ಮೊಹಮ್ಮದ್ ಸಿರಾಜ್, ಶುಭಮನ್ ಗಿಲ್
(ರಾಯಿಟರ್ಸ್ ಚಿತ್ರ)
ಲಾರ್ಡ್ಸ್: ಕಳೆದ ಕೆಲವು ವರ್ಷಗಳಿಂದಲೂ 'ಬಾಝ್‌ಬಾಲ್' ಶೈಲಿಯ ಟೆಸ್ಟ್ ಕ್ರಿಕೆಟ್ ಆಡುವ ಮೂಲಕ ಹೆಚ್ಚು ಸದ್ದು ಮಾಡಿದ್ದ ಇಂಗ್ಲೆಂಡ್, ಭಾರತದ ವಿರುದ್ಧ ಲಾರ್ಡ್ಸ್‌ನಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲಿ ಸಾಂಪ್ರದಾಯಿಕ ಆಟದ ಶೈಲಿಗೆ ಮರಳಿತ್ತು.
ಬಹಳ ಎಚ್ಚರಿಕೆ ಹಾಗೂ ರಕ್ಷಣಾತ್ಮಕವಾಗಿ ಆಡಿದ ಇಂಗ್ಲೆಂಡ್ ಬ್ಯಾಟರ್‌ಗಳು ಮೊದಲ ದಿನದಾಟದಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 251 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಜೋ ರೂಟ್ 99* ಹಾಗೂ ಬೆನ್ ಸ್ಟೋಕ್ಸ್ 39* ರನ್ ಗಳಿಸಿ ಕ್ರೀಸಿನಲ್ಲಿದ್ದಾರೆ.
ಪಂದ್ಯದ ನಡುವೆ ಇಂಗ್ಲೆಂಡ್ ಆಟಗಾರರ ತಾಳ್ಮೆಗೆ ಭಂಗ ತರಲು ಭಾರತೀಯ ಆಟಗಾರರು ಪ್ರಯತ್ನಿಸಿರುವುದು ಕಂಡುಬಂದಿತು.
ಈ ನಡುವೆ ನಾಯಕ ಶುಭಮನ್ ಗಿಲ್ ಹಾಗೂ ಮೊಹಮ್ಮದ್ ಸಿರಾಜ್ ಎದುರಾಳಿ ಆಟಗಾರರನ್ನು ಕೆಣಕಲು ಯತ್ನಿಸಿದರು.
'ಇನ್ನು ಮುಂದೆ ಮನರಂಜನೆಯ ಕ್ರಿಕೆಟ್ ಇರುವುದಿಲ್ಲ. ಬೋರಿಂಗ್ ಟೆಸ್ಟ್ ಕ್ರಿಕೆಟ್‌ಗೆ ಸ್ವಾಗತ' ಎಂದು ಗಿಲ್ ಕುಟುಕಿದ್ದಾರೆ.
ಅತ್ತ ಸಿರಾಜ್, 'ಬಾಝ್ ಬಾಝ್ ಬಾಝ್‌ಬಾಲ್, ಕಾಮನ್, ನಾನು ಬಾಝ್‌ಬಾಲ್ ಆಟವನ್ನು ನೋಡಲು ಬಯಸುತ್ತೇನೆ' ಎಂದು ವ್ಯಂಗ್ಯವಾಡಿದ್ದಾರೆ.
254 ರನ್ ಬಾಝ್‌ಬಾಲ್ ಯುಗದಲ್ಲಿ ಇಂಗ್ಲೆಂಡ್, ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲಿ ಗಳಿಸಿದ ಅತ್ಯಂತ ಕಡಿಮೆ ಮೊತ್ತವಾಗಿದೆ. ಇಂಗ್ಲೆಂಡ್ 3.02ರ ಸರಾಸರಿಯಲ್ಲಷ್ಟೇ ರನ್ ಗಳಿಸಿತ್ತು.
ನಿಖರ ಬೌಲಿಂಗ್ ದಾಳಿಯ ಮೂಲಕ ಭಾರತೀಯ ಬೌಲರ್‌ಗಳು ಗಮನ ಸೆಳೆದಿದ್ದಾರೆ. ಒಂದು ವಿಕೆಟ್ ಗಳಿಸಿದ್ದ ಜಸ್‌ಪ್ರೀತ್ ಬೂಮ್ರಾ 18 ಓವರ್‌ಗಳಲ್ಲಿ 35 ರನ್ ಮಾತ್ರ ಬಿಟ್ಟುಕೊಟ್ಟಿದ್ದರು. ಇದರಲ್ಲಿ ಮೂರು ಮೇಡನ್ ಓವರ್ ಸೇರಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.