ADVERTISEMENT

ಯುಪಿಸಿಎ ಭ್ರಷ್ಟಾಚಾರ ತನಿಖೆಗೆ ಬಿಸಿಸಿಐ ಸಜ್ಜು

​ಪ್ರಜಾವಾಣಿ ವಾರ್ತೆ
Published 19 ಜುಲೈ 2018, 19:24 IST
Last Updated 19 ಜುಲೈ 2018, 19:24 IST

ನವದೆಹಲಿ (ಪಿಟಿಐ): ಆಟಗಾರರಿಗೆ ರಾಜ್ಯ ಕ್ರಿಕೆಟ್ ತಂಡದಲ್ಲಿ ಸ್ಥಾನ ಕೊಡಿಸಲು ಐಪಿಎಲ್ ಮುಖ್ಯಸ್ಥ ರಾಜೀವ್ ಶುಕ್ಲಾ ಅವರ ಕಾರ್ಯಕಾರಿ ಸಹಾಯಕ ಅಕ್ರಂ ಸಫಿ ಲಂಚದ ಬೇಡಿಕೆ ಇರಿಸಿದ್ದರ ಕುರಿತು ತನಿಖೆ ನಡೆಸಲಾಗುವುದು ಎಂದು ಬಿಸಿಸಿಐ ಭ್ರಷ್ಟಾಚಾರ ನಿಗ್ರಹ ಘಟಕ ತಿಳಿಸಿದೆ.

ಖಾಸಗಿ ಟಿ.ವಿ ವಾಹಿನಿಯವರು ಮಾರುವೇಷದ ಕಾರ್ಯಾಚರಣೆ ನಡೆಸಿ ಅಕ್ರಂ ಸಫಿ ಅವರು ರಾಹುಲ್ ಶರ್ಮಾಗೆ ಲಂಚದ ಬೇಡಿಕೆ ಇರಿಸಿರುವುದನ್ನು ಬಹಿರಂಗಪಡಿಸಿತ್ತು.

‘ಮಾರುವೇಷದ ಕಾರ್ಯಾಚರಣೆಯ ತುಣುಕುಗಳನ್ನು ಪರಿಶೀಲಿಸುತ್ತಿದ್ದೇವೆ’ ಎಂದು ಭ್ರಷ್ಟಾಚಾರ ನಿಗ್ರಹ ಘಟಕದ ಮುಖ್ಯಸ್ಥ ಅಜಿತ್ ಸಿಂಗ್ ಸುದ್ದಿಸಂಸ್ಥೆಗೆ ತಿಳಿಸಿದರು.

ADVERTISEMENT

ರಾಜ್ಯ ತಂಡದಲ್ಲಿ ಸ್ಥಾನ ಗಳಿಸಲು ವಿಫಲರಾಗಿರುವ ಶರ್ಮಾ ಅವರು ‘ಸೈಫಿ ಹಣ ಮತ್ತು ವಸ್ತು ರೂಪದಲ್ಲಿ ಲಂಚ ಬಯಸಿದ್ದರು, ಅನೇಕರಿಗೆ ವಯಸ್ಸು ದೃಢೀಕರಿಸುವ ನಕಲಿ ಪ್ರಮಾಣಪತ್ರಗಳನ್ನು ವಿತರಿಸಿದ್ದಾರೆ’ ಎಂದು ದೂರಿದ್ದರು. ಆದರೆ ಈ ಆರೋಪಗಳನ್ನು ಸೈಫಿ ಅಲ್ಲಗಳೆದಿದ್ದರು.

‘ಪಾರದರ್ಶಕವಾಗಿ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ. ಆದ್ದರಿಂದ ಯಾವುದೇ ತನಿಖೆಗೆ ನಾವು ಸಿದ್ಧರಿದ್ದೇವೆ. ಇಬ್ಬರ ನಡುವೆ ನಡೆದಿದೆ ಎನ್ನಲಾದ ಸಂಭಾಷಣೆ ಅವರ ವೈಯಕ್ತಿಕ ವಿಷಯವಾಗಿದೆ’ ಎಂದು ಉತ್ತರ ಪ್ರದೇಶ ಕ್ರಿಕೆಟ್‌ ಸಂಸ್ಥೆಯ ಜಂಟಿ ಕಾರ್ಯದರ್ಶಿ ಯದುವೀರ್ ಸಿಂಗ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.