ADVERTISEMENT

ಟಿ20 ಪಂದ್ಯ | ಜಾರ್ಜಿಯಾ ಅಬ್ಬರ: ಭಾರತ ವಿರುದ್ಧ ಆಸ್ಟ್ರೇಲಿಯಾ ವನಿತೆಯರಿಗೆ ಜಯ

ಪಿಟಿಐ
Published 19 ಫೆಬ್ರುವರಿ 2026, 14:24 IST
Last Updated 19 ಫೆಬ್ರುವರಿ 2026, 14:24 IST
<div class="paragraphs"><p>ಜಾರ್ಜಿಯಾ ವೋಲ್</p></div>

ಜಾರ್ಜಿಯಾ ವೋಲ್

   

ಕೆನ್‌ಬೆರಾ: ಜಾರ್ಜಿಯಾ ವೋಲ್ ಮತ್ತು ಬೆತ್ ಮೂನಿ ಅವರ ನಡುವಣ ಮೊದಲ ವಿಕೆಟ್‌ಗೆ ದಾಖಲೆ ಜೊತೆಯಾಟದ ನೆರವಿನಿಂದ ಆಸ್ಟ್ರೇಲಿಯಾ ತಂಡ ಗುರುವಾರ ನಡೆದ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಭಾರತ ತಂಡದ ವಿರುದ್ಧ 19 ರನ್‌ಗಳ ಜಯ ಸಾಧಿಸಿತು. ಮೂರು ಪಂದ್ಯಗಳ ಸರಣಿಯನ್ನು ಆತಿಥೇಯರು 1–1ರಲ್ಲಿ ಸಮ ಮಾಡಿಕೊಂಡರು.

ಸರಣಿಯ ಅಂತಿಮ ಹಾಗೂ ನಿರ್ಣಾಯಕ ಪಂದ್ಯ ಶನಿವಾರ ಆಡಿಲೇಡ್‌ ಓವಲ್‌ನಲ್ಲಿ ನಡೆಯಲಿದೆ.

ADVERTISEMENT

ವೋಲ್ ಕೇವಲ 57 ಎಸೆತಗಳಲ್ಲಿ ಒಂದು ಸಿಕ್ಸರ್, 11 ಬೌಂಡರಿಗಳಿದ್ದ 88 ರನ್ ಬಾರಿಸಿದರೆ, ಬೆತ್ ಮೂನಿ ಕೊಂಚ ಸಂಯಮದ ಆಟವಾಡಿ 39 ಎಸೆತಗಳಲ್ಲಿ 46 ರನ್ (4x4) ಗಳಿಸಿದರು. ಇವರಿಬ್ಬರು ಮೊದಲ ವಿಕೆಟ್‌ಗೆ 128 ರನ್ ಸೇರಿಸಿ ತಂಡಕ್ಕೆ ಭದ್ರ ಅಡಿಪಾಯ ಹಾಕಿಕೊಟ್ಟರು.

ಭಾರತ ಸಹ ಉತ್ತಮ ಆರಂಭ ಮಾಡಿದರೂ ನಂತರ ವಿಕೆಟ್‌ಗಳು ನಿಯಮಿತವಾಗಿ ಬಿದ್ದವು. ಅಂತಿಮವಾಗಿ 9 ವಿಕೆಟ್‌ಗೆ 144 ರನ್‌ ಗಳಿಸಲಷ್ಟೇ ಶಕ್ತವಾಯಿತು. ಶಫಾಲಿ ವರ್ಮಾ (29) ಮತ್ತು ಸ್ಮೃತಿ ಮಂದಾನ (31) ಮೊದಲ ವಿಕೆಟ್‌ಗೆ 6.4 ಓವರುಗಳಲ್ಲಿ 57 ರನ್ ಸೇರಿಸಿದ್ದರು. ಆದರೆ ಮಧ್ಯಮ ಕ್ರಮಾಂಕದಲ್ಲಿ ನಾಯಕಿ ಹರ್ಮನ್‌ಪ್ರೀತ್ ಕೌರ್ (36, 30ಎಸೆತ, 4x5) ಬಿಟ್ಟರೆ ಉಳಿದವರು, ಆಸ್ಟ್ರೇಲಿಯಾದ ಸಾಂಘಿಕ ಬೌಲಿಂಗ್ ದಾಳಿಯನ್ನು ಎದುರಿಸುವಲ್ಲಿ ವಿಫಲರಾದರು. ಒಂದು ಹಂತದಲ್ಲಿ ಭಾರತ ಏಳು ರನ್‌ಗಳ ಅಂತರದಲ್ಲಿ ಆರು ವಿಕೆಟ್‌ಗಳನ್ನು ಕಳೆದುಕೊಂಡಿತು.

ಆಫ್‌ ಸ್ಪಿನ್ನರ್ ಆ್ಯಶ್ಲೆ ಗಾರ್ಡನರ್‌ 22 ರನ್ನಿಗೆ 3 ವಿಕೆಟ್‌ ಪಡೆದರೆ, ಕಿಮ್‌ ಗಾರ್ತ್‌, ಅನ್ನಾಬೆಲ್ ಸದರ್‌ಲ್ಯಾಂಡ್‌ ಮತ್ತು ಆಸ್ಟ್ರೇಲಿಯಾ ನಾಯಕಿ ಸೋಫಿ ಮಾಲಿನೆ ತಲಾ ಎರಡು ವಿಕೆಟ್‌ಗಳನ್ನು ಪಡೆದರು.

ಸಂಕ್ಷಿಪ್ತ ಸ್ಕೋರು: ಆಸ್ಟ್ರೇಲಿಯಾ ಮಹಿಳಾ ತಂಡ: 20 ಓವರುಗಳಲ್ಲಿ 4 ವಿಕೆಟ್‌ಗೆ 163 (ಜಾರ್ಜಿಯಾ ವೋಲ್ 88, ಬೆತ್ ಮೂನಿ 46; ಅರುಂಧತಿ ರೆಡ್ಡಿ 30ಕ್ಕೆ2); ಭಾರತ ಮಹಿಳಾ ತಂಡ: 20 ಓವರುಗಳಲ್ಲಿ 9 ವಿಕೆಟ್‌ಗೆ 144 (ಶಫಾಲಿ ವರ್ಮಾ 29, ಸ್ಮೃತಿ ಮಂದಾನ 31,  ಹರ್ಮನ್‌ಪ್ರೀತ್ ಕೌರ್ 36; ಆಶ್ಲೆ ಗಾರ್ಡನರ್ 22ಕ್ಕೆ3, ಕಿಮ್‌ ಗಾರ್ತ್ 16ಕ್ಕೆ2, ಅನ್ನಾಬೆಲ್ ಸದರ್‌ಲ್ಯಾಂಡ್ 18ಕ್ಕೆ2, ಸೋಫಿ ಮಾಲಿನ 37ಕ್ಕೆ2); ಪಂದ್ಯದ ಆಟಗಾರ್ತಿ: ಜಾರ್ಜಿಯಾ ವೋಲ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.