ADVERTISEMENT

10-12 ವರ್ಷ ಆತಂಕದ ಮನಃಸ್ಥಿತಿ ಅನುಭವಿಸಿದ್ದೆ: ಸಚಿನ್

​ಪ್ರಜಾವಾಣಿ ವಾರ್ತೆ
Published 16 ಮೇ 2021, 15:25 IST
Last Updated 16 ಮೇ 2021, 15:25 IST
ಸಚಿನ್ ತೆಂಡೂಲ್ಕರ್
ಸಚಿನ್ ತೆಂಡೂಲ್ಕರ್   

ನವದೆಹಲಿ: ದಿಗ್ಗಜ ಬ್ಯಾಟ್ಸ್‌ಮನ್ ಸಚಿನ್ ತೆಂಡೂಲ್ಕರ್ ತಾವು ಭಾರತ ತಂಡದಲ್ಲಿ ಆಡುವ ಸಂದರ್ಭದಲ್ಲಿ ಸುಮಾರು ಒಂದು ದಶಕಕ್ಕೂ ಹೆಚ್ಚು ಕಾಲ ಮಾನಸಿಕವಾಗಿ ತೀವ್ರ ಕ್ಷೋಭೆಯನ್ನು ಅನುಭವಿಸಿದ್ದರಂತೆ.

‘ಕ್ರೀಡೆಯಲ್ಲಿ ದೈಹಿಕವಾಗಿ ಸಿದ್ಧತೆ ಮಾಡುವುದರ ಜೊತೆಗೆ ಮಾನಸಿಕವಾಗಿಯೂ ತರಬೇತುಗೊಳ್ಳುವುದು ಅವಶ್ಯಕ ಎಂಬುದನ್ನು ನನ್ನ ಅನುಭವದಿಂದ ಕಲಿತೆ‘ ಎಂದು ಹೇಳಿದ್ದಾರೆ. ಅವರು ಅನ್‌ಅಕಾಡೆಮಿ ಆಯೋಜಿಸಿದ್ದ ಮಾನಸಿಕ ಆರೋಗ್ಯದ ಕುರಿತ ಸಂವಾದದಲ್ಲಿ ತಮ್ಮ ಅನುಭವ ಹಂಚಿಕೊಂಡರು.

‘ನಾನು ಆಡುವ ಕಾಲಘಟ್ಟದಲ್ಲಿ ಸುಮಾರು 10–12 ವರ್ಷಗಳವರೆಗೆ ಅಪಾರ ಆತಂಕದ ಮನಃಸ್ಥಿತಿಯನ್ನು ಅನುಭವಿಸಿದ್ದೇನೆ. ಹಲವಾರು ರಾತ್ರಿಗಳನ್ನು ನಿದ್ದೆಯಿಲ್ಲದೇ ಕಳೆದಿದ್ದೇನೆ. ಆದರೆ ದಿನಗಳೆದಂತೆ ಮನಃಶಾಂತಿ, ನಿದ್ದೆಗಳು ನನ್ನ ಪೂರ್ವಾಭ್ಯಾಸದ ಭಾಗ ಎಂದು ನಂಬತೊಡಗಿದೆ. ಕಾಲಕ್ರಮೇಣ ಪರಿಸ್ಥಿತಿ ಸುಧಾರಿಸಿತು. ನೆಮ್ಮದಿ ಲಭಿಸತೊಡಗಿತು. ಆದ್ದರಿಂದ ಸ್ವಯಂ ಸ್ವೀಕೃತಿ ಮುಖ್ಯ‘ ಎಂದು ಹೇಳಿದರು.

ADVERTISEMENT

‘ಮನಸ್ಸನ್ನು ಉಲ್ಲಸಿತವಾಗಿಡಲು ಕೆಲವು ಚಟುವಟಿಕೆಗಳನ್ನು ತೊಡಗಿಸಿಕೊಂಡೆ. ಚಹಾ ತಯಾರಿಸುವುದು, ಬಟ್ಟೆಗಳನ್ನು ಇಸ್ತ್ರೀ ಮಾಡಿಕೊಳ್ಳುವುದು. ಪಂದ್ಯಕ್ಕೆ ತೆರಳುವ ಮುನ್ನಾದಿನವೇ ನನ್ನ ಕಿಟ್‌ ಸಿದ್ಧಗೊಳಿಸಿಕೊಳ್ಳುತ್ತಿದ್ದೆ. ಇದೆಲ್ಲವನ್ನೂ ಅಣ್ಣ ಕಲಿಸಿಕೊಟ್ಟರು. ಇದೇ ರೂಢಿಯನ್ನು ನನ್ನ ವೃತ್ತಿಜೀವನದ ಕೊನೆಯ ಪಂದ್ಯದವರೆಗೂ ಮುಂದುವರಿಸಿದ್ದೆ‘ ಎಂದು 48 ವರ್ಷದ ಸಚಿನ್ ಹೇಳಿದರು.

2013ರಲ್ಲಿ ಅವರು 200ನೇ ಟೆಸ್ಟ್‌ ಆಡಿ ನಿವೃತ್ತಿ ಘೋಷಿಸಿದ್ದರು.

‘ನಮ್ಮ ದೇಹಕ್ಕೆ ಗಾಯವಾದಾಗ ಫಿಸಿಯೊ ಮತ್ತು ವೈದ್ಯರು ಚಿಕಿತ್ಸೆ ನೀಡುತ್ತಾರೆ. ಅದರಿಂದಾಗಿ ಚೇತರಿಸಿಕೊಳ್ಳುತ್ತೇವೆ. ಅದೇ ರೀತಿ ಮಾನಸಿಕ ತೊಂದರೆಗೊಳಗಾದಗಲೂ ಚಿಕಿತ್ಸೆ ಪಡೆಯುವುದು ಸಹಜ ಪ್ರಕ್ರಿಯೆ‘ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.