ಢಾಕಾ: ಚೆಕ್‌ಬೌನ್ಸ್ ಪ್ರಕರಣದಲ್ಲಿ ಬಾಂಗ್ಲಾದೇಶದ ಕ್ರಿಕೆಟಿಗ ಶಕೀಬ್ ಅಲ್ ಹಸನ್ ಅವರ ಆಸ್ತಿ ಸ್ವಾಧೀನಕ್ಕೆ ಸ್ಥಳೀಯ ನ್ಯಾಯಾಲಯ ಆದೇಶ ಹೊರಡಿಸಿದೆ.
ಶಕೀಬ್ ಅವರು, ಉಚ್ಚಾಟಿತ ಪ್ರಧಾನಿ ಶೇಖ್ ಹಸೀನಾ ನೇತೃತ್ವದ ಬಾಂಗ್ಲಾದೇಶ ಅವಾಮಿ ಲೀಗ್ ಪಕ್ಷದ ಮಾಜಿ ಸಂಸದರಾಗಿದ್ದು, ಹಸೀನಾ ಅವರಿಗೆ ನಿಷ್ಠೆ ಹೊಂದಿದ್ದಾರೆ.
ಸುಮಾರು ಮೂರು ಲಕ್ಷ ಡಾಲರ್‌ಗಿಂತ ಹೆಚ್ಚಿನ ಮೊತ್ತದ ಚೆಕ್‌ಗಳ ಬೌನ್ಸ್ ಪ್ರಕರಣದಲ್ಲಿ ಶಕೀಬ್ ವಿರುದ್ಧ ವಿಚಾರಣೆ ನಡೆದಿತ್ತು. ಢಾಕಾದ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಅವರ ಬಂಧನಕ್ಕೆ ಜನವರಿಯಲ್ಲಿ ವಾರಂಟ್ ಹೊರಡಿಸಿತ್ತು. ಇದೇ ನ್ಯಾಯಾಲಯವು ಅವರ ಆಸ್ತಿ ಸ್ವಾಧೀನಕ್ಕೆ ಸೋಮವಾರ ಆದೇಶಿಸಿತು.
ಹಸೀನಾ ಸರ್ಕಾರದ ಪತನದ ಬಳಿಕ ಬಾಂಗ್ಲಾದೇಶ ತೊರೆದಿರುವ ಶಕೀಬ್, ಸದ್ಯ ಕೆನಡಾದಲ್ಲಿ ಪ್ರಾದೇಶಿಕ ಟ್ವೆಂಟಿ–20 ಕ್ರಿಕೆಟ್ ಪಂದ್ಯಗಳಲ್ಲಿ ಆಡುತ್ತಿದ್ದಾರೆ. ಆಲ್‌ರೌಂಡರ್ ಆಗಿರುವ ಅವರು 71 ಟೆಸ್ಟ್, 247 ಅಂತರರಾಷ್ಟ್ರೀಯ ಏಕ ದಿನ ಪಂದ್ಯಗಳು ಮತ್ತು ಬಾಂಗ್ಲಾ ಪರ 129 ಟ್ವೆಂಟಿ–20 ಪಂದ್ಯಗಳಲ್ಲಿ ಆಡಿದ್ದು, ಒಟ್ಟಾರೆ 712 ವಿಕೆಟ್‌ಗಳನ್ನು ಪಡೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.