ADVERTISEMENT

ವಿದೇಶಿ ಮಂಡಳಿಗಳ ಜೊತೆ ನೇರ ವ್ಯವಹಾರ: ನಿರ್ಬಂಧಕ್ಕೆ ಬಿಸಿಸಿಐ ಸಜ್ಜು

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2024, 14:09 IST
Last Updated 13 ಮಾರ್ಚ್ 2024, 14:09 IST
ಬಿಸಿಸಿಐ
ಬಿಸಿಸಿಐ   

ನವದೆಹಲಿ: ರಾಜ್ಯ ಕ್ರಿಕೆಟ್‌ ಸಂಸ್ಥೆಗಳು, ತರಬೇತಿ ಶಿಬಿರ, ಟೂರ್ನಿಗಳನ್ನು ನಡೆಸಲು ನೇರವಾಗಿ ವಿದೇಶಿ ಕ್ರಿಕೆಟ್‌ ಮಂಡಳಿಗಳ ಜೊತೆ ಒಪ್ಪಂದ ಮಾಡಿಕೊಳ್ಳುವುದನ್ನು ನಿರ್ಬಂಧಿಸಲು ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಮುಂದಾಗಿದೆ. ಮಂಡಳಿಯ ಮುಖಾಂತರವೇ ಈ ಒಪ್ಪಂದಗಳನ್ನು ಮಾಡಿಕೊಳ್ಳುವುದನ್ನು ಕಡ್ಡಾಯ ಮಾಡಲಾಗುವುದು.

ಈ ಸಂಬಂಧ ಮಾರ್ಚ್‌ 18ರಂದು ನಡೆಯುವ ಅಪೆಕ್ಸ್‌ ಕೌನ್ಸಿಲ್‌ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಿದೆ. ದೆಹಲಿ ಮತ್ತು ಪುದುಚೇರಿ ಘಟಕಗಳು, ಅಂತರರಾಷ್ಟ್ರೀಯ ಅನುಭವ ಪಡೆಯುವ ಉದ್ದೇಶದಿಂದ ಪ್ರವಾಸಕ್ಕೆ ಆತಿಥ್ಯ ನೀಡಲು ವಿದೇಶಿ (ಐಸಿಸಿ ಸಹ ಸದಸ್ಯ) ಮಂಡಳಿಗಳ ಜೊತೆ ಮಾತುಕತೆ ನಡೆಸಿದ್ದವು. ಇದರ ಬೆನ್ನಲ್ಲೇ ಮಂಡಳಿ ಈ ನಿರ್ಧಾರ ಕೈಗೊಳ್ಳುವ ಅನಿವಾರ್ಯಕ್ಕೆ ಸಿಲುಕಿದೆ.

ಡೆಲ್ಲಿ ಮತ್ತು ಡಿಸ್ಟ್ರಿಕ್ಸ್‌ ಕ್ರಿಕೆಟ್‌ ಸಂಸ್ಥೆ ಈ ಸಂಬಂಧ ನೇಪಾಳದ ಕ್ರಿಕೆಟ್‌ ಮಂಡಳಿಯಿಂದ ಪ್ರಸ್ತಾವ ಸ್ವೀಕರಿಸಿರುವುದು ದೃಢಪಟ್ಟಿದೆ.

ADVERTISEMENT

‘ಕ್ರಿಕೆಟ್‌ ಚಟುವಟಿಕೆಗಳನ್ನು ನಡೆಸುವ ಉದ್ದೇಶದಿಂದ ರಾಜ್ಯ ಘಟಕಗಳು ವಿದೇಶಿ ಮಂಡಳಿಗಳ ಸಹಯೋಗ ಪಡೆಯಬಹುದು. ಆದರೆ ಇದು ಮಾತೃಸಂಸ್ಥೆ ಬಿಸಿಸಿಐ ಮುಖಾಂತರವೇ ಒಪ್ಪಂದವಾಗಬೇಕು. ಎಲ್ಲ ಪ್ರಸ್ತಾವಗಳಿಗೂ ಬಿಸಿಸಿಐ ಮೂಲಕ ಒಪ್ಪಿಗೆ ಪಡೆಯಬೇಕು’ ಎಂದು ಮಂಡಳಿಯ ಮೂಲವೊಂದು ತಿಳಿಸಿದೆ.

ನೇಪಾಳ ಕ್ರಿಕೆಟ್‌ ತಂಡ, ಅಮೆರಿಕ ಮತ್ತು ಕೆರಿಬಿಯನ್‌ ದ್ವೀಪಸಮೂಹದಲ್ಲಿ ಜೂನ್‌ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ ಮುನ್ನ ಭಾರತಕ್ಕೆ ಪ್ರವಾಸ ಕೈಗೊಳ್ಳುವ ನಿರೀಕ್ಷೆಯಿದೆ. ನೇಪಾಳ ಕ್ರಿಕೆಟ್‌ ಸಂಸ್ಥೆ ಅಧಿಕಾರಿಗಳು ಕಳೆದ ತಿಂಗಳು ಜಯ್‌ ಶಾ ಜೊತೆ ಮಾತುಕತೆ ನಡೆಸಿದ್ದಾರೆ.

ಬಿಸಿಸಿಐ ಈ ಹಿಂದೆಯೂ ಸಹ ಸದಸ್ಯ ರಾಷ್ಟ್ರಗಳ ನೆರವಿಗೆ ಬಂದಿದೆ. ಅಫ್ಗಾನಿಸ್ತಾನ ಕ್ರಿಕೆಟ್ ತಂಡ ಕೋವಿಡ್‌ ಪೂರ್ವ ಸಮಯದಿಂದ ಭಾರತದಲ್ಲೆ ನೆಲೆ ಹೊಂದಿದೆ. ಡೆಹ್ರಾಡೂನ್ ಮತ್ತು ಗ್ರೇಟರ್‌ ನೊಯ್ಡಾದಲ್ಲಿ ತರಬೇತಿ, ಅಭ್ಯಾಸ ಪಂದ್ಯಗಳಲ್ಲಿ ಆಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.