ADVERTISEMENT

ಸೌರವ್ ಗಂಗೂಲಿಗೆ ಲಘು ಹೃದಯಾಘಾತ: ಆರೋಗ್ಯ ಸ್ಥಿರ

ಏಜೆನ್ಸೀಸ್
Published 2 ಜನವರಿ 2021, 11:18 IST
Last Updated 2 ಜನವರಿ 2021, 11:18 IST
ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ
ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ   

ಕೋಲ್ಕತ್ತ: ಹೃದಯಾಘಾತದ ಸೌಮ್ಯ ಲಕ್ಷಣಗಳು ಕಂಡುಬಂದ ಹಿನ್ನೆಲೆಯಲ್ಲಿ, ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಅಧ್ಯಕ್ಷ ಸೌರವ್ ಗಂಗೂಲಿ ಅವರನ್ನು ಶನಿವಾರ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

48 ವರ್ಷದ ಗಂಗೂಲಿ ಅವರ ಆರೋಗ್ಯ ಸ್ಥಿರವಾಗಿದ್ದು, ಆ್ಯಂಜಿಯೊಪ್ಲಾಸ್ಟಿ ಅಗತ್ಯವಿದೆಯೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ ಎಂದು ವೈದ್ಯರು ಹೇಳಿದ್ದಾರೆ.

‘ಗಂಗೂಲಿ ಅವರಲ್ಲಿ ಹೃದಯಾಘಾತದ ಸೌಮ್ಯ ಲಕ್ಷಣಗಳು ಕಾಣಿಸಿಕೊಂಡಿವೆ. ಇನ್ನೂ ಕೆಲವು ಪರೀಕ್ಷೆಗಳನ್ನು ಮಾಡಬೇಕಿದೆ. ಸ್ಟೆಂಟ್‌ ಅಳವಡಿಸಬೇಕೊ ಬೇಡವೊ ಎಂಬುದನ್ನು ಪರಿಶೀಲಿಸುತ್ತಿದ್ದೇವೆ‘ ಎಂದು ಗಂಗೂಲಿ ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯ ಸರೋಜ್‌ ಮಂಡಲ್‌ ಹೇಳಿದ್ದಾರೆ.

ADVERTISEMENT

ಸದ್ಯ ಗಂಗೂಲಿ ಅವರು ಗಂಭೀರ ನಿಗಾ ಘಟಕದಲ್ಲಿ (ಸಿಸಿಯು) ಚಿಕಿತ್ಸೆ ಪಡೆಯುತ್ತಿದ್ದಾರೆ.

ಶುಕ್ರವಾರ ಸಂಜೆ ವ್ಯಾಯಾಮದ ಬಳಿಕ ತನ್ನಲ್ಲಿ ಎದೆನೋವು ಕಾಣಿಸಿಕೊಂಡಿರುವುದಾಗಿ ಗಂಗೂಲಿ ಹೇಳಿಕೊಂಡಿದ್ದರು. ಶನಿವಾರ ಮಧ್ಯಾಹ್ನ ನೋವು ಮರುಕಳಿಸಿದಾಗ ಕುಟುಂಬ ಸದಸ್ಯರು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರು.

‘ಐದು ಮಂದಿಯ ವೈದ್ಯರ ತಂಡವು ಗಂಗೂಲಿ ಅವರಿಗೆ ಚಿಕಿತ್ಸೆಯನ್ನು ನೀಡುತ್ತಿದೆ‘ ಎಂದು ಆಸ್ಪತ್ರೆಯ ಮೂಲಗಳು ಹೇಳಿವೆ.

ಸುಪ್ರೀಂ ಕೋರ್ಟ್ ನೇಮಕ ಮಾಡಿದ ಆಡಳಿತಾಧಿಕಾರಿಗಳ ಸಮಿತಿಯ (ಸಿಒಎ) 33 ತಿಂಗಳ ಆಳ್ವಿಕೆಯು 2019ರ ಅಕ್ಟೋಬರ್‌ನಲ್ಲಿ ಕೊನೆಗೊಂಡ ಬಳಿಕ ಮುಂಬೈನಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಗಂಗೂಲಿ ಅವರು ಬಿಸಿಸಿಐ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದರು.

ಈ ಬಗ್ಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಟ್ವೀಟ್ ಮಾಡಿದ್ದು, ‘ಗಂಗೂಲಿ ಅವರಿಗೆ ಲಘು ಹೃದಯಾಘಾತವಾಗಿದೆ ಮತ್ತು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಕೇಳಿ ದುಃಖವಾಗಿದೆ. ಅವರು ಬೇಗನೆ ಸಂಪೂರ್ಣವಾಗಿ ಗುಣಮುಖರಾಗಲಿ. ನನ್ನ ಆಲೋಚನೆಗಳು ಮತ್ತು ಪ್ರಾರ್ಥನೆಗಳು ಗಂಗೂಲಿ ಹಾಗೂ ಅವರ ಕುಟುಂಬದ ಜೊತೆಗಿವೆ’ ಎಂದು ತಿಳಿಸಿದ್ದಾರೆ.

ಗಂಗೂಲಿ, ಬಂಗಾಳ ರಾಜ್ಯಪಾಲ ಜಗದೀಪ್‌ ಧನಖರ್‌ ಅವರನ್ನು ಕಳೆದ ವಾರ ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಈ ಬಗ್ಗೆ ಟ್ವಿಟರ್‌ನಲ್ಲಿ ಮಾಹಿತಿ ನೀಡಿದ್ದ ಜಗದೀಪ್‌, ‘ಬಿಸಿಸಿಐ ಅಧ್ಯಕ್ಷ ‘ದಾದಾ’ ಸೌರವ್‌ ಗಂಗೂಲಿ ಅವರೊಂದಿಗೆ ಶುಕ್ರವಾರ ಸಂಜೆ 4.30ರಲ್ಲಿ ರಾಜಭವನದಲ್ಲಿ ಸಾಕಷ್ಟು ವಿಚಾರಗಳ ಬಗ್ಗೆ ಮಾತುಕತೆ ನಡೆಸಿದೆ. 1864ರಲ್ಲಿ ನಿರ್ಮಾಣವಾದ ದೇಶದ ಅತ್ಯಂತ ಹಳೆಯ ಕ್ರಿಕೆಟ್‌ ಮೈದಾನ ಈಡನ್‌ ಗಾರ್ಡನ್ಸ್‌ಗೆ ಭೇಟಿ ನೀಡುವಂತೆ ಅವರು ನೀಡಿದ್ದ ಆಹ್ವಾನಕ್ಕೆ ಒಪ್ಪಿಗೆ ಸೂಚಿಸಿದ್ದೆ’ ಎಂದು ತಿಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.