ADVERTISEMENT

ನಿಧಾನ ಗತಿ ಬೌಲಿಂಗ್‌; ಆಸ್ಟ್ರೇಲಿಯಾ ತಂಡಕ್ಕೆ ಸಂಭಾವನೆಯ ಶೇ 40ರಷ್ಟು ದಂಡ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 29 ಡಿಸೆಂಬರ್ 2020, 10:46 IST
Last Updated 29 ಡಿಸೆಂಬರ್ 2020, 10:46 IST
ಆಸ್ಟ್ರೇಲಿಯಾ ಕ್ರಿಕೆಟ್‌ ತಂಡದ ಆಟಗಾರರು
ಆಸ್ಟ್ರೇಲಿಯಾ ಕ್ರಿಕೆಟ್‌ ತಂಡದ ಆಟಗಾರರು   

ಮೆಲ್ಬರ್ನ್: ಭಾರತ ತಂಡದ ಎದುರಿನ ಎರಡನೇ ಟೆಸ್ಟ್‌ನಲ್ಲಿ ನಿಧಾನ ಗತಿಯ ಬೌಲಿಂಗ್‌ ನಡೆಸಿದ್ದಕ್ಕಾಗಿ ಆಸ್ಟ್ರೇಲಿಯಾ ತಂಡಕ್ಕೆ ಪಂದ್ಯದ ಸಂಭಾವನೆಯಲ್ಲಿ ಶೇ 40ರಷ್ಟು ದಂಡ ವಿಧಿಸಿರುವುದಾಗಿ ಐಸಿಸಿ ಪ್ರಕಟಿಸಿದೆ.

ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ (ಎಂಸಿಜಿ) ಆಸ್ಟ್ರೇಲಿಯಾ ವಿರುದ್ಧ ನಡೆದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಮಂಗಳವಾರ ಟೀಂ ಇಂಡಿಯಾ ಎಂಟು ವಿಕೆಟ್ ಅಂತರದ ರೋಚಕ ಗೆಲುವು ದಾಖಲಿಸಿದೆ. ಇದೇ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ತಂಡ ನಿಧಾನ ಗತಿಯ ಬೌಲಿಂಗ್‌ ನಡೆಸಿರುವುದಕ್ಕೆ ದಂಡ ಹಾಗೂ ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನ ಪಾಯಿಂಟ್‌ಗಳಲ್ಲಿ 4 ಪಾಯಿಂಟ್‌ ಕಡಿತಗೊಳಿಸಲಾಗಿದೆ.

ಟಿಮ್‌ ಪೇನ್‌ ನೇತೃತ್ವದ ಆಸಿಸ್ ತಂಡ ನಿಗದಿತ ಸಮಯದಲ್ಲಿ ನಡೆಸಬೇಕಾದ ಓವರ್‌ಗಳಿಗಿಂತ ಎರಡು ಓವರ್‌ಗಳಷ್ಟು ಕಡಿಮೆ ದಾಖಲಾಗಿರುವುದನ್ನು ಗಮನಿಸಿ ಎಮಿರೇಟ್ಸ್‌ ಐಸಿಸಿ ಮ್ಯಾಚ್‌ ರೆಫರಿಗಳ ಎಲೈಟ್‌ ಪ್ಯಾನಲ್‌ನ ಡೇವಿಡ್‌ ಬೂನ್‌ ದಂಡ ವಿಧಿಸಿದ್ದಾರೆ.

ADVERTISEMENT

ಆಟಗಾರರು ಮತ್ತು ಆಟಗಾರರ ಸಹಾಯಕ ಸಿಬ್ಬಂದಿಗೆ ಅನ್ವಯವಾಗುವ ಐಸಿಸಿ ನಿಯಮಾವಳಿಗಳ ಅನುಚ್ಛೇದ 2.22ರ ಪ್ರಕಾರ, ನಿಗದಿತ ಅವಧಿಯಲ್ಲಿ ಬೌಲಿಂಗ್‌ ಪೂರೈಸದಿದ್ದರೆ, ಪ್ರತಿ ಓವರ್‌ಗೆ ತಂಡದ ಆಟಗಾರರಿಗೆ ಪಂದ್ಯದ ಸಂಭಾವನೆಯ ಶೇ 20ರಷ್ಟು ದಂಡ ವಿಧಿಸಬಹುದಾಗಿರುತ್ತದೆ. ಹಾಗೇ ಅನುಚ್ಛೇದ 16.11.2ರ ಅನ್ವಯ ಪ್ರತಿ ಓವರ್‌ ನಿಧಾನ ಗತಿಗೆ ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್ಟ್‌ನಲ್ಲಿ 2 ಪಾಯಿಂಟ್‌ಗಳನ್ನು ಕಡಿತಗೊಳಿಸಬಹುದಾಗುತ್ತದೆ. ಹೀಗಾಗಿ, ಆಸ್ಟ್ರೇಲಿಯಾ ತಂಡಕ್ಕೆ 4 ಪಾಯಿಂಟ್‌ಗಳನ್ನು ಕಡಿತಗೊಳಿಸಲಾಗಿದೆ ಹಾಗೂ ಸಂಭಾವನೆಯ ಶೇ 40ರಷ್ಟು ದಂಡ ವಿಧಿಸಲಾಗಿದೆ.

ಪ್ರಸ್ತಾಪಿಸಿರುವ ದಂಡನೆಗೆ ಟಿಮ್‌ ಪೇನ್‌ ಒಪ್ಪಿಗೆ ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.