ರಿಷಭ್ ಪಂತ್
ಪಿಟಿಐ ಚಿತ್ರ
ಮೆಲ್ಬರ್ನ್: ವಿಕೆಟ್‌ಕೀಪರ್ ಬ್ಯಾಟರ್ ರಿಷಭ್ ಪಂತ್ ಅವರು ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಔಟಾದ ರೀತಿಯನ್ನು ಮಾಜಿ ಕ್ರಿಕೆಟಿಗ ಸುನೀಲ್ ಗವಾಸ್ಕರ್ ಟೀಕಿಸಿದ್ದಾರೆ. ಅಗತ್ಯವಿದ್ದ ಸಂದರ್ಭದಲ್ಲಿ ಮೂರ್ಖತನದ ಹೊಡೆತ ಪ್ರಯೋಗಿಸಿ ವಿಕೆಟ್ ಕಳೆದುಕೊಳ್ಳುವ ಮೂಲಕ ತಂಡವನ್ನು ಇನ್ನಷ್ಟು ಕುಸಿಯುವಂತೆ ಮಾಡಿದಿರಿ ಎಂದು ದೂರಿದ್ದಾರೆ.
ಬಾರ್ಡರ್–ಗವಾಸ್ಕರ್ ಟೆಸ್ಟ್ ಕ್ರಿಕೆಟ್ ಸರಣಿಯ ನಾಲ್ಕನೇ ಪಂದ್ಯವು ಮೆಲ್ಬರ್ನ್‌ನಲ್ಲಿ ನಡೆಯುತ್ತಿದೆ. ಆಸ್ಟ್ರೇಲಿಯಾ ಮೊದಲ ಇನಿಂಗ್ಸ್‌ನಲ್ಲಿ ಗಳಿಸಿರುವ 474 ರನ್‌ಗಳಿಗೆ ಪ್ರತಿಯಾಗಿ ಭಾರತ, ಮೂರನೇ ದಿನದಾಟದ ಅಂತ್ಯಕ್ಕೆ 358 ರನ್ ಗಳಿಸಿದೆ. 21 ವರ್ಷದ ಬ್ಯಾಟರ್ ನಿತೀಶ್ ಕುಮಾರ್ ರೆಡ್ಡಿ ಅಜೇಯ ಶತಕ ಸಿಡಿಸುವ ಮೂಲಕ ನೆರವಾಗಿದ್ದಾರೆ.
ಭಾರತ ತಂಡ ಎರಡನೇ ದಿನದಾಟದ ಅಂತ್ಯಕ್ಕೆ 5 ವಿಕೆಟ್‌ಗಳನ್ನು ಕಳೆದುಕೊಂಡು 164 ರನ್ ಗಳಿಸಿತ್ತು. ರಿಷಭ್ 6 ರನ್ ಹಾಗೂ ರವೀಂದ್ರ ಜಡೇಜ 4 ರನ್ ಗಳಿಸಿ ಕ್ರೀಸ್‌ನಲ್ಲಿದ್ದರು. ಮರುದಿನ ಇವರಿಬ್ಬರು ಜವಾಬ್ದಾರಿಯುತ ಇನಿಂಗ್ಸ್ ಕಟ್ಟುವ ಅಗತ್ಯವಿತ್ತು.
ಆದಾಗ್ಯೂ, ರಕ್ಷಣಾತ್ಮಕವಾಗಿ ಆಡಲು ವಿಫಲವಾದ ರಿಷಭ್, ಹಿಂದಿನ ದಿನದ ಮೊತ್ತಕ್ಕೆ 22 ರನ್ ಸೇರಿಸಿ ಔಟಾದರು. ಇನಿಂಗ್ಸ್‌ನ 56ನೇ ಓವರ್‌ನಲ್ಲಿ ಸ್ಕಾಟ್ ಬೊಲ್ಯಾಂಡ್ ಹಾಕಿದ 4ನೇ ಎಸೆತಕ್ಕೆ ಲ್ಯಾಪ್/ಸ್ಕೂಪ್ ಹೊಡೆತ ಪ್ರಯೋಗಿಸಲು ಹೋಗಿ ವಿಫಲವಾದರು. ಬ್ಯಾಟ್ ಅಂಚಿಗೆ ಬಡಿದು ಮೇಲಕ್ಕೆ ಚಿಮ್ಮಿದ ಚೆಂಡನ್ನು ವಿಕೆಟ್ ಕೀಪರ್ ಹಿಂದೆ ಬೌಂಡರಿ ಗೆರೆ ಬಳಿ ಇದ್ದ ನೇಥನ್ ಲಯನ್ ಹಿಡಿದರು. ಇದರೊಂದಿಗೆ, ರಿಷಭ್ ಇನಿಂಗ್ಸ್‌ಗೆ ತೆರೆ ಬಿದ್ದಿತು.
ಹಿಂದಿನ ಎಸೆತದಲ್ಲೂ ಇಂಥದೇ ಪ್ರಯತ್ನ ಮಾಡಿದ್ದರು. ಆದರೆ, ಚೆಂಡು ಅವರ ಹೊಟ್ಟೆಗೆ ಬಡಿದಿತ್ತು.
ರಿಷಭ್ ಔಟಾದ ರೀತಿಯನ್ನು ವೀಕ್ಷಕ ವಿವರಣೆ ವೇಳೆ ಟೀಕಿಸಿರುವ ಗವಾಸ್ಕರ್, 'ಮೂರ್ಖ, ಮೂರ್ಖ, ಮೂರ್ಖ. ಇಬ್ಬರು ಫೀಲ್ಡರ್‌ಗಳಿದ್ದರೂ, ಅಂಥದೇ ಹೊಡೆತಕ್ಕೆ ಮುಂದಾದಿರಿ. ಹಿಂದಿನ ಎಸೆತದಲ್ಲೂ ಅಂಥದೇ ಪ್ರಯತ್ನ ಮಾಡಿ ವಿಫಲವಾಗಿದ್ದಿರಿ. ನೀವು ಸಿಕ್ಕಿಬಿದ್ದದ್ದು ಎಲ್ಲಿ ಎಂದು ನೋಡಿ. ಡೀಪ್ ಥರ್ಡ್ ಮ್ಯಾನ್ ನಿಮ್ಮ ಕ್ಯಾಚ್ ಪಡೆದಿದ್ದಾರೆ. ಹಾಗಾಗಿ, ವಿಕೆಟ್ ಕೈಚೆಲ್ಲಿದ್ದೀರಿ' ಎಂದಿದ್ದಾರೆ.
'ನೀವು ಅಂತಹ ಹೊಡೆತಕ್ಕೆ ಮುಂದಾಗುವ ಸ್ಥಿತಿಯಲ್ಲಿ ಭಾರತ ಇರಲಿಲ್ಲ. ಅದನ್ನು ಅರ್ಥ ಮಾಡಿಕೊಳ್ಳಬೇಕಿತ್ತು. ನೀವು, ನನ್ನ ಆಟ ಇರುವುದೇ ಹಾಗೆ ಎನ್ನಲು ಸಾಧ್ಯವಿಲ್ಲ. ನಿಮ್ಮ ಸ್ವಾಭಾವಿಕ ಆಟ ಅದಲ್ಲ. ಮೂರ್ಖತನದ ಆ ಹೊಡೆತ, ತಂಡವನ್ನು ಕೆಟ್ಟದಾಗಿ ಕುಸಿಯುವಂತೆ ಮಾಡಿತು' ಎಂದು ಅಭಿಪ್ರಾಯಪಟ್ಟಿದ್ದಾರೆ.
ಭಾರತ ಕ್ರಿಕೆಟ್ ತಂಡದ ಮಾಜಿ ಕೋಚ್ ರವಿಶಾಸ್ತ್ರಿ ಅವರು. 'ಅದು ಅಪಾಯಕಾರಿ ಹೊಡೆತ' ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.