ತಮೀಮ್ ಇಕ್ಬಾಲ್
ಢಾಕಾ: ಬಾಂಗ್ಲಾದೇಶ ಕ್ರಿಕೆಟ್ ತಂಡದ ಮಾಜಿ ನಾಯಕ ತಮೀಮ್ ಇಕ್ಬಾಲ್ ಅವರು ‘ಭಾರತದ ಏಜಂಟ್’ ಎಂದು ಬಿಸಿಬಿ ಅಧಿಕಾರಿಯೊಬ್ಬರು ಕರೆದಿದ್ದು, ಇದರ ವಿರುದ್ಧ ಮಾಜಿ ಮತ್ತು ಹಾಲಿ ಆಟಗಾರರು ಧ್ವನಿ ಎತ್ತಿದ್ದಾರೆ.
ಭಾರತದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ಪಾಲ್ಗೊಳ್ಳುವುದಕ್ಕೆ ಸಂಬಂಧಿಸಿ ಮುಂದಿನ ಹೆಜ್ಜೆಯಿರಿಸುವಾಗ ಭಾವನೆಯನ್ನೇ ಮುಖ್ಯವಾಗಿ ನೆಚ್ಚಿಕೊಳ್ಳದಿರುವಂತೆ ತಮೀಮ್ ಅವರು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಗೆ (ಬಿಸಿಬಿ) ಸಲಹೆ ನೀಡಿದ್ದರು. ಎಡಗೈ ಬ್ಯಾಟರ್ ಆಗಿರುವ ತಮೀಮ್ ಬಾಂಗ್ಲಾದೇಶ ಕಂಡ ಶ್ರೇಷ್ಠ ಬ್ಯಾಟರ್‌ಗಳಲ್ಲಿ ಒಬ್ಬರಾಗಿದ್ದಾರೆ.
ಆರಂಭ ಆಟಗಾರ ತಮೀಮ್ ಅವರು ‘ಇಂಡಿಯನ್ ಏಜಂಟ್’ ಎಂದು ಬಿಸಿಬಿಯ ಹಣಕಾಸು ಸಮಿತಿ ಅಧ್ಯಕ್ಷ ನಜ್ಮುಲ್ ಇಸ್ಲಾಂ ಅವರು ಫೇಸ್‌ಬುಕ್ ಪೋಸ್ಟ್‌ನಲ್ಲಿ ಬರೆದಿದ್ದರು. ‘ಈ ಬಾರಿ ಬಾಂಗ್ಲಾದೇಶದ ಜನರು ತಮ್ಮದೇ ಕಣ್ಣುಗಳಿಂದ ಭಾರತೀಯ ಏಜಂಟ್ ಎಂದು ಸಾಬೀತಾಗಿರುವ ಮತ್ತೊಬ್ಬ ವ್ಯಕ್ತಿಯನ್ನು ನೋಡಿದ್ದಾರೆ’ ಎಂದು ಬರೆದಿದ್ದರು.
ಇದರ ವಿರುದ್ಧ ಮಾಜಿ ಆಟಗಾರರಷ್ಟೇ ಅಲ್ಲ, ಹಾಲಿ ಆಟಗಾರರಾದ ತಸ್ಕಿನ್ ಅಹ್ಮದ್, ಮೊಮಿನುಲ್ ಹಕ್ ಮತ್ತು ತೈಜುಲ್ ಇಸ್ಲಾಂ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಾಂಗ್ಲಾದೇಶ ಕ್ರಿಕೆಟರ್‌ಗಳ ಹಿತರಕ್ಷಣಾ ಸಂಘವೂ ಆಘಾತ ವ್ಯಕ್ತಪಡಿಸಿದೆ.
‘ಬಾಂಗ್ಲಾದೇಶ ತಂಡವನ್ನು 16 ವರ್ಷ ಪ್ರತಿನಿಧಿಸಿದ್ದ, ಅತಿ ಯಶಸ್ವಿ ಆಟಗಾರನ ವಿರುದ್ಧ ಇಂಥ ಹೇಳಿಕೆ ನೀಡಿರುವುದು ಖಂಡನೀಯ’ ಎಂದು ಸಂಘ ಹೇಳಿದೆ.
‘ಇದು ತಮೀಮ್ ಅವರಿಗೆ ಸಂಬಂಧಿಸಿಯಷ್ಟೇ ಅಲ್ಲ, ದೇಶದ ಯಾವುದೇ ಕ್ರಿಕೆಟರ್‌ಗಳ ವಿರುದ್ಧ ಇಂಥ ಹೇಳಿಕೆ ಸಮ್ಮತಾರ್ಹವಲ್ಲ. ಇದು ದೇಶದ ಕ್ರಿಕೆಟ್ ಸಮುದಾಯಕ್ಕೆ ಮಾಡಿದ ಅವಮಾನ’ ಎಂದು ಹೇಳಿದೆ.
36 ವರ್ಷ ವಯಸ್ಸಿನ ತಮೀಮ್ 70 ಟೆಸ್ಟ್, 243 ಏಕದಿನ ಮತ್ತು 78 ಟಿ20 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ.
‘ನಾವು ಈ ಹೇಳಿಕೆಯನ್ನು ಬಲವಾಗಿ ಪ್ರತಿಭಟಿಸುತ್ತೇವೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ಮಂಡಳಿಯ ನಿರ್ದೇಶಕರೊಬ್ಬರು ಸಾರ್ವಜನಿಕವಾಗಿ ಇಂಥ ಹೇಳಿಕೆ ನೀಡಿದ್ದನ್ನು ನೋಡಿದರೆ, ಮಂಡಳಿಯ ಅಧಿಕಾರಿಗಳಿಗೆ ನೀತಿ ಸಂಹಿತೆ ಇದೆಯೇ ಎಂಬ ಗಂಭೀರ ಪ್ರಶ್ನೆಗಳು ಏಳುತ್ತವೆ’ ಎಂದಿದ್ದಾರೆ.
‘ಮಾಜಿ ಆಟಗಾರನನ್ನು ನಿರ್ದೇಶಿಸಿ ನೀಡಿರುವ ಇಂಥ ಹೇಳಿಕೆಗಳು ಬಾಂಗ್ಲಾದೇಶ ಕ್ರಿಕೆಟ್ ಹಿತದೃಷ್ಟಿಯಿಂದ ಒಳ್ಳೆಯದಲ್ಲ. ಸಂಬಂಧಪಟ್ಟ ಅಧಿಕಾರಿಗಳು ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಾರೆಂಬ ವಿಶ್ವಾಸವಿದೆ’ ಎಂದು ತಸ್ಕಿನ್ ಹೇಳಿದ್ದಾರೆ.
‘ಮಾಜಿ ನಾಯಕ ತಮೀಮ್ ಅವರ ಬಗ್ಗೆ ಬಿಸಿಬಿ ನಿರ್ದೇಶಕ ಎಂ.ನಜ್ಮುಲ್ ನೀಡಿದ ಹೇಳಿಕೆ ಸಂಪೂರ್ಣವಾಗಿ ಅಸಮ್ಮತಾರ್ಹ ಮತ್ತು ಬಾಂಗ್ಲಾ ಕ್ರಿಕೆಟ್ ಸಮುದಾಯಕ್ಕೆ ಅವಮಾನಕಾರಿ ಸಹ’ ಎಂದು ಮೊಮಿನುಲ್ ಪ್ರತಿಕ್ರಿಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.