ADVERTISEMENT

ಶಕೀಬ್‌ ವಿರುದ್ಧ ದಾವೆ: ಬಿಸಿಬಿ ನಿರ್ಧಾರ

ಮೊಬೈಲ್‌ ಸೇವಾ ಸಂಸ್ಥೆ ಜೊತೆ ಒಪ್ಪಂದ

ಪಿಟಿಐ
Published 26 ಅಕ್ಟೋಬರ್ 2019, 19:30 IST
Last Updated 26 ಅಕ್ಟೋಬರ್ 2019, 19:30 IST
ಶಕೀಬ್‌ ಅಲ್‌ ಹಸನ್‌
ಶಕೀಬ್‌ ಅಲ್‌ ಹಸನ್‌   

ಢಾಕಾ: ಮೊಬೈಲ್‌ ಸೇವಾಸಂಸ್ಥೆಯ ಜೊತೆ ಪ್ರಾಯೋಜಕತ್ವ ಒಪ್ಪಂದಕ್ಕೆ ಸಹಿ ಮಾಡಿ ಗುತ್ತಿಗೆ ಉಲ್ಲಂಘನೆ ಮಾಡಿದ ಕಾರಣ ಹಿರಿಯ ಆಲ್‌ರೌಂಡರ್‌ ಶಕೀಬ್‌ ಅಲ್‌ ಹಸನ್‌ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಬಾಂಗ್ಲಾದೇಶ ಕ್ರಿಕೆಟ್‌ ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

ಆಟಗಾರರಿಗೆ ಉತ್ತಮ ಸಂಭಾವನೆ ಮತ್ತು ಇತರ ಸೌಲಭ್ಯಗಳಿಗಾಗಿ ಮುಷ್ಕರ ಹೂಡುತ್ತಿದ್ದ ಸಂದರ್ಭದಲ್ಲಿ ಶಕೀಬ್‌, ಕಳೆದ ಮಂಗಳವಾರ ಗ್ರಾಮೀಣ್‌ಫೋನ್‌ ಜೊತೆ ಅಘೋಷಿತ ಮೊತ್ತದ ಒಪ್ಪಂದಕ್ಕೆ ಸಹಿ ಮಾಡಿದ್ದರು. ಈ ಮೊಬೈಲ್‌ ಸೇವಾಸಂಸ್ಥೆ ಈ ಹಿಂದೆ ಬಾಂಗ್ಲಾದೇಶ ತಂಡದ ಪ್ರಾಯೋಜಕತ್ವ ವಹಿಸಿತ್ತು.

‘ಅವರು ಗುತ್ತಿಗೆ ವೇಳೆ ಮಾಡಿಕೊಂಡಿದ್ದ ಕರಾರಿನ ಉಲ್ಲಂಘನೆಯಾಗಿದೆ. ನಾವು ಇದರ ವಿರುದ್ಧ ಕ್ರಮ ಕೈಗೊಳ್ಳುವುದು ಖಚಿತ’ ಎಂದು ಬಿಸಿಬಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನಿಜಾಮುದ್ದೀನ್‌ ಚೌಧರಿ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ADVERTISEMENT

ಶಕೀಬ್‌ ಮತ್ತು ಫೋನ್‌ ಕಂಪನಿಯಿಂದ ಪರಿಹಾರ ಕೇಳುವುದಾಗಿ ಬಿಸಿಬಿ ಅಧ್ಯಕ್ಷ ನಜ್ಮುಲ್‌ ಹುಸೇನ್‌ ಕೂಡ ತಿಳಿಸಿದ್ದಾರೆ. ‘ನಾವು ಕಾನೂನು ಕ್ರಮ ಕೈಗೊಳ್ಳುತ್ತೇವೆ. ಇಂಥ ವಿಷಯದಲ್ಲಿ ಯಾರಿಗೂ ವಿನಾಯಿತಿ ಇಲ್ಲ. ಆಟಗಾರ ಮತ್ತು ಕಂಪನಿ ಎರಡೂ ಕಡೆಯಿಂದ ಪರಿಹಾರ ಕೇಳಲಾಗುವುದು’ ಎಂದು ಹಸನ್‌ ಬಂಗಾಳಿ ಪತ್ರಿಕೆಯೊಂದಕ್ಕೆ ಶನಿವಾರ ತಿಳಿಸಿದ್ದಾರೆ.

ಗ್ರಾಮೀಣ್‌ಫೋನ್‌ ಕಂಪನಿಯ ಹೆಚ್ಚಿನ ಪಾಲನ್ನು ನಾರ್ವೆ ಮೂಲದ ಟೆಲಿನಾರ್‌ ಕಂಪನಿ ಹೊಂದಿದೆ. ಈ ಸಂಸ್ಥೆ 2009–11ರ ಅವಧಿಯಲ್ಲಿ ಬಾಂಗ್ಲಾ ತಂಡದ ಪ್ರಾಯೋಜಕತ್ವ ವಹಿಸಿತ್ತು. ಕ್ರೀಡಾಂಗಣದಲ್ಲೂ ಶಕೀಬ್‌ ನಿರ್ವಹಣೆಯ ಬಗ್ಗೆ ಹಸನ್‌ ಟೀಕಿಸಿದರು.

‘ನಾವು ತವರಿನಲ್ಲಿ ಇಂಗ್ಲೆಂಡ್‌, ಆಸ್ಟ್ರೇಲಿಯಾ ತಂಡಗಳನ್ನು ಸೋಲಿಸಿದೆವು. ಆದರೆ ಈಗ ಅಫ್ಗಾನಿಸ್ತಾನಕ್ಕೆ ಸೋತಿದ್ದೇವೆ. ನಾನು ಹೊಣೆಯಾಗಿದ್ದಲ್ಲಿ ಪ್ರತಿಭಟನೆ ಮಾಡುವುದಿರಲಿ, ಮುಖ ಎತ್ತಿ ತಿರುಗಾಡುತ್ತಿರಲಿಲ್ಲ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.