ADVERTISEMENT

ಟಿ20 ವಿಶ್ವಕಪ್‌: ಬಾಂಗ್ಲಾದೇಶ ಕ್ರಿಕೆಟ್‌ಗೆ ಭಾರೀ ನಷ್ಟ

ಪಿಟಿಐ
Published 23 ಜನವರಿ 2026, 12:50 IST
Last Updated 23 ಜನವರಿ 2026, 12:50 IST
<div class="paragraphs"><p>ಪಂದ್ಯದ ಬಳಿಕ ಪರಸ್ಪರ ಕೈಕುಲುಕಿದ ಭಾರತ, ಬಾಂಗ್ಲಾದೇಶ ಆಟಗಾರರು</p></div>

ಪಂದ್ಯದ ಬಳಿಕ ಪರಸ್ಪರ ಕೈಕುಲುಕಿದ ಭಾರತ, ಬಾಂಗ್ಲಾದೇಶ ಆಟಗಾರರು

   

ಫೆಬ್ರುವರಿ 7ರಿಂದ ಆರಂಭವಾಗಲಿರುವ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯ ಪಂದ್ಯಗಳನ್ನು ಆಡಲು ಭಾರತಕ್ಕೆ ತಂಡವನ್ನು ಕಳುಹಿಸದಿರಲು ಬಾಂಗ್ಲಾದೇಶ ಕ್ರಿಕೆಟ್ ಬೋರ್ಡ್ (ಬಿಸಿಬಿ) ನಿರ್ಧರಿಸಿದೆ. ಇದರಿಂದ ಬಾಂಗ್ಲಾ ತಂಡ ಆರ್ಥಿಕವಾಗಿ ಭಾರಿ ನಷ್ಟ ಎದುರಿಸುವ ಸಾಧ್ಯತೆ ಇದೆ.

ಭಾರತದಲ್ಲಿ ನಿಗದಿಯಾಗಿರುವ ಪಂದ್ಯಗಳನ್ನು ಶ್ರೀಲಂಕಾಕ್ಕೆ ಸ್ಥಳಾಂತರಿಸಬೇಕೆಂದು ಬಿಸಿಬಿಯ ಬೇಡಿಕೆಯನ್ನು ಅಂತರರಾಷ್ಟ್ರೀಯ ಕ್ರಿಕೆಟ್‌ ಸಮಿತಿಯು (ಐಸಿಸಿ) ಬುಧವಾರ ತಿರಸ್ಕರಿಸಿತ್ತು. ಮಾತ್ರವಲ್ಲ, ಅಂತಿಮ ನಿರ್ಧಾರಕ್ಕೆ ಬರಲು ಬಿಸಿಬಿಗೆ ವಿಧಿಸಿದ್ದ ಗುರುವಾರದವರೆಗೆ ಅವಕಾಶ ನೀಡಿತ್ತು.

ADVERTISEMENT

ಗುರುವಾರ ಕೂಡ ಬಾಂಗ್ಲಾ ತಂಡ ಯಾವುದೇ ನಿರ್ಣಯಕ್ಕೆ ಬಾರದಿರುವುದರಿಂದ, ಈಗ ಆ ತಂಡ ಟೂರ್ನಿಯಿಂದ ಹೊರಬೀಳುವ ಸಾಧ್ಯತೆ ದಟ್ಟವಾಗಿದೆ. ಆ ಸ್ಥಾನದಲ್ಲಿ, ಸ್ಕಾಟ್ಲೆಂಡ್ ತಂಡಕ್ಕೆ ಅವಕಾಶ ನೀಡುವ ಸಾಧ್ಯತದೆ ಇದೆ.

ಬಿಸಿಬಿಗೆ ಭಾರೀ ನಷ್ಟ

ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ತೆಗೆದುಕೊಂಡಿರುವ ನಿರ್ಧಾರದಿಂದಾಗಿ, ಐಸಿಸಿಯಿಂದ ಬರುವ ಆದಾಯ ಸುಮಾರು 27 ಮಿಲಿಯನ್ ಅಮೆರಿಕನ್ ಡಾಲರ್, (₹240 ಕೋಟಿ) ನಷ್ಟ ಉಂಟಾಗುವ ಸಾಧ್ಯತೆ ಇದೆ. ಇದರ ಜೊತೆಗೆ ಮಾಧ್ಯಮ ಪ್ರಸಾರದ ಆದಾಯ, ಪ್ರಾಯೋಜಕತ್ವದ ಆದಾಯ ಮತ್ತು ವಾರ್ಷಿಕ ಆದಾಯದ ಮೇಲೆ ಭಾರಿ ಪರಿಣಾಮ ಬೀರುವ ಸಾಧ್ಯತೆ ಇದೆ. ಬಾಂಗ್ಲಾದೇಶ ಕ್ರಿಕೆಟ್‌ನ ಆದಾಯದ ಮೇಲೆ ಶೇ 60 ರಷ್ಟು ಅಥವಾ ಅದಕ್ಕಿಂತ ಹೆಚ್ಚಿನ ನಷ್ಟ ಉಂಟಾಗುವ ಸಾಧ್ಯತೆ ಇದೆ ಎಂದು ಪಿಟಿಐ ವರದಿ ಮಾಡಿದೆ

ಬಾಂಗ್ಲಾದೇಶದ ಕ್ರಿಕೆಟ್ ಆಟಗಾರರ ಜೊತೆ ಮಾತುಕತೆ ನಡೆಸಿದ ಆಸೀಫ್ ನಝ್ರಲ್ ಅವರು ‘ನಮ್ಮ ದೇಶದ ಕ್ರಿಕೆಟಿಗರು ವಿಶ್ವಕಪ್‌ನಲ್ಲಿ ಆಡಲು ಸಾಕಷ್ಟು ಶ್ರಮ ಹಾಕಿದ್ದಾರೆ. ಆದರೆ ಭಾರತದಲ್ಲಿ ಆಡುವುದಕ್ಕೆ ನಮಗಿರುವ ಭದ್ರತಾ ಕಳವಳ ಈಗಲೂ ಬದಲಾಗಿಲ್ಲ’ ಎಂದಿದ್ದಾರೆ.

‘ನಮ್ಮ ಆಟಗಾರರು, ಪತ್ರಕರ್ತರು ಮತ್ತು ಪ್ರೇಕ್ಷಕರ ಸುರಕ್ಷತೆಯನ್ನು ಅವರು (ಭಾರತ) ಖಾತರಿಪಡಿಸಬಲ್ಲರು ಎಂಬ ಬಗ್ಗೆ ನಮಗೆ ಮನವರಿಕೆಯಾಗಿಲ್ಲ. ಆದರೆ ನಾವು ಇನ್ನೂ ವಿಶ್ವಾಸ ಕಳೆದುಕೊಂಡಿಲ್ಲ. ನಮ್ಮ ತಂಡ ಸಜ್ಜಾಗಿದೆ. ಸುರಕ್ಷತೆಗೆ ಸಂಬಂಧಿಸಿದ ನಮ್ಮ ಪ್ರಾಮಾಣಿಕ ಕಳಕಳಿಯನ್ನು ಪರಿಗಣಿಸಿ ಶ್ರೀಲಂಕಾದಲ್ಲಿ ಆಡಲು ಅವಕಾಶ ನೀಡುವ ಮೂಲಕ ಐಸಿಸಿ ನ್ಯಾಯ ಒದಗಿಸುತ್ತದೆ ಎಂಬ ನಿರೀಕ್ಷೆ ನಮಗೆ ಇದೆ’ ಎಂದು ಅವರು ಹೇಳಿದರು.

ಬಾಂಗ್ಲಾ ತಂಡ ಭಾರತಕ್ಕೆ ಬಾರದಿರಲು ಕಾರಣ

ಇತ್ತೀಚಿನ ದಿನಗಳಲ್ಲಿ ಬಾಂಗ್ಲಾದೇಶದಲ್ಲಿ ನೆಲೆಸಿರುವ ಹಿಂದೂ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ಹೆಚ್ಚಾದ ಹಿನ್ನೆಲೆಯಲ್ಲಿ, ಇಂಡಿಯನ್ ಪ್ರೀಮಿಯರ್ ಲೀಗ್ ಆಡಲು ಆಯ್ಕೆಯಾಗಿದ್ದ ಬಾಂಗ್ಲಾದ ವೇಗಿ ಮುಸ್ತಾಫಿಜುರ್ ರೆಹಮಾನ್ ಅವರನ್ನು ಕೆಕೆಆರ್ ತಂಡದಿಂದ ಕೈಬಿಡಲಾಗಿತ್ತು. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಬಾಂಗ್ಲಾದೇಶ ಟಿ20 ವಿಶ್ವಕಪ್‌ನಲ್ಲಿ ಭಾರತಕ್ಕೆ ಹೋಗದಿರಲು ನಿರ್ಧರಿಸಿ, ತನ್ನ ಪಂದ್ಯಗಳನ್ನು ಶ್ರೀಲಂಕಾಗೆ ಸ್ಥಳಾಂತರಿಸುವಂತೆ ಐಸಿಸಿಗೆ ಮನವಿ ಮಾಡಿತ್ತು. ಬಿಸಿಬಿಯ ಮನವಿಯನ್ನು ಐಸಿಸಿ ಪುರಸ್ಕರಿಸಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.