ಐಪಿಎಲ್ ಟ್ರೋಪಿ
ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್‌ನ 18ನೇ ಆವೃತ್ತಿಯು ಮಾರ್ಚ್ 22ರಂದು ಆರಂಭವಾಗಲಿದ್ದು, ಒಟ್ಟು 13 ತಾಣಗಳಲ್ಲಿ 74 ಪಂದ್ಯಗಳು ನಿಗದಿಯಾಗಿವೆ. ಮೇ 25ರಂದು ಫೈನಲ್ ಪಂದ್ಯ ನಡೆಯಲಿದೆ.
ಐಪಿಎಲ್ 2025ನೇ ಸಾಲಿನ ಟಿ20 ಕ್ರಿಕೆಟ್ ಟೂರ್ನಿಯ ವೇಳಾಪಟ್ಟಿಯನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಭಾನುವಾರ ಬಿಡುಗಡೆಗೊಳಿಸಿದೆ.
ಕೋಲ್ಕತ್ತದ ಈಡನ್ ಗಾರ್ಡನ್‌ನಲ್ಲಿ ಮಾರ್ಚ್ 22ರಂದು ನಡೆಯುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೋಲ್ಕತ್ತ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಲಿವೆ. ಇದೇ ಕ್ರೀಡಾಂಗಣದಲ್ಲಿ ಫೈನಲ್ ಹಣಾಹಣಿ ನಡೆಯಲಿದೆ.
12 ಡಬಲ್ ಹೆಡರ್ (ದಿನಕ್ಕೆ 2 ಪಂದ್ಯ) ಪಂದ್ಯಗಳು ಇರಲಿದೆ. ಒಟ್ಟು 65 ದಿನಗಳು ಪಂದ್ಯಗಳು ನಡೆಯಲಿವೆ. ಮೂರು ಫ್ರಾಂಚೈಸಿಗಳ ಎರಡನೇ ತವರಾದ ಧರ್ಮಶಾಲಾ (ಪಂಜಾಬ್ ಕಿಂಗ್ಸ್), ಗುವಾಹಟಿ (ರಾಜಸ್ಥಾನ ರಾಯಲ್ಸ್), ಮತ್ತು ವಿಶಾಖಪಟ್ಟಣನಲ್ಲಿ (ಡೆಲ್ಲಿ ಕ್ಯಾಪಿಟಲ್ಸ್) ಕೆಲ ಪಂದ್ಯಗಳು ನಿಗದಿಯಾಗಿವೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡವು ಮಾರ್ಚ್ 24ರಂದು ತನ್ನ ಎರಡನೇ ತವರಾದ ವಿಶಾಖಪಟ್ಟಣದಲ್ಲೇ ಲಖನೌ ಸೂಪರ್ ಜೈಂಟ್ಸ್ ವಿರುದ್ಧ ಅಭಿಯಾನ ಆರಂಭಿಸಲಿದೆ. ಗುವಾಹಟಿ ಮತ್ತು ವಿಶಾಖಪಟ್ಟಣದಲ್ಲಿ ತಲಾ ಎರಡು ಪಂದ್ಯಗಳು ಮತ್ತು ಧರ್ಮಶಾಲಾದಲ್ಲಿ ಮೂರು ಪಂದ್ಯಗಳು ಇರಲಿವೆ.
ಆವೃತ್ತಿಯ ಮೊದಲ ಡಬಲ್ ಹೆಡರ್ ಮಾರ್ಚ್ 23ರಂದು ನಡೆಯಲಿದೆ. ಮಧ್ಯಾಹ್ನದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತನ್ನ ತವರಿನಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಎದುರಿಸಲಿದೆ. ರಾತ್ರಿಯ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತನ್ನ ತವರಿನಲ್ಲಿ ಮುಂಬೈ ಇಂಡಿಯಲ್ಸ್ ವಿರುದ್ಧ ಸೆಣಸಲಿದೆ.
ಪ್ಲೇ ಆಫ್ ಹಂತದ ಪಂದ್ಯಗಳು ಹೈದರಾಬಾದ್ ಮತ್ತು ಕೋಲ್ಕತ್ತದಲ್ಲಿ ಆಯೋಜಿಸಲಾಗಿದೆ. ಮೊದಲ ಕ್ವಾಲಿಫೈಯರ್ (ಮೇ 20) ಮತ್ತು ಎಲಿಮಿನೇಟರ್ (ಮೇ 21) ಪಂದ್ಯಗಳಿಗೆ ಹೈದರಾಬಾದ್‌ನಲ್ಲಿ ಆತಿಥ್ಯ ವಹಿಸಲಿದೆ. ಎರಡನೇ ಕ್ವಾಲಿಫೈಯರ್ (ಮೇ 23) ಪಂದ್ಯ ಕೋಲ್ಕತ್ತದಲ್ಲಿ ನಡೆಯಲಿದೆ.
ಒಟ್ಟು 10 ತಂಡಗಳು ಟೂರ್ನಿಯಲ್ಲಿ ಪೈಪೋಟಿ ನಡೆಸಲಿವೆ. ಚೆನ್ನೈ ಮತ್ತು ಮುಂಬೈ ತಂಡಗಳು ತಲಾ ಐದು ಬಾರಿ ಪ್ರಶಸ್ತಿ ಗೆದ್ದಿವೆ. ಕೋಲ್ಕತ್ತ ತಂಡವು ಮೂರು ಬಾರಿ ಚಾಂಪಿಯನ್ ಆಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಇನ್ನೂ ಪ್ರಶಸ್ತಿ ದಕ್ಕಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.