ADVERTISEMENT

ದೇಶಿ ಕ್ರಿಕೆಟ್‌ | ಗಾಯಾಳುವಿಗೆ ಬದಲೀ ಆಟಗಾರ: ಬಿಸಿಸಿಐ ಮಹತ್ವದ ಬದಲಾವಣೆ

ಪಿಟಿಐ
Published 17 ಆಗಸ್ಟ್ 2025, 0:36 IST
Last Updated 17 ಆಗಸ್ಟ್ 2025, 0:36 IST
   

ನವದೆಹಲಿ: ದೇಶಿ ಕ್ರಿಕೆಟ್‌ನ ದೀರ್ಘ ಮಾದರಿಯ ಟೂರ್ನಿಗಳಲ್ಲಿ ಗಾಯಾಳುವಿಗೆ ಬದಲೀ ಆಟಗಾರ ನಿಯಮದಲ್ಲಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಮಹತ್ವದ ಬದಲಾವಣೆ ತಂದಿದೆ.

ಪಂದ್ಯದಲ್ಲಿ ಯಾವುದೇ ಆಟಗಾರ ಗಂಭೀರ ಗಾಯಗೊಂಡರೆ ಆತನ ಸ್ಥಾನಕ್ಕೆ ಬದಲೀ ಆಟಗಾರನನ್ನು ನೀಡಲಾಗುವುದು. ಈಚೆಗೆ ಇಂಗ್ಲೆಂಡ್‌ ನಲ್ಲಿ ನಡೆದಿದ್ದ ಟೆಸ್ಟ್ ಸರಣಿಯಲ್ಲಿ ಭಾರತದ ರಿಷಭ್ ಪಂತ್ ಮತ್ತು ಅತಿಥೇಯ ತಂಡದ ಕ್ರಿಸ್ ವೋಕ್ಸ್‌ ಅವರು ಗಂಭೀರವಾಗಿ ಗಾಯಗೊಂಡರೂ ಕ್ರೀಸ್‌ಗಿಳಿದು ತಮ್ಮ ಹೊಣೆಗಾರಿಕೆ ನಿಭಾಯಿಸಿದ್ದರು.  ಆ ಸಂದರ್ಭದಲ್ಲಿ ಗಾಯಾಳುವಿಗೆ ಬದಲೀ ಆಟಗಾರನನ್ನು ನೀಡುವ ನಿಯಮದ ಕುರಿತು ಬಹಳಷ್ಟು ಚರ್ಚೆಗಳು ನಡೆದಿದ್ದವು.  

‘ದೇಶಿ ಕ್ರಿಕೆಟ್ ಟೂರ್ನಿಗಳಲ್ಲಿ (ಎರಡು ಅಥವಾ ಎರಡಕ್ಕಿಂತ ಹೆಚ್ಚು ದಿನಗಳ ಪಂದ್ಯ) ಆಟಗಾರ ಗಂಭೀರವಾಗಿ ಗಾಯಗೊಂಡಾಗ ಬದಲೀ ಆಟಗಾರನನ್ನು ನಿಯೋಜಿಸಬೇಕು. ಗಾಯಾಳು ಆಟಗಾರ ಹೊಣೆಯನ್ನು ನಿಭಾಯಿಸಲು ಬದಲೀ ಆಟಗಾರನಿಗೆ ಅವಕಾಶ ನೀಡಲಾಗುವುದು’ ಎಂದು ಬಿಸಿಸಿಐ ನೂತನ ನಿಯಮಾವಳಿಯಲ್ಲಿ ಉಲ್ಲೇಖಿಸಲಾಗಿದೆ. 

ADVERTISEMENT

‘ನಿಯಮದ (1.2.5.2) ಪ್ರಕಾರ ಪಂದ್ಯದಲ್ಲಿ ಆಡುವ ಸಂದರ್ಭದಲ್ಲಿ ಗಾಯಗೊಂಡಿರಬೇಕು. ಮೂಳೆಮುರಿತ, ಆಳವಾದ ತರಚುಗಾಯ ಅಥವಾ ಸ್ನಾಯು ಜೋಡಣೆ ತಪ್ಪಿದ ಗಾಯಗಳನ್ನು ಗಂಭೀರ ಎಂದು ಪರಿಗಣಿಸಲಾಗುತ್ತದೆ. ಪಂದ್ಯದ ಉಳಿದ ಭಾಗದಲ್ಲಿ ಗಾಯಾಳು ಆಟಗಾರನು ಆಡಲು ಅಸಮರ್ಥ ಎಂದಾದರೆ ಮಾತ್ರ ಬದಲೀ ಆಟಗಾರನನ್ನು ನೀಡಲಾಗುವುದು’ ಎಂದೂ ನಿಯಮದಲ್ಲಿ ಹೇಳಲಾಗಿದೆ. 

ಆದರೆ ದೇಶಿ ಕ್ರಿಕೆಟ್‌ನ ಸೀಮಿತ ಓವರ್‌ಗಳ ಟೂರ್ನಿಯಲ್ಲಿ ಈ ನಿಯಮ ಅನ್ವಯವಾಗುವುದಿಲ್ಲ. ದುಲೀಪ್ ಟ್ರೋಫಿ, ರಣಜಿ ಟ್ರೋಫಿ ಸೇರಿದಂತೆ ದೀರ್ಘ ಮಾದರಿಯ ಟೂರ್ನಿಗಳಲ್ಲಿ ಅನ್ವಯವಾಗಲಿದೆ.

ಅಂತರರಾಷ್ಟ್ರೀಯ ಮಟ್ಟದ ಪಂದ್ಯಗಳಲ್ಲಿ ತಲೆಗೆ ಪೆಟ್ಟು ಬಿದ್ದಾಗ (ಕಂಕಷನ್ ನಿಯಮ) ಮಾತ್ರ ಬದಲೀ ಆಟಗಾರನನ್ನು ನೀಡಲಾಗುತ್ತದೆ. ಆದರೆ ಉಳಿದ ಗಾಯಗಳಿಂದ ಬಳಲಿದ ಆಟಗಾರರಿಗೆ ಈ ಅವಕಾಶವಿಲ್ಲ. ಆದ್ದರಿಂದಲೇ ಇಂಗ್ಲೆಂಡ್ ಸರಣಿಯ ಟೆಸ್ಟ್‌ನಲ್ಲಿ ರಿಷಭ್ ಅವರು ಕಾಲಿನ ಮೂಳೆಮುರಿತವಾಗಿದ್ದರೂ ಬ್ಯಾಟಿಂಗ್‌ ಮಾಡಿದರು. ಕೊನೆಯ ಟೆಸ್ಟ್‌ನ ಕಡೆ ಇನಿಂಗ್ಸ್‌ನಲ್ಲಿ ಇಂಗ್ಲೆಂಡ್‌ನ ಕೊನೆಯ ಬ್ಯಾಟರ್ ಕ್ರಿಸ್ ವೋಕ್ಸ್ ತಮ್ಮ ಮುರಿದ ಕೈಗೆ ಬ್ಯಾಂಡೇಜ್ ಹಾಕಿಕೊಂಡೇ ಕ್ರೀಸ್‌ಗೆ ಬಂದು ಆಡಿದ್ದರು. ಅವರಿಗೆ ಫೀಲ್ಡಿಂಗ್ ರಿಪ್ಲೆಸ್‌ಮೆಂಟ್ ಆಟಗಾರನನ್ನು ಮಾತ್ರ ನೀಡಲಾಗಿತ್ತು. ಬ್ಯಾಟಿಂಗ್ ಅಥವಾ ಬೌಲಿಂಗ್‌ ಮಾಡಲು ಅವರಿಗೆ ಅವಕಾಶವಿರಲಿಲ್ಲ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.