ADVERTISEMENT

ಬಾಂಗ್ಲಾ ವಿಶ್ವಕಪ್ ತಂಡದ ಪೋಷಾಕಿನ ಬಣ್ಣ ಬದಲು

ಏಜೆನ್ಸೀಸ್
Published 2 ಮೇ 2019, 19:37 IST
Last Updated 2 ಮೇ 2019, 19:37 IST
ಬಿಸಿಬಿ
ಬಿಸಿಬಿ   

ಢಾಕಾ: ಆಕ್ಷೇಪಗಳು ವ್ಯಕ್ತವಾದ ಕಾರಣ ಬಾಂಗ್ಲಾದೇಶ ವಿಶ್ವಕಪ್‌ ಕ್ರಿಕೆಟ್ ತಂಡದ ‍ಪೋಷಾಕಿನಲ್ಲಿ ಬದಲಾವಣೆ ಮಾಡಲಾಗಿದೆ. ಮೊದಲು ವಿನ್ಯಾಸಗೊಳಿಸಿದ ಪೋಷಾಕಿನಲ್ಲಿ ಕೆಂಬಣ್ಣ ಎದ್ದು ಕಾಣುವಂತೆ ಮಾಡಲಾಗಿದೆ ಎಂದು ಬಾಂಗ್ಲಾ ಕ್ರಿಕೆಟ್ ಮಂಡಳಿ (ಬಿಸಿಬಿ) ಬುಧವಾರ ತಿಳಿಸಿದೆ.

ಪಾಕಿಸ್ತಾನದ ಧ್ವಜವು ಕೆಂಪು ಮತ್ತು ಹಸಿರು ಬಣ್ಣ ಹೊಂದಿದೆ. ಆದರೆ ಸೋಮವಾರ ಬಿಡುಗಡೆ ಮಾಡಿದ್ದ ಜೆರ್ಸಿಯಲ್ಲಿ ಹಸಿರುವ ಮತ್ತು ಬಿಳಿ ಬಣ್ಣ ಎದ್ದು ಕಾಣುತ್ತಿತ್ತು.

‘ವಾಣಿಜ್ಯ ಉದ್ದೇಶಗಳಿಗಾಗಿ ಕೆಂಪು ಬಣ್ಣವನ್ನು ಕೈಬಿಡುವಂತೆ ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಸೂಚಿಸಿತ್ತು. ಆದ್ದರಿಂದ ಬಿಳ್ಳಿ ಬಣ್ಣವನ್ನು ಹೆಚ್ಚು ಬಳಸಲಾಗಿತ್ತು. ಆದರೆ ಜನರು, ಜೆರ್ಸಿಯಲ್ಲಿ ಕೆಂಪು ಬಣ್ಣ ಇರಲೇ ಬೇಕು ಎಂದು ಒತ್ತಾಯಿಸಿದ್ದರು. ಇದನ್ನು ಐಸಿಸಿ ಗಮನಕ್ಕೆ ತರಲಾಗಿತ್ತು. ಬೇಡಿಕೆಯನ್ನು ಐಸಿಸಿ ಮನ್ನಿಸಿತ್ತು’ ಎಂದು ಬಿಸಿಬಿ ಅಧಿಕಾರಿಯೊಬ್ಬರು ವಿವರಿಸಿದರು.

ADVERTISEMENT

ಜೆರ್ಸಿ ಬಿಡುಗಡೆಯಾದ ಕೂಡಲೇ ಬಾಂಗ್ಲಾದಲ್ಲಿ ಸಾಮಾಜಿಕ ತಾಣಗಳ ಮೂಲಕ ತೀವ್ರ ಟೀಕೆಗಳು ಕೇಳಿಬಂದಿದ್ದವು. ಮಂಡಳಿಯ ಹಿಂದಿನ ಅಧ್ಯಕ್ಷ ಸಬೇರ್ ಹೊಸೇನ್ ಚೌಧರಿ ಕೂಡ ಇದನ್ನು ಖಂಡಿಸಿದ್ದರು.

‘ಕೆಂಪು ಮತ್ತು ಹಸಿರುವ ನಮ್ಮ ರಾಷ್ಟ್ರಧ್ವಜದ ಬಣ್ಣಗಳು. ಅವುಗಳು ತಂಡದ ಆಟಗಾರರ ಪೋಷಾಕಿನಲ್ಲಿ ಸದಾ ರಾರಾಜಿಸುತ್ತಿರಬೇಕು. ಇದಕ್ಕೆ ತದ್ವಿರುದ್ಧವಾಗಿ ಪೋಷಾಕು ಸಿದ್ಧಪಡಿಸಿದ್ದು ಬೇಸರದ ವಿಷಯ’ ಎಂದು ಚೌಧರಿ ಹೇಳಿದ್ದರು. ‌

ಪಾಕಿಸ್ತಾನದ ವಿರುದ್ಧ ನಡೆದ ಯುದ್ಧದ ನಂತರ ಬಾಂಗ್ಲಾದೇಶ 1971ರಲ್ಲಿ ಸ್ವತಂತ್ರವಾಗಿತ್ತು. ಅದೇ ಪಾಕಿಸ್ತಾನದ ಧ್ವಜವನ್ನು ಹೋಲುವಂತೆ ಇದೆ ತಂಡದ ‍‍ಪೋಷಾಕು ಎಂದು ಕೆಲವರು ಜರಿದಿದ್ದರು. ಇದನ್ನು ಖಂಡಿಸಿದ ಮಂಡಳಿ ಅಧ್ಯಕ್ಷ ನಜ್ಮುಲ್ ಹಸನ್‌ ‘ಪೋಷಾಕಿನ ಮೇಲೆ ಬಾಂಗ್ಲಾದೇಶ ಎಂದು ಬರೆಯಲಾಗಿದೆ. ಹುಲಿಯ ಚಿತ್ರ ಮತ್ತು ಮಂಡಳಿಯ ಲಾಂಛನವೂ ಇದೆ. ಹೀಗಿರುವಾಗ ಗೊಂದಲಕ್ಕೆ ಕಾರಣವಿಲ್ಲ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.