ADVERTISEMENT

‘‌ಆಸಿಸ್ ಆಟಗಾರರು ಈತನಿಗೆ ಹೆದರುತ್ತಿದ್ದರು’ ಎಂದು ರೈನಾ ಹೇಳಿದ್ದು ಯಾರ ಬಗ್ಗೆ?

ಏಜೆನ್ಸೀಸ್
Published 11 ಮೇ 2020, 10:49 IST
Last Updated 11 ಮೇ 2020, 10:49 IST
   

ಭಾರತ ಕ್ರಿಕೆಟ್‌ ತಂಡದ ಮಾಜಿ ಆಟಗಾರರಾದ ಸಚಿನ್‌ ತೆಂಡೂಲ್ಕರ್‌, ವೀರೇಂದ್ರ ಸೆಹ್ವಾಗ್‌, ವಿವಿಎಸ್‌ ಲಕ್ಷ್ಮಣ್‌, ರಾಹುಲ್‌ ದ್ರಾವಿಡ್‌, ಸೌರವ್‌ ಗಂಗೂಲಿ, ಹರ್ಭಜನ್‌ ಸಿಂಗ್‌ ಅವರು ಎದುರಾಳಿ ತಂಡಗಳ ಪಾಲಿಗೆ ಸವಾಲಿನ ಆಟಗಾರರಾಗಿದ್ದರು. ತಾವು ಆಡುತ್ತಿದ್ದ ಕಾಲದಲ್ಲಿ ಅತ್ಯಂತ ಬಲಿಷ್ಠ ತಂಡವಾಗಿದ್ದ ಆಸ್ಟ್ರೇಲಿಯಾ ವಿರುದ್ಧವಂತೂ ಈ ಎಲ್ಲ ಆಟಗಾರರು ಮತ್ತಷ್ಟು ಹುರುಪಿನಿಂದಲೇ ಕಣಕ್ಕಿಳಿಯುತ್ತಿದ್ದರು. ಈ ವಿಚಾರವಾಗಿ ಹಿರಿಯ ಕ್ರಿಕೆಟಿಗಾರ ಇರ್ಫಾನ್‌ ಪಠಾಣ್‌ ಹಾಗೂ ಸುರೇಶ್‌ ರೈನಾ ಇನ್‌ಸ್ಟಾಗ್ರಾಂ ಲೈವ್‌ನಲ್ಲಿ ಚರ್ಚಿಸಿದ್ದು, ಆಸಿಸ್‌ ಪಾಲಿಗೆಅತ್ಯಂತ ಕಠಿಣ ಆಟಗಾರ ಯಾರು ಎಂಬ ಬಗ್ಗೆ ಮಾತನಾಡಿದ್ದಾರೆ.

ಕಾರ್ಯಕ್ರಮದಲ್ಲಿ ಪಠಾಣ್‌ ಪ್ರಶ್ನೆಯೊಂದಕ್ಕೆಉತ್ತರಿಸಿರುವ ಸುರೇಶ್‌ ರೈನಾ, ಆಸ್ಟ್ರೇಲಿಯನ್ನರು ಆಫ್‌ಸ್ಪಿನ್ನರ್‌ ಹರ್ಭಜನ್ ಸಿಂಗ್‌ ಅವರಿಗೆ ಹೆಚ್ಚು ಹೆದರುತ್ತಿದ್ದರು ಎಂದು ಹೇಳಿಕೊಂಡಿದ್ದಾರೆ.

‘ಭಜ್ಜಿ (ಹರ್ಭಜನ್‌ ಸಿಂಗ್‌) ಈ ಕ್ರೀಡೆಯ ದಂತಕತೆಗಳಲ್ಲಿ ಒಬ್ಬರು. ಅವರು 100 ಟೆಸ್ಟ್‌ ಪಂದ್ಯಗಳನ್ನು ಆಡಿದ್ದಾರೆ. ವಿಶ್ವ ಕ್ರಿಕೆಟ್‌ನಲ್ಲಿ ಅವರಿಗಿಂತ ಉತ್ತಮ ಆಫ್‌ಸ್ಪಿನ್ನರ್‌ ಯಾರಿದ್ದಾರೆ ಹೇಳಿ’ ಎಂದು ಇರ್ಫಾನ್ ಕೇಳಿದ್ದಾರೆ.

ADVERTISEMENT

ಈ ಮಾತನ್ನು ಒಪ್ಪಿಕೊಂಡ ರೈನಾ, ‘ಭಜ್ಜಿ ಹೋರಾಟಗಾರ. ಆಸ್ಟ್ರೇಲಿಯಾದಲ್ಲಿ ಸಾಕಷ್ಟು ಪಂದ್ಯಗಳನ್ನು ನಮಗೆ ಗೆದ್ದುಕೊಟ್ಟಿದ್ದಾರೆ. ಆಸ್ಟ್ರೇಲಿಯಾ, ಭಜ್ಜಿಯಿಂದ ದೂರ ಇರುವಂತೆ ತನ್ನ ಆಟಗಾರರಿಗೆ ಯಾವಾಗಲೂ ಹೇಳುತ್ತಿತ್ತು’ ಎಂದು ಪ್ರತಿಕ್ರಿಯಿಸಿದ್ದಾರೆ.

ಹರ್ಭಜನ್‌ ಸಿಂಗ್‌,2016ರಲ್ಲಿ ಕೊನೆಯ ಸಲ ಭಾರತ ತಂಡದ ಪರ ಕಣಕ್ಕಿಳಿದಿದ್ದರು. ಇದುವರೆಗೆ 103 ಟೆಸ್ಟ್‌ ಪಂದ್ಯ ಆಡಿರುವ ಭಜ್ಜಿ, 417 ವಿಕೆಟ್‌ ಕಬಳಿಸಿದ್ದಾರೆ. ಇದು ಸದ್ಯ ಭಾರತ ಪರ ಆಡುತ್ತಿರುವ ಬೌಲರ್‌ಗಳು ಪಡೆದಿರುವುದಕ್ಕಿಂತ ಹೆಚ್ಚು ವಿಕೆಟ್‌ ಆಗಿದೆ. 236 ಏಕದಿನ ಪಂದ್ಯಗಳಿಂದ 269 ವಿಕೆಟ್‌ ಮತ್ತು 28 ಟಿ20 ಪಂದ್ಯಗಳಿಂದ 25 ವಿಕೆಟ್‌ ಗಳಿಸಿದ್ದಾರೆ.ಆಸಿಸ್‌ ವಿರುದ್ಧ ಒಟ್ಟು 18 ಟೆಸ್ಟ್‌ ಆಡಿರುವ ಹರ್ಭಜನ್,‌ 29.95 ರ ಸರಾಸರಿಯಲ್ಲಿ 95 ವಿಕೆಟ್‌ ಉರುಳಿಸಿದ್ದಾರೆ.

2007ರಲ್ಲಿ ಟಿ20 ಮತ್ತು 2011ರಲ್ಲಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಗೆದ್ದ ಭಾರತ ತಂಡದಲ್ಲಿ ಆಡಿದ್ದ ಭಜ್ಜಿ, ಈ ಎರಡೂ ಟೂರ್ನಿಗಳಲ್ಲಿ ಆಸಿಸ್‌ ವಿರುದ್ಧ ಅತ್ಯುತ್ತಮ ಪ್ರದರ್ಶನ ನೀಡಿದ್ದರು.

ಕೋಲ್ಕತ್ತದ ಈಡನ್‌ ಗಾರ್ಡನ್ಸ್‌ನಲ್ಲಿ 2001ರಲ್ಲಿ ಆಸಿಸ್‌ ವಿರುದ್ಧ ನಡೆದ ಟೆಸ್ಟ್‌ ಪಂದ್ಯದಲ್ಲಿ ಹ್ಯಾಟ್ರಿಕ್‌ ವಿಕೆಟ್‌ ಕಬಳಿಸಿದ್ದರು. ಆ ಮೂಲಕ ಟೆಸ್ಟ್‌ ಕ್ರಿಕೆಟ್‌ನಲ್ಲಿ ಹ್ಯಾಟ್ರಿಕ್‌ ವಿಕೆಟ್‌ ಪಡೆದ ಮೊದಲ ಭಾರತೀಯ ಬೌಲರ್‌ ಎನಿಸಿದ್ದರು. ಮಾತ್ರವಲ್ಲದೆ, ಮೂರು ಪಂದ್ಯಗಳ ಆ ಸರಣಿಯಲ್ಲಿ ಒಟ್ಟು 32 ವಿಕೆಟ್‌ ಪಡೆದಿದ್ದರು. ಭಜ್ಜಿಯ ಅಮೋಘಪ್ರದರ್ಶನದ ನೆರವಿನಿಂದ ಭಾರತ ಆ ಸರಣಿಯನ್ನು 2–1 ರಿಂದ ಗೆದ್ದುಕೊಂಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.