ADVERTISEMENT

ಸಿ.ಕೆ.ನಾಯ್ಡು ಟ್ರೋಫಿ | ಆಯುಷ್‌ ಶತಕ: ಮುಂಬೈ ಬಿಗಿಹಿಡಿತ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2026, 21:00 IST
Last Updated 22 ಫೆಬ್ರುವರಿ 2026, 21:00 IST
ಅಂಗ್‌ಕ್ರಿಶ್ ರಘುವಂಶಿ
ಅಂಗ್‌ಕ್ರಿಶ್ ರಘುವಂಶಿ   

ಬೆಂಗಳೂರು: ಆರಂಭಿಕ ಆಟಗಾರ ಆಯುಷ್ ಜೇಥ್ವಾ (ಔಟಾಗದೇ 139;316ಎ) ಅವರ ಅಜೇಯ ಶತಕದ ಬಲದಿಂದ ಆತಿಥೇಯ ಮುಂಬೈ ತಂಡವು ಭಾನುವಾರ ಕರ್ನಲ್‌ ಸಿ.ಕೆ.ನಾಯ್ಡು ಟ್ರೋಫಿ ಕ್ವಾರ್ಟರ್‌ ಫೈನಲ್‌ನಲ್ಲಿ ಕರ್ನಾಟಕದ ವಿರುದ್ಧ ಬಿಗಿಹಿಡಿತ ಸಾಧಿಸಿದೆ.

ಮುಂಬೈನ ಜಿಮ್‌ಖಾನಾದ ಸಚಿನ್‌ ತೆಂಡೂಲ್ಕರ್‌ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಕರ್ನಾಟಕ ತಂಡವು ಮೊದಲ ಇನಿಂಗ್ಸ್‌ನಲ್ಲಿ 240 ರನ್‌ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಮುಂಬೈ ತಂಡವು ಎರಡನೇ ದಿನದಾಟದ ಮುಕ್ತಾಯಕ್ಕೆ 97 ಓವರ್‌ಗಳಲ್ಲಿ 1 ವಿಕೆಟ್‌ಗೆ 310 ರನ್‌ ಗಳಿಸಿ, 70 ರನ್‌ಗಳ ಮುನ್ನಡೆ ಸಾಧಿಸಿದೆ. 

ವಿಕೆಟ್‌ ನಷ್ಟವಿಲ್ಲದೆ 12 ರನ್‌ಗಳೊಂದಿಗೆ ದಿನದಾಟವನ್ನು ಆರಂಭಿಸಿದ ಮುಂಬೈ ತಂಡದ ಅಂಗ್‌ಕ್ರಿಶ್ ರಘುವಂಶಿ (92;117ಎ, 4X11, 6X1) ಮತ್ತು ಆಯುಷ್‌ ಅವರು ಮೊದಲ ವಿಕೆಟ್‌ಗೆ 200 ರನ್‌ ಸೇರಿಸಿದರು. ಈ ಜೋಡಿಯು ಕರ್ನಾಟಕದ ಬೌಲರ್‌ಗಳನ್ನು ದಂಡಿಸಿತು. ಆಯುಷ್‌ ಇನಿಂಗ್ಸ್‌ನಲ್ಲಿ 18 ಬೌಂಡರಿ ಮತ್ತು ಒಂದು ಸಿಕ್ಸರ್ ಸೇರಿದ್ದವು. 

ADVERTISEMENT

ಶತಕದ ಹೊಸ್ತಿಲಲ್ಲಿದ್ದ ರಘುವಂಶಿ ಅವರು ಕೆ.ಪಿ. ಕಾರ್ತಿಕೇಯ ಅವರಿಗೆ ವಿಕೆಟ್‌ ಒಪ್ಪಿಸಿದರು. ನಂತರ ಬಂದ ಮನನ್‌ ಭಟ್‌ (ಔಟಾಗದೇ 64;92ಎ, 4X8, 6X1) ಅವರು ಆಯುಷ್‌ಗೆ ಜೊತೆಯಾದರು. ಈ ಜೋಡಿ ಮುರಿಯದ ಎರಡನೇ ವಿಕೆಟ್‌ ಜೊತೆಯಾಟದಲ್ಲಿ 110 ರನ್‌ ಸೇರಿಸಿತು. ಇನಿಂಗ್ಸ್‌ ಚುಕ್ತಾ ಮಾಡಿರುವ ಮುಂಬೈ ತಂಡವು ಬೃಹತ್‌ ಮುನ್ನಡೆಯತ್ತ ದಾಪುಗಾಲಿಟ್ಟಿದೆ. ದಿನವಿಡೀ ಬೆವರು ಹರಿಸಿದ ಕರ್ನಾಟಕದ ಬೌಲರ್‌ಗಳು ಕೇವಲ ಒಂದು ವಿಕೆಟ್‌ ಪಡೆಯಲಷ್ಟೇ ಶಕ್ತವಾದರು. 

ಸಂಕ್ಷಿಪ್ತ ಸ್ಕೋರು:

ಕರ್ನಾಟಕ: 78.5 ಓವರ್‌ಗಳಲ್ಲಿ 240. ಮುಂಬೈ: 97 ಓವರ್‌ಗಳಲ್ಲಿ 1 ವಿಕೆಟ್‌ಗೆ 310 (ಅಂಗ್‌ಕ್ರಿಶ್ ರಘುವಂಶಿ 92, ಆಯುಷ್ ಜೇಥ್ವಾ ಔಟಾಗದೇ 139, ಮನನ್‌ ಭಟ್‌ ಔಟಾಗದೇ 64; ಕೆ.ಪಿ. ಕಾರ್ತಿಕೇಯ 42ಕ್ಕೆ 1). 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.