ನವದೆಹಲಿ: ಜಯ್ ಶಾ ಮತ್ತು ಆಶಿಶ್ ಶೆಲಾರ್ ಅವರಿಂದ ಈ ತಿಂಗಳ ಆರಂಭದಲ್ಲಿ ತೆರವಾದ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಕಾರ್ಯದರ್ಶಿ ಮತ್ತು ಖಜಾಂಚಿ ಸ್ಥಾನಗಳನ್ನು ತುಂಬಲು ಜನವರಿ 12 ರಂದು ಮುಂಬೈನಲ್ಲಿ ಮಂಡಳಿಯ ವಿಶೇಷ ಸಾಮಾನ್ಯ ಸಭೆ (ಎಸ್‌ಜಿಎಂ) ಕರೆಯಲಾಗಿದೆ.
ಬಿಸಿಸಿಐ ನಿಯಮಾವಳಿಗಳ ಪ್ರಕಾರ 45 ದಿನಗಳ ಒಳಗೆ ವಿಶೇಷ ಸಾಮಾನ್ಯ ಸಭೆ ಕರೆದು ತೆರವಾದ ಹುದ್ದೆ ಭರ್ತಿ ಮಾಡಿಕೊಳ್ಳಬೇಕಿದೆ. ಈಗಿನ ಸಭೆ ಗಡುವಿಗಿಂತ ಮೊದಲೇ, 43 ದಿನಗಳ ಒಳಗೆ ನಡೆಯುತ್ತಿದೆ.
‘ಮಂಡಳಿಯ ಅಪೆಕ್ಸ್ ಕೌನ್ಸಿಲ್ ಸಭೆ ಗುರುವಾರ ನಡೆದಿದ್ದು, ವಿಶೇಷ ಸಾಮಾನ್ಯ ಸಭೆಯ ದಿನಾಂಕದ ಅಧಿಸೂಚನೆಯನ್ನು ರಾಜ್ಯ ಘಟಕಗಳಿಗೆ ಕಳುಹಿಸಲಾಗಿದೆ. ಈ ಸಭೆ ಬಿಸಿಸಿಐ ಕೇಂದ್ರ ಕಚೇರಿಯಲ್ಲಿ ಜನವರಿ 12ರಂದು ನಡೆಯಲಿದೆ’ ಎಂದು ರಾಜ್ಯ ಘಟಕದ ಅಧ್ಯಕ್ಷರೊಬ್ಬರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಜಯ್ ಶಾ ಡಿಸೆಂಬರ್ 1ರಂದು ಐಸಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದರು. ಮಂಡಳಿಯಲ್ಲಿ ಖಜಾಂಚಿಯಾಗಿದ್ದ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಆಶಿಶ್ ಶೆಲಾರ್ ಈಚೆಗೆ ಮಹಾರಾಷ್ಟ್ರದಲ್ಲಿ ಅಸ್ತಿತ್ವಕ್ಕೆ ಬಂದ ನೂತನ ಸಂಪುಟದಲ್ಲಿ ಸಚಿವರಾಗಿ ನೇಮಕಗೊಂಡಿದ್ದಾರೆ. ಲೋಧಾ ಸಮಿತಿ ನಿಯಮಗಳ ಪ್ರಕಾರ ಸಚಿವರು ಅಥವಾ ಜನಪ್ರತಿನಿಧಿಗಳು ಮಂಡಳಿಯ ಪದಾಧಿಕಾರಿಗಳಾಗಲು ಅವಕಾಶವಿಲ್ಲ.
ಭಾರತದ ಮಾಜಿ ಮುಖ್ಯ ಚುನಾವಣಾ ಆಯುಕ್ತರಾದ ಅಚಲ್ ಕುಮಾರ್ ಜ್ಯೋತಿ ಅವರನ್ನು ವಿಶೇಷ ಸಾಮಾನ್ಯ ಸಭೆಯಲ್ಲಿ ಬಿಸಿಸಿಐ ಚುನಾವಣೆ ನಡೆಸಲು ಚುನಾವಣಾ ಅಧಿಕಾರಿಯಾಗಿ ನೇಮಕಗೊಳಿಸಲು ಸಮ್ಮತಿ ನೀಡುವಂತೆ ಅಪೆಕ್ಸ್ ಕೌನ್ಸಿಲ್ ಸಭೆಯಲ್ಲಿ ಕೋರಲಾಗಿದೆ. 71 ವರ್ಷ ವಯಸ್ಸಿನ ಜ್ಯೋತಿ ಅವರು 2017ರ ಜುಲೈನಿಂದ 2018ರ ಜನವರಿವರೆಗೆ ಮುಖ್ಯ ಚುನಾವಣಾ ಆಯುಕ್ತರಾಗಿದ್ದರು.
ಅಸ್ಸಾಮಿನ ದೇವಜಿತ್ ಸೈಕಿಯಾ ಅವರು ಬಿಸಿಸಿಐ ಕಾರ್ಯದರ್ಶಿ ಹೊಣೆಯನ್ನು ಪ್ರಭಾರಿಯಾಗಿ ವಹಿಸಿಕೊಂಡಿದ್ದಾರೆ. ಖಜಾಂಚಿ ಹುದ್ದೆ ಖಾಲಿ ಉಳಿದಿದೆ. ಈ ಎರಡೂ ಸ್ಥಾನಗಳಿಗೆ ಸರ್ವಾನುಮತದ ಆಯ್ಕೆ ನಡೆಯುವ ನಿರೀಕ್ಷೆಯಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.