ಕ್ರಿಕೆಟ್ (ಪ್ರಾತಿನಿಧಿಕ ಚಿತ್ರ)
ಗೋಲ್ಡ್ ಕೋಸ್ಟ್ (ಆಸ್ಟ್ರೇಲಿಯಾ): ಮಧ್ಯಮ ವೇಗಿ ಟೆಸ್ ಫ್ಲಿಂಟಾಫ್ (39ಕ್ಕೆ3) ಮತ್ತು ಆಫ್ ಸ್ಪಿನ್ನರ್ ಚಾರ್ಲಿ ನಾಟ್ (34ಕ್ಕೆ3) ಅವರ ಪರಿಣಾಮಕಾರಿ ದಾಳಿಗೆ ಉರುಳಿದ ಭಾರತ ‘ಎ’ ತಂಡ ಮಹಿಳೆಯರ ಏಕೈಕ ‘ಅನಧಿಕೃತ’ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ‘ಎ’ ಎದುರು ಭಾನುವಾರ 45 ರನ್‌ಗಳ ಸೋಲನುಭವಿಸಿತು.
ನಾಲ್ಕು ದಿನಗಳ ಈ ಪಂದ್ಯ ಗೆಲ್ಲಲು 289 ರನ್‌ಗಳ ಸವಾಲು ಎದುರಿಸಿದ್ದ ಭಾರತ ವನಿತೆಯರು ಅಂತಿಮ ದಿನ 243 ರನ್ ಗಳಿಸಿ ಆಲೌಟಾದರು. ಮೂರನೇ ದಿನದ ಕೊನೆಗೆ 6 ವಿಕೆಟ್‌ಗೆ 149 ರನ್ ಗಳಿಸಿದ್ದ ಪ್ರವಾಸಿ ತಂಡ ಸೋಲಿನ ಭೀತಿಯಲ್ಲಿತ್ತು. ಆ ಮೊತ್ತಕ್ಕೆ ಇಂದು 94 ರನ್ ಸೇರಿಸಲು ಶಕ್ತವಾಯಿತು.
ರಾಘವಿ ಬಿಷ್ಟ್ (26) ಮತ್ತು ಉಮಾ ಚೆಟ್ರಿ (47) ಅವರು ಎಚ್ಚರಿಕೆಯಿಂದ ಆಡಿ ಏಳನೇ ವಿಕೆಟ್‌ಗೆ 79 ರನ್ ಸೇರಿಸಿ ಹೋರಾಟ ಪ್ರದರ್ಶಿಸಿದರು. ಆದರೆ ಉಮಾ ಅವರ ವಿಕೆಟ್ ಪಡೆದು ಫ್ಲಿಂಟಾಫ್ ಜೊತೆಯಾಟ ಮುರಿದ ಮೇಲೆ ಆತಿಥೇಯ ಆಟಗಾರ್ತಿಯರು ಮರಳಿ ಹಿಡಿತ ಪಡೆದರು.
ಸಂಕ್ಷಿಪ್ತ ಸ್ಕೋರು: ಒಂದನೇ ಇನಿಂಗ್ಸ್: ಆಸ್ಟ್ರೇಲಿಯಾ ಎ: 212, ಭಾರತ ಎ: 184; ಎರಡನೇ ಇನಿಂಗ್ಸ್: ಆಸ್ಟ್ರೇಲಿಯಾ ಎ: 260; ಭಾರತ ಎ: 92.5 ಓವರುಗಳಲ್ಲಿ 243 (ಶುಭಾ ಸತೀಶ್ 45, ಉಮಾ ಚೆಟ್ರಿ 47, ಟೆಸ್ ಫ್ಲಿಂಟಾಫ್ 39ಕ್ಕೆ3, ಚಾರ್ಲಿ ನಾಟ್ 34ಕ್ಕೆ3, ಗ್ರೇಸ್ ಪಾರ್ಸನ್ಸ್ 37ಕ್ಕೆ2). ಆಸ್ಟ್ರೇಲಿಯಾ ಎ ತಂಡಕ್ಕೆ 45 ರನ್ ಜಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.