ಮೆಲ್ಬರ್ನ್: ಅಂತಿಮ ಅವಧಿಯ ಆಟದಲ್ಲಿ ಅನಗತ್ಯವಾಗಿ ಆದ ರನೌಟ್ ಭಾರತ ತಂಡದ ಸ್ಫೂರ್ತಿಯುತ ಪ್ರತಿರೋಧವನ್ನು ಮಸುಕುಗೊಳಿಸಿತು. ಆತಿಥೇಯ ಆಸ್ಟ್ರೇಲಿಯಾ ತಂಡಕ್ಕೆ ಬಾಕ್ಸಿಂಗ್ ಡೇ (ನಾಲ್ಕನೇ) ಕ್ರಿಕೆಟ್ ಟೆಸ್ಟ್ ಪಂದ್ಯದ ಎರಡನೇ ದಿನವಾದ ಶುಕ್ರವಾರದ ಆಟದಲ್ಲಿ ಮೇಲುಗೈ ಒದಗಿಸಿತು.
ಸ್ಟೀವ್ ಸ್ಮಿತ್ ಅವರ ಅಧಿಕಾರಯುತ (140, 197ಎ, 4x13, 6x3) ಶತಕದ ಮೂಲಕ ಆಸ್ಟ್ರೇಲಿಯಾದ ಮೊದಲ ಇನಿಂಗ್ಸ್ 474 ರನ್‌ಗಳಿಗೆ ಬೆಳೆಯಿತು. ಭಾರತದ ಆರಂಭ ಉತ್ತಮವಾಗಿರಲಿಲ್ಲ. ಈಗ ಆಸ್ಟ್ರೇಲಿಯಾದ ಮೊದಲ ಗುರಿ ಎನಿಸಿರುವ ವಿರಾಟ್ ಕೊಹ್ಲಿ (35, 86ಎ, 4x4) ಮತ್ತು ಲಯಕ್ಕೆ ಪರದಾಡುತ್ತಿದ್ದ ಯಶಸ್ವಿ ಜೈಸ್ವಾಲ್ (82, 118ಎ, 4x12, 6x1) ಅವರ ಜೊತೆಯಾಟ ಆತಿಥೇಯ ಪ್ರೇಕ್ಷಕರ ಹರ್ಷೋದ್ಗಾರಗಳನ್ನು ಮೌನವಾಗಿಸಿತು.
ಸ್ಥಿರ ಪ್ರದರ್ಶನ ನೀಡುತ್ತಿರುವ ಕೆ.ಎಲ್.ರಾಹುಲ್ ಬದಲು ಆರಂಭ ಆಟಗಾರನ ಸ್ಥಾನಕ್ಕೆ ಮರಳಿದ ನಾಯಕ ರೋಹಿತ್ ಶರ್ಮಾ ಅವರ ನಿರ್ಧಾರ ತಿರುಗುಬಾಣವಾಯಿತು. ಎದುರಾಳಿ ನಾಯಕ ಪ್ಯಾಟ್ ಕಮಿನ್ಸ್ ಬೌಲಿಂಗ್‌ನಲ್ಲಿ ಅವರ ದುರ್ಬಲ ಪುಲ್ ಹೊಡೆತ ಸುಲಭ ಕ್ಯಾಚಿನಲ್ಲಿ ಅಂತ್ಯಕಂಡಿತು. ಅವರು ಗಳಿಸಿದ್ದು 5 ಎಸೆತಗಳಲ್ಲಿ 3 ರನ್‌ಗಳನ್ನಷ್ಟೇ.
ಮೂರನೇ ಕ್ರಮಾಂಕದಲ್ಲಿ ಆಡಲಿಳಿದ ರಾಹುಲ್ ಎಂದಿನ ಲಯದಲ್ಲೇ ಇದ್ದು 24 ರನ್ ಗಳಿಸಿದರು. ಆದರೆ ಚಹಾ ವಿರಾಮಕ್ಕೆ ಸ್ವಲ್ಪ ಮೊದಲು, ಕಮಿನ್ಸ್ ಅವರ ಬೌಲಿಂಗ್‌ನಲ್ಲಿ ಮಿಡ್ಲ್ ಮತ್ತು ಆಫ್ ಸ್ಟಂಪ್ ನೇರದಲ್ಲಿ ಪಿಚ್ ಆಗಿ ಬಂದ ಚೆಂಡನ್ನು ಆಡುವಲ್ಲಿ ಎಡವಿದರು. ಆ ಅಮೋಘ ಎಸೆತ ಬೇಲ್ಸ್ ಉರುಳಿಸಿತು. ಆಗ ಮೊತ್ತ 51ಕ್ಕೆ2. ಮತ್ತೊಮ್ಮೆ ಕುಸಿತದ ಸೂಚನೆಗಳು ಕಂಡವು.
ಆದರೆ ಕೊಹ್ಲಿ ಮತ್ತು ಜೈಸ್ವಾಲ್ ವಿಭಿನ್ನ ರೀತಿಯಲ್ಲಿ ಇನಿಂಗ್ಸ್ ಕಟ್ಟಲು ಶುರುಮಾಡಿದರು. ಜೈಸ್ವಾಲ್ ಅವರು ವೈವಿಧ್ಯಮಯ ಹೊಡೆತಗಳನ್ನು ಆಡಿದರೆ, ಕೊಹ್ಲಿ ಎಂದಿನಂತೆ ಛಲ, ಸಂಯಮದ ಆಟವಾಡಿದರು. ಗ್ಯಾಲರಿಯಲ್ಲಿ ಭಾರತದ ಧ್ವಜಗಳು ಹಾರಾಡತೊಡಗಿದವು. ಹಿರಿಯ ಹೋರಾಟಗಾರನಲ್ಲಿ ಉಳಿದಿರುವ ಕೆಚ್ಚು ಕಾಣಬಹುದಿತ್ತು. ವಿಶೇಷವಾಗಿ ಆಫ್‌ಸೈಡ್ ಕಡೆ ಆಡುವಾಗ ಕೊಹ್ಲಿ ಕಟ್ಟೆಚ್ಚರ ವಹಿಸಿದರು. ಆ ಭಾಗದಲ್ಲಿ ಆಡಿದ 60 ಎಸೆತಗಳಲ್ಲಿ ಬರೇ ಮೂರಷ್ಟೇ ರನ್ ತಂದ ಹೊಡೆತಗಳಾಗಿದ್ದವು.
ಇವರಿಬ್ಬರ 102 ರನ್ ಜೊತೆಯಾಟದಿಂದ ಭಾರತದ ಪಾಳಯದಲ್ಲಿ ಚೇತರಿಕೆಯ ಆಶಾವಾದ ಮೂಡಿತು. ಆ ವೇಳೆಗೇ ಆಘಾತ ಎದುರಾಯಿತು. ಜೈಸ್ವಾಲ್ ಬೇಡವಾಗಿದ್ದ ರನ್‌ಗೆ ಓಡಲು ಹೋಗಿದ್ದರಿಂದ ಗೊಂದಲ ಎದುರಾಯಿತು. ಇಬ್ಬರು ಒಂದೇ ಕಡೆ ಸಿಕ್ಕಿಕೊಂಡು ಜೈಸ್ವಾಲ್ ರನೌಟ್ ಆಗಿ ನಿರಾಸೆಯಿಂದ ನಿರ್ಗಮಿಸಿದರು. ಬೌಲರ್ ಎಂಡ್‌ನಲ್ಲಿದ್ದ ಕೊಹ್ಲಿ ಚೆಂಡಿನ ಕಡೆ ಗಮನ ನೀಡಿದ್ದು ಓಡಲು ಯೋಚಿಸುವಷ್ಟರಲ್ಲಿ ಎಲ್ಲವೂ ನಡೆದುಹೋಯಿತು.
ಇದು ಕೊಹ್ಲಿ ಅವರ ಏಕಾಗ್ರತೆ ಮೇಲೂ ಪರಿಣಾಮ ಬೀರಿತು. ಅವರು ಬೋಲ್ಯಾಂಡ್ ಬೌಲಿಂಗ್‌ನಲ್ಲಿ ಆಫ್‌ಸ್ಟಂಪ್ ಆಚೆಯಿದ್ದ ಎಸೆತವನ್ನು ಆಡುವ ಯತ್ನ ನಡೆಸಿದಾಗ ಅದು ವಿಕೆಟ್ ಕೀಪರ್ ಅಲೆಕ್ಸ್ ಕ್ಯಾರಿ ಅವರಿಗೆ ಸುಲಭದ ಕ್ಯಾಚ್ ಆಯಿತು. ನೈಟ್ ವಾಚಮನ್ ಆಗಿ ಆಡಲಿಳಿದ ಆಕಾಶ್ ದೀಪ್ ಹೆಚ್ಚು ಹೊತ್ತು ನಿಲ್ಲಿಲ್ಲ. ಒಂದು ಹಂತದಲ್ಲಿ 2 ವಿಕೆಟ್‌ಗೆ 153 ರ್ ಗಳಿಸಿದ್ದ ಭಾರತ ಅಂತಿಮವಾಗಿ 5 ವಿಕೆಟ್‌ಗೆ 164 ರನ್‌ಗಳೊಡನೆ ದಿನದಾಟ ಮುಗಿಸಿತು.
ರಿಷಭ್ ಪಂತ್ ಮತ್ತು ರವೀಂದ್ರ ಜಡೇಜ ಶನಿವಾರ ಆಟ ಮುಂದುವರಿಸಲಿದ್ದಾರೆ. ಆದರೆ 310 ರನ್‌ಗಳಿಂದ ಹಿಂದಿರುವ ಭಾರತ ಮುನ್ನಡೆ ಸಾಧಿಸಬೇಕಾದರೆ ಭಗೀರಥ ಪ್ರಯತ್ನವೇ ನಡೆಯಬೇಕಾಗಿದೆ.
ಇದಕ್ಕೆ ಮೊದಲು ಬೆಳಗಿನ ಅವಧಿಯೂ ಭಾರತಕ್ಕೆ ಫಲಪ್ರದವಾಗಿರಲಿಲ್ಲ. ಆಸ್ಟ್ರೇಲಿಯಾದ ಆಟ (ಗುರುವಾರ: 6 ವಿಕೆಟ್‌ಗೆ 311) ಮುಂದುವರಿಸಿದ ಸ್ಮಿತ್ ಮತ್ತು ಕಮಿನ್ಸ್ (49, 63ಎ, 4x7) ಜೊತೆಯಾಟ 112 ರನ್‌ಗಳಿಗೆ ಬೆಳೆಯಿತು. ಇಬ್ಬರೂ ಭಾರತದ ಬೌಲರ್‌ಗಳನ್ನು ಹತಾಶರನ್ನಾಗಿಸಿದರು.
ಸ್ಮಿತ್ ಟೆಸ್ಟ್‌ಗಳಲ್ಲಿ 34ನೇ ಶತಕ ಬಾರಿಸಿದರು. ಭಾರತದ ವಿರುದ್ಧ 11ನೇ ಶತಕ ಇದಾಗಿತ್ತು. ಭಾರತದ ವಿರುದ್ಧ ದಾಖಲಾದ ಆಟಗಾರನೊಬ್ಬನ ಗರಿಷ್ಠ ಶತಕ ಇದು. ಸ್ಮಿತ್– ಕಮಿನ್ಸ್ ಜೊತೆಯಾಟ ಮುರಿಯಲು ರೋಹಿತ್ ಶರ್ಮಾ ಸಾಧ್ಯವಿರುವ ಎಲ್ಲ ಪ್ರಯತ್ನ ನಡೆಸಿದರು. ಆದರೆ ಅವರ ಯತ್ನ ಬೇಗ ಕೈಗೂಡಲಿಲ್ಲ. ಸ್ಮಿತ್–ಕಮಿನ್ಸ್ ಇಬ್ಬರಿಂದಲೂ ಹುಕ್ ಮತ್ತು ಪುಲ್ ಹೊಡೆತಗಳು ಪ್ರಯೋಗವಾದವು. ಮೊಹಮ್ಮದ್ ಸಿರಾಜ್ ಇಲ್ಲೂ ಲಯಕಂಡುಕೊಳ್ಳಲಿಲ್ಲ.
ಭಾರತದ ಬೌಲರ್‌ಗಳ ನಿರಾಸೆ ಅಲ್ಲಿಗೇ ಕೊನೆಗೊಳ್ಳಲಿಲ್ಲ. ನೇಥನ್ ಲಯನ್ ಮತ್ತು ಬೋಲ್ಯಾಂಡ್ ನಡುವಣ ಜೊತೆಯಾಟ 19 ರನ್‌ಗಳಿಗೆ ಸೀಮಿತಗೊಂಡರೂ ಅದನ್ನು ಕಾಣಬಹುದಿತ್ತು. ಭಾರತ ಎರಡು ಬಾರಿ ಮರುಪರಿಶೀಲನೆ ಕೋರಿದಾಗ ಬೋಲ್ಯಾಂಡ್ ಅವರು ನಾಟೌಟ್ ಆಗಿದ್ದರು. ಲಯನ್ ಅವರು ಕೊನೆಗೂ ಭಾರತದ ಟ್ರಂಪ್ ಕಾರ್ಡ್ ಬೂಮ್ರಾ ಬೌಲಿಂಗ್‌ನಲ್ಲಿ ಎಲ್‌ಬಿ ಬಲೆಗೆ ಬಿದ್ದರು.
ಉತ್ತಮ ಸ್ಥಿತಿಯೊಡನೆ ದಿನದಾಟ ಆರಂಭಿಸಿದ ಆಸ್ಟ್ರೇಲಿಯಾ ಇನ್ನಷ್ಟು ಸುಭದ್ರವಾಗಿ ದಿನ ಕೊನೆಗೊಳಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.