿದ್ದಿದ್ದಾರೆ. ಹೀಗಾಗಿ ಯುವ ಆಟಗಾರರನ್ನು ಕಟ್ಟಿಕೊಂಡು ಕಾಂಗರೂ ಪಡೆ ಎದುರು ಸೆಣಸುವ ಸವಾಲು ಅಜಿಂಕ್ಯ ರಹಾನೆ ಮುಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.