ಶತಕ ದಾಖಲಿಸಿದ ನಜ್ಮುಲ್ ಹುಸೇನ್ ಶಾಂತೊ
ಗಾಲೆ, ಶ್ರೀಲಂಕಾ: ಮಳೆಯಿಂದ ಅಡಚಣೆಯಾದ ಬಾಂಗ್ಲಾದೇಶ ಮತ್ತು ಶ್ರೀಲಂಕಾ ನಡುವಿನ ಮೊದಲ ಟೆಸ್ಟ್ ಪಂದ್ಯವು ಡ್ರಾನಲ್ಲಿ ಮುಕ್ತಾಯವಾಯಿತು.
ಗೆಲುವಿಗೆ 37 ಓವರ್‌ಗಳಲ್ಲಿ 296 ರನ್‌ಗಳ ಗುರಿ ಬೆನ್ನಟ್ಟಿದ ಆತಿಥೇಯ ತಂಡವು 32 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 72 ರನ್ ಗಳಿಸಿತು. ನಂತರದಲ್ಲಿ ಉಭಯ ತಂಡಗಳ ನಾಯಕರು ಡ್ರಾಕ್ಕೆ ಒಪ್ಪಿಕೊಂಡರು. ಇದರೊಂದಿಗೆ ತವರಿನ ಹೊರಗೆ ಅಪರೂಪದ ಗೆಲುವು ಸಾಧಿಸುವ ಅವಕಾಶ ಬಾಂಗ್ಲಾ ತಂಡದ ತಪ್ಪಿತು.
ಮೊದಲ ಇನಿಂಗ್ಸ್‌ನಲ್ಲಿ 10 ರನ್‌ಗಳ ಮುನ್ನಡೆ ಪಡೆದಿದ್ದ ಪ್ರವಾಸಿ ತಂಡವು, ಎರಡನೇ ಇನಿಂಗ್ಸ್‌ನಲ್ಲಿ 6 ವಿಕೆಟ್‌ಗೆ 285 ರನ್ ಗಳಿಸಿ ಡಿಕ್ಲೇರ್ಡ್ ಮಾಡಿಕೊಂಡಿತು. ನಾಯಕ ನಜ್ಮುಲ್ ಹುಸೇನ್ ಶಾಂತೊ ಎರಡೂ ಇನಿಂಗ್ಸ್‌ನಲ್ಲಿ (148 ಮತ್ತು ಔಟಾಗದೇ 125) ಶತಕ ದಾಖಲಿಸಿ ಮಿಂಚಿದರು. 2023ರಲ್ಲಿ ಅಫ್ಗಾನಿಸ್ತಾನದ ವಿರುದ್ಧವೂ ಶಾಂತೊ ಡಬಲ್ ಶತಕದ ಸಾಧನೆ ಮೆರೆದಿದ್ದರು.
ಮಳೆ ಬಿಡುವು ನೀಡಿದ ಬಳಿಕ ಆಟ ಪುನರಾರಂಭವಾದಾಗ ಬಾಂಗ್ಲಾ ತಂಡವು 247 ರನ್‌ಗಳ ಮುನ್ನಡೆ ಪಡೆದಿತ್ತು. ಆ ವೇಳೆಗೆ ದಿನದಾಟ ಮುಗಿಯಲು ಇನ್ನೂ 50 ಓವರ್‌ಗಳು ಬಾಕಿಯಿತ್ತು. ಈ ಹಂತದಲ್ಲಿ ಡಿಕ್ಲೇರ್ ಮಾಡಿದ್ದರೆ ಫಲಿತಾಂಶ ಹೊರಬರುವ ಸಾಧ್ಯತೆ ಇತ್ತು.
ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದ ಲಂಕಾದ ಆಲ್‌ರೌಂಡರ್ ಏಂಜಲೊ ಮ್ಯಾಥ್ಯೂಸ್ ಅವರು ತಮ್ಮ ವೃತ್ತಿಜೀವನದ 119ನೇ ಮತ್ತು ಅಂತಿಮ ಪಂದ್ಯದ ಕೊನೆಯ ಇನಿಂಗ್ಸ್‌ನಲ್ಲಿ 8 ರನ್ ಗಳಿಸಿ ಔಟಾದರು. ಅವರಿಗೆ ಪ್ರೇಕ್ಷಕರು ಎದ್ದು ನಿಂತು ಚಪ್ಪಾಳೆ ತಟ್ಟಿ ಗೌರವ ನೀಡಿದರು.
ಸರಣಿಯ ಎರಡನೇ ಮತ್ತು ಕೊನೆಯ ಟೆಸ್ಟ್ ಪಂದ್ಯ ಕೊಲಂಬೊದಲ್ಲಿ ಇದೇ 25ರಂದು ಆರಂಭವಾಗಲಿದೆ. ನಂತರದಲ್ಲಿ ಉಭಯ ತಂಡಗಳ ನಡುವೆ ಮೂರು ಏಕದಿನ ಮತ್ತು ಮೂರು ಟಿ20 ಪಂದ್ಯಗಳ ನಡೆಯಲಿವೆ.
ಸಂಕ್ಷಿಪ್ತ ಸ್ಕೋರ್:
ಮೊದಲ ಇನಿಂಗ್ಸ್: ಬಾಂಗ್ಲಾದೇಶ 153.4 ಓವರ್‌ಗಳಲ್ಲಿ 495. ಶ್ರೀಲಂಕಾ 131.2 ಓವರ್‌ಗಳಲ್ಲಿ 485. ಎರಡನೇ ಇನಿಂಗ್ಸ್: ಬಾಂಗ್ಲಾದೇಶ 87 ಓವರ್‌ಗಳಲ್ಲಿ 6ಕ್ಕೆ 285 ಡಿಕ್ಲೇರ್ಡ್ (ನಜ್ಮುಲ್ ಹುಸೇನ್ ಶಾಂತೊ ಔಟಾಗದೇ 125, ಶಾದ್ಮನ್ ಇಸ್ಲಾಂ 76; ತರಿಂದು ರಥ್ನಾಯಕೆ 102ಕ್ಕೆ 3). ಶ್ರೀಲಂಕಾ 32 ಓವರ್‌ಗಳಲ್ಲಿ 72 (ಪಥುಮ್ ನಿಸ್ಸಾಂಕ 24; ತೈಜುಲ್ ಇಸ್ಲಾಂ 23ಕ್ಕೆ 3).
ಫಲಿತಾಂಶ: ಪಂದ್ಯ ಡ್ರಾ. ಪಂದ್ಯದ ಆಟಗಾರ: ನಜ್ಮುಲ್ ಹುಸೇನ್ ಶಾಂತೊ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.