ADVERTISEMENT

ಕೋವಿಡ್‌–19 ವಿರುದ್ಧ ಹೋರಾಟ | ಬ್ಯಾಟ್‌, ಜೆರ್ಸಿ ಹರಾಜಿಗಿಟ್ಟ ಅಜರ್‌ ಅಲಿ

ಪಿಟಿಐ
Published 28 ಏಪ್ರಿಲ್ 2020, 20:00 IST
Last Updated 28 ಏಪ್ರಿಲ್ 2020, 20:00 IST
ಅಜರ್‌ ಅಲಿ (ಸಂಗ್ರಹ ಚಿತ್ರ)
ಅಜರ್‌ ಅಲಿ (ಸಂಗ್ರಹ ಚಿತ್ರ)   

ನವದೆಹಲಿ: ಪಾಕಿಸ್ತಾನ ಟೆಸ್ಟ್‌ ಕ್ರಿಕೆಟ್‌ ತಂಡದ ನಾಯಕ ಅಜರ್‌ ಅಲಿ ಅವರು ಕೋವಿಡ್‌–19 ಪಿಡುಗಿನ ವಿರುದ್ಧದ ಹೋರಾಟಕ್ಕೆ ನೆರವಾಗಲು ನಿರ್ಧರಿಸಿದ್ದಾರೆ. ವೆಸ್ಟ್‌ ಇಂಡೀಸ್‌ ವಿರುದ್ಧದ ಪಂದ್ಯದಲ್ಲಿ ತ್ರಿಶತಕ ಗಳಿಸಿದ ವೇಳೆ ಬಳಸಿದ್ದ ಬ್ಯಾಟ್‌ ಹಾಗೂ 2017ರ ಚಾಂಪಿಯನ್ಸ್‌ ಟ್ರೋಫಿ ಗೆದ್ದ ಸಂದರ್ಭದಲ್ಲಿ ಧರಿಸಿದ್ದ ಜೆರ್ಸಿಯನ್ನು ಹರಾಜಿಗೆ ಇಟ್ಟಿದ್ದಾರೆ.

‘ಈ ಬ್ಯಾಟ್‌ ಮತ್ತು ಜೆರ್ಸಿ ನನಗೆ ಅತ್ಯಂತ ಪ್ರಿಯ ವಸ್ತುಗಳು. ಇವೆರಡನ್ನೂ ಹರಾಜಿಗಿಟ್ಟು ದೊರೆತ ಹಣವನ್ನು ಕೋವಿಡ್‌ನಿಂದ ಸಂತ್ರಸ್ತರಾದವರಿಗೆ ನೀಡಲು ನಿರ್ಧರಿಸಿದ್ದೇನೆ. ಪ್ರತಿಯೊಂದರ ಮೂಲ ಬೆಲೆ 10 ಲಕ್ಷ ಪಾಕಿಸ್ತಾನ ರೂಪಾಯಿಗಳು. ಮೇ 5ರವರೆಗೆ ಹರಾಜು ಅವಧಿ ಇದೆ’ ಎಂದು ಅಲಿ ಟ್ವೀಟ್‌ ಮಾಡಿದ್ದಾರೆ.

ಜೆರ್ಸಿಯ ಮೇಲೆ ಪಾಕಿಸ್ತಾನದ ಅಂದಿನ ಎಲ್ಲ ಆಟಗಾರರ ಆಟೋಗ್ರಾಫ್‌ ಇದೆ.

ADVERTISEMENT

2016ರಲ್ಲಿ ಯುಎಇನಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧ ನಡೆದ ಪಂದ್ಯದಲ್ಲಿ ಅಲಿ ತ್ರಿಶತಕ (ಅಜೇಯ 302) ಬಾರಿಸಿದ್ದರು. ಹಗಲು–ರಾತ್ರಿ ಟೆಸ್ಟ್‌ನಲ್ಲಿ ಈ ಸಾಧನೆ ಮಾಡಿದ ವಿಶ್ವದ ಮೊದಲ ಆಟಗಾರ ಎನಿಸಿಕೊಂಡಿದ್ದರು.

2017ರ ಚಾಂಪಿಯನ್ಸ್‌ ಟ್ರೋಫಿ ಫೈನಲ್‌ ಪಂದ್ಯದಲ್ಲಿ ಪಾಕಿಸ್ತಾನ ತಂಡ ಭಾರತವನ್ನು 180 ರನ್‌ಗಳಿಂದ ಮಣಿಸಿ ಚಾಂಪಿಯನ್‌ ಆಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.