
ಬ್ರಿಸ್ಬೇನ್: ಎರಡೇ ದಿನಗಳಲ್ಲಿ ಮೊದಲ ಟೆಸ್ಟ್ ಪಂದ್ಯ ಗೆದ್ದ ಆಸ್ಟ್ರೇಲಿಯಾ ತಂಡವು ಗುರುವಾರ ಆರಂಭವಾಗುವ ಆ್ಯಷಸ್ ಸರಣಿಯ ಎರಡನೇ ಟೆಸ್ಟ್‌ನಲ್ಲಿ ಪ್ರವಾಸಿ ಇಂಗ್ಲೆಂಡ್ ತಂಡವನ್ನು ಹೆಚ್ಚಿನ ವಿಶ್ವಾಸದೊಡನೆ ಎದುರಿಸಲಿದೆ. ಗ್ಯಾಬಾದಲ್ಲಿ ನಡೆಯುವ ಈ ಪಂದ್ಯ ಪಿಂಕ್‌ಬಾಲ್ (ಹಗಲು–ರಾತ್ರಿ) ಟೆಸ್ಟ್ ಆಗಿದೆ.
ಪರ್ತ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಸ್ಟೀವನ್ ಸ್ಮಿತ್ ಸಾರಥ್ಯದ ಆಸ್ಟ್ರೇಲಿಯಾ ಎಂಟು ವಿಕೆಟ್‌ಗಲಿಂದ ಜಯಗಳಿಸಿತ್ತು.
ಆಸ್ಟ್ರೇಲಿಯಾದ ಆರಂಭ ಆಟಗಾರ ಉಸ್ಮಾನ್ ಖ್ವಾಜಾ ಅವರು ಬೆನ್ನುನೋವಿನ ಕಾರಣ ಈ ಪಂದ್ಯದಲ್ಲಿ ಆಡುತ್ತಿಲ್ಲ. ಹೀಗಾಗಿ ಜೋಶ್ ಇಂಗ್ಲಿಸ್ ಅವರು ಮಧ್ಯಮ ಕ್ರಮಾಂಕದಲ್ಲಿ ಆಡಲಿದ್ದಾರೆ. ಟ್ರಾವಿಸ್ ಹೆಡ್ ಮೊದಲ ಟೆಸ್ಟ್‌ನಲ್ಲಿ ಆರಂಭ ಆಟಗಾರನಾಗಿ ಆಡಿದ್ದರು.
ಪ್ಯಾಟ್ ಕಮಿನ್ಸ್ ಅವರು ಆಡುವುದು ಇನ್ನೂ ಖಚಿತವಾಗಿಲ್ಲ. ಕಮಿನ್ಸ್ ಮೊದಲ ಟೆಸ್ಟ್‌ನಲ್ಲಿ ಆಡಿರಲಿಲ್ಲ. ಆದರೆ ಬುಧವಾರ ಪಿಚ್ ಪರಿಶೀಲನೆ ವೇಳೆ ಹಂಗಾಮಿ ನಾಯಕ ಸ್ಮಿತ್ ಮತ್ತುಕೋಚ್ ಆ್ಯಂಡ್ರೂ ಮೆಕ್‌ಡೊನಾಲ್ಡ್ ಅವರನ್ನು ಸೇರಿಕೊಂಡರು. ‘ನೆಟ್ಸ್‌ನಲ್ಲಿ ಬೌಲಿಂಗ್ ನೋಡಿದಾಗ ಅವರು ಚೆನ್ನಾಗಿಯೇ ಕಂಡರು’ ಎಂದು ಸ್ಮಿತ್ ಅವರು ಪೂರ್ಣಾವಧಿ ನಾಯಕನ ಬಗ್ಗೆ ತಿಳಿಸಿದರು.
ಹಗಲು–ರಾತ್ರಿ ಟೆಸ್ಟ್‌ಗಳಲ್ಲಿ ಆಸ್ಟ್ರೇಲಿಯಾ ಅತ್ಯುತ್ತಮ ದಾಖಲೆ ಹೊಂದಿದೆ. ತನ್ನ ನೆಲದಲ್ಲಿ ನಡೆದ 13 ಇಂಥ ಪಂದ್ಯಗಳಲ್ಲಿ 12ರಲ್ಲಿ ಜಯಗಳಿಸಿದೆ. ಒಂದು ಟೆಸ್ಟ್‌ನಲ್ಲಿ (2023ರ ಜನವರಿಯಲ್ಲಿ) ಮಾತ್ರ ವೆಸ್ಟ್ ಇಂಡೀಸ್ ಎದುರು ಎಂಟು ರನ್‌ಗಳ ಅನಿರೀಕ್ಷಿತ ಸೋಲು ಅನುಭವಿಸಿತ್ತು. ಗ್ಯಾಬಾದಲ್ಲಿ ಇಂಗ್ಲೆಂಡ್ 1986ರಿಂದೀಚೆಗೆ ಒಮ್ಮೆಯೂ ಆ್ಯಷಸ್ ಟೆಸ್ಟ್ ಪಂದ್ಯ ಗೆದ್ದಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.