ADVERTISEMENT

Women's ODI: ಆಸ್ಟ್ರೇಲಿಯಾಗೆ ಅಧಿಕಾರಯುತ ಜಯ

ಪಿಟಿಐ
Published 24 ಫೆಬ್ರುವರಿ 2026, 16:13 IST
Last Updated 24 ಫೆಬ್ರುವರಿ 2026, 16:13 IST
ಮೂರು ವಿಕೆಟ್‌ ಗಳಿಸಿದ ಆಸ್ಟ್ರೇಲಿಯಾ ತಂಡದ ಆ್ಯಷ್ಲೆ ಗಾರ್ಡನರ್‌
ಮೂರು ವಿಕೆಟ್‌ ಗಳಿಸಿದ ಆಸ್ಟ್ರೇಲಿಯಾ ತಂಡದ ಆ್ಯಷ್ಲೆ ಗಾರ್ಡನರ್‌   

ಬ್ರಿಸ್ಬೇನ್‌: ವಿಶ್ವ ಚಾಂಪಿಯನ್‌ ಭಾರತ ಮಹಿಳಾ ತಂಡವನ್ನು 6 ವಿಕೆಟ್‌ಗಳಿಂದ ಮಣಿಸಿದ ಅಲಿಸಾ ಹೀಲಿ ಪಡೆಯು ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1–0 ಮುನ್ನಡೆ ಗಳಿಸಿತು.

ಅಲನ್‌ ಬಾರ್ಡರ್‌ ಫೀಲ್ಡ್‌ನಲ್ಲಿ ಮಂಗಳವಾರ ನಡೆದ ಮೊದಲ ಪಂದ್ಯದಲ್ಲಿ ಟಾಸ್‌ ಗೆದ್ದ ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಬ್ಯಾಟಿಂಗ್‌ ಆಯ್ದುಕೊಂಡರು. ಆದರೆ, ಸ್ಪಿನ್ನರ್‌ ಆ್ಯಷ್ಲೆ ಗಾರ್ಡನರ್‌ (33ಕ್ಕೆ3) ಹಾಗೂ ಮಧ್ಯಮ ವೇಗಿ ಮೆಗನ್‌ ಶೂಟ್‌ (42ಕ್ಕೆ2) ಅವರ ಪರಿಣಾಮಕಾರಿ ಬೌಲಿಂಗ್‌ ಎದುರು ಭಾರತ ತಂಡ 48.3 ಓವರ್‌ಗಳಲ್ಲಿ 214 ರನ್‌ಗಳಿಗೆ ಕುಸಿಯಿತು.

ಗುರಿ ಬೆನ್ನಟ್ಟಿದ ಆತಿಥೇಯ ತಂಡಕ್ಕೆ ನಾಯಕಿ ಹೀಲಿ (50; 70ಎ, 4x4) ಹಾಗೂ ಫೋಬಿ ಲಿಚ್‌ಫೀಲ್ಡ್‌ (32; 32ಎ, 4x6) ಉತ್ತಮ ಆರಂಭ ಒದಗಿಸಿದರು. ಸ್ಪಿನ್ನರ್‌ ಶ್ರೀಚರಣಿ ಅವರು ಇನಿಂಗ್ಸ್‌ನ 10ನೇ ಓವರ್‌ನಲ್ಲಿ ಲಿಚ್‌ಫೀಲ್ಡ್‌ ಹಾಗೂ ಜಾರ್ಜಿಯಾ ವಾಲ್‌ (0; 1ಎ) ಅವರ ವಿಕೆಟ್‌ ಗಳಿಸಿದರು. ಆದರೆ, ವಿಕೆಟ್ ಕೀಪರ್‌ ಬೆತ್‌ ಮೂನಿ (76; 79ಎ, 4x5, 6x2) ಅವರೊಂದಿಗೆ 64 ರನ್‌ ಜೊತೆಯಾಟವಾಡಿದ ಹೀಲಿ ಪಂದ್ಯವನ್ನು ಆಸ್ಟ್ರೇಲಿಯಾದ ನಿಯಂತ್ರಣಕ್ಕೆ ತಂದರು.

ADVERTISEMENT

ಹೀಲಿ ಔಟಾದ ಬಳಿದ ಕ್ರೀಸ್‌ಗಿಳಿದ ಅನ್ನಾಬೆಲ್‌ ಸದರ್ಲೆಂಡ್‌ 44 ಎಸೆತಗಳಲ್ಲಿ ನಾಲ್ಕು ಬೌಂಡರಿ ಹಾಗೂ ಒಂದು ಸಿಕ್ಸರ್‌ ಸಹಿತ ಅಜೇಯ 48 ರನ್‌ ಸೂರೆ ಮಾಡಿದರು. ಆಸ್ಟ್ರೇಲಿಯಾ ತಂಡವು 38.2 ಓವರ್‌ಗಳಲ್ಲಿ 4 ವಿಕೆಟ್‌ಗೆ 214 ರನ್‌ ಪೇರಿಸಿ ಅಧಿಕಾರಯುತ ಜಯ ಸಾಧಿಸಿತು.

ಇದಕ್ಕೆ ಮೊದಲು, ಆಸ್ಟ್ರೇಲಿಯಾ ಬೌಲರ್‌ಗಳ ಸಾಂಘಿಕ ದಾಳಿಯ ಎದುರು ಅಲ್ಪ ಮೊತ್ತಕ್ಕೆ ಕುಸಿಯುವ ಅಪಾಯದಲ್ಲಿದ್ದ ಭಾರತ ತಂಡಕ್ಕೆ ಉಪನಾಯಕಿ ಸ್ಮೃತಿ ಮಂಧಾನ (58; 68ಎ, 4x7) ಹಾಗೂ ಹರ್ಮನ್‌ಪ್ರೀತ್‌ (53; 84ಎ, 4x3) ಆಸರೆಯಾದರು. ಕೊನೆಯಲ್ಲಿ ಕಶ್ವಿ ಗೌತಮ್‌ 44 ಎಸೆತಗಳಲ್ಲಿ 43 ರನ್‌ ಗಳಿಸಿ, ತಂಡದ ಮೊತ್ತ 200ರ ಗಡಿ ದಾಟಲು ಕಾರಣರಾದರು. ಅವರ ಇನಿಂಗ್ಸ್‌ನಲ್ಲಿ ತಲಾ ಮೂರು ಬೌಂಡರಿ ಹಾಗೂ ಸಿಕ್ಸರ್‌ಗಳಿದ್ದವು.

ಸರಣಿಯ ಎರಡನೇ ಪಂದ್ಯವು ಹೋಬರ್ಟ್‌ನಲ್ಲಿ ಶುಕ್ರವಾರ ನಡೆಯಲಿದೆ.

ಸಂಕ್ಷಿಪ್ತ ಸ್ಕೋರು: ಭಾರತ: 48.3 ಓವರ್‌ಗಳಲ್ಲಿ 214 (ಸ್ಮೃತಿ ಮಂಧಾನ 58, ಹರ್ಮನ್‌ಪ್ರೀತ್‌ ಕೌರ್‌ 53, ಕಶ್ವೀ ಗೌತಮ್‌ 43; ಆ್ಯಷ್ಲೆ ಗಾರ್ಡನರ್‌ 33ಕ್ಕೆ3, ಮೆಗನ್‌ ಶೂಟ್‌ 42ಕ್ಕೆ2). ಆಸ್ಟ್ರೇಲಿಯಾ: 38.2 ಓವರ್‌ಗಳಲ್ಲಿ 4 ವಿಕೆಟ್‌ಗೆ 214 (ಅಲಿಸಾ ಹೀಲಿ 50, ಬೆತ್‌ ಮೂನಿ 76, ಅನ್ನಾಬೆಲ್‌ ಸದರ್ಲೆಂಡ್‌ ಔಟಾಗದೇ 48; ಶ್ರೀಚರಣಿ 41ಕ್ಕೆ2). ಪಂದ್ಯದ ಆಟಗಾರ್ತಿ: ಬೆತ್‌ ಮೂನಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.