ADVERTISEMENT

ಟಿ20 ವಿಶ್ವಕಪ್‌ ಸೆಮಿಫೈನಲ್‌ಗೆ ಮೀಸಲು ದಿನಗಳು: ಸಿಎ ಪ್ರಸ್ತಾವ

ಪಿಟಿಐ
Published 22 ಮಾರ್ಚ್ 2020, 6:31 IST
Last Updated 22 ಮಾರ್ಚ್ 2020, 6:31 IST
ಮಳೆ
ಮಳೆ   

ಸಿಡ್ನಿ: ಇದೇ ವರ್ಷ ನಡೆಯಲಿರುವ ಟ್ವೆಂಟಿ–20 ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲ ಸೆಮಿಫೈನಲ್ ಪಂದ್ಯಗಳಿಗೆ ಹೆಚ್ಚುವರಿಯಾಗಿ ಒಂದು ಮೀಸಲು ದಿನವನ್ನು ನಿಗದಿ ಮಾಡಬೇಕು ಎಂದು ಕ್ರಿಕೆಟ್ ಆಸ್ಟ್ರೇಲಿಯಾ (ಸಿಎ) ಐಸಿಸಿಗೆ ಪ್ರಸ್ತಾವ ಸಲ್ಲಿಸಲು ಉದ್ದೇಶಿಸಿದೆ.

ಈಚೆಗೆ ನಡೆದಿದ್ದ ಮಹಿಳೆಯರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಮಳೆಯಿಂದಾಗಿ ಸೆಮಿಫೈನಲ್ ಪಂದ್ಯ ರದ್ದಾಗಿತ್ತು. ಅದರಿಂದಾಗಿ ಇಂಗ್ಲೆಂಡ್ ತಂಡವು ಹೊರಬಿದ್ದಿತ್ತು. ಭಾರತವು ಫೈನಲ್‌ಗೆ ತಲುಪಿತ್ತು. ಆಗ ಹಲವು ದಿಗ್ಗಜರು ಇಂತಹ ಮಹತ್ವದ ಪಂದ್ಯಗಳಿಗೆ ಮೀಸಲು ದಿನ ಇರಬೇಕು ಎಂದು ಒತ್ತಾಯಿಸಿದರು.

ಈ ಹಿನ್ನೆಲೆಯಲ್ಲಿ ಕ್ರಿಕೆಟ್ ಆಸ್ಟ್ರೇಲಿಯಾವು ಐಸಿಸಿ ಕ್ರಿಕೆಟ್ ಸಮಿತಿಗೆ ಈ ಪ್ರಸ್ತಾವ ಸಲ್ಲಿಸಲಿದೆ. ವಿಶ್ವಕಪ್ ಟೂರ್ನಿಯು ಅಕ್ಟೋಬರ್ 18ರಿಂದ ನವೆಂಬರ್ 15ರವರೆ ಆಸ್ಟ್ರೇಲಿಯಾದ ಆತಿಥ್ಯದಲ್ಲಿ ನಡೆಯಲಿದೆ.

ADVERTISEMENT

‘ಪ್ರತಿಯೊಂದು ಮಹತ್ವದ ಟೂರ್ನಿಯು ಮುಕ್ತಾಯವಾದ ನಂತರ ಕೆಲವು ವಿಷಯಗಳ ಬಗ್ಗೆ ಸಲಹೆಗಳು ಬರುತ್ತವೆ. ಯಾವುದೇ ಋತುವಿನಲ್ಲಿ ಟೂರ್ನಿ ನಡೆದರೂ ಇಂತಹ ಕೆಲವು ಸಲಹೆಗಳು ಇರುತ್ತವೆ. ಅವುಗಳನ್ನು ಬಳಸಿಕೊಂಡು ಭವಿಷ್ಯದ ಟೂರ್ನಿಗಳಲ್ಲಿ ಸುಧಾರಣೆಗಳನ್ನು ಮಾಡಿಕೊಳ್ಳುತ್ತೇವೆ ಎನ್ನುವುದು ಮುಖ್ಯವಾಗುತ್ತದೆ’ ಎಂದು ಕ್ರಿಕೆ್ಟ್ ಆಸ್ಟ್ರೇಲಿಯಾ ಮುಖ್ಯ ಕಾರ್ಯನಿರ್ವಾಹಕ ಕೆವಿನ್ ರಾಬರ್ಟ್ಸ್‌ ತಿಳಿಸಿದ್ದಾರೆ.

‘ಆಟ ನಡೆಯುವ ಕ್ರೀಡಾಂಗಣಗಳು, ಪಿಚ್‌ಗಳ ಸ್ಥಿತಿ–ಗತಿಯ ಕುರಿತು ಯಾವುದೇ ಸಮಸ್ಯೆಗಳಿಲ್ಲ. ಟೂರ್ನಿ ಆರಂಭಕ್ಕೂ ಕೆಲವು ದಿನಗಳ ಮುನ್ನವಷ್ಟೇ ಎಲ್ಲ ವ್ಯವಸ್ಥೆಗಳನ್ನು ಪರಿಶೀಲಿಸಲಾಗುವುದು’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.