ADVERTISEMENT

ಕಾನೂನು ಕ್ರಮ: ಡಿಡಿಸಿಎಗೆ ಬಿಷನ್‌ ಸಿಂಗ್‌ ಬೇಡಿ ಎಚ್ಚರಿಕೆ

ಪಿಟಿಐ
Published 27 ಡಿಸೆಂಬರ್ 2020, 12:38 IST
Last Updated 27 ಡಿಸೆಂಬರ್ 2020, 12:38 IST
ಬಿಷನ್‌ ಸಿಂಗ್‌ ಬೇಡಿ
ಬಿಷನ್‌ ಸಿಂಗ್‌ ಬೇಡಿ   

ನವದೆಹಲಿ: ಫಿರೋಜ್‌ ಷಾ ಕೋಟ್ಲಾದ ಪ್ರೇಕ್ಷಕರ ಗ್ಯಾಲರಿಗೆ ಇಟ್ಟಿರುವ ತಮ್ಮ ಹೆಸರನ್ನು ತಕ್ಷಣವೇ ತೆಗೆದುಹಾಕಬೇಕು. ಇಲ್ಲದಿದ್ದರೆ ದೆಹಲಿ ಜಿಲ್ಲಾ ಕ್ರಿಕೆಟ್‌ ಸಂಸ್ಥೆ (ಡಿಡಿಸಿಎ) ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಭಾರತದ ಮಾಜಿ ಆಟಗಾರ, ಸ್ಪಿನ್‌ ಮಾತ್ರಿಕ ಬಿಷನ್‌ ಸಿಂಗ್‌ ಬೇಡಿ ಎಚ್ಚರಿಕೆ ನೀಡಿದ್ದಾರೆ.

ದೆಹಲಿ ಜಿಲ್ಲಾ ಕ್ರಿಕೆಟ್‌ ಸಂಸ್ಥೆ ಅಧ್ಯಕ್ಷರೂ ಆಗಿದ್ದ ಮಾಜಿ ಕೇಂದ್ರ ಸಚಿವ ದಿವಂಗತ ಅರುಣ್‌ ಜೇಟ್ಲಿ ಅವರ ಪ್ರತಿಮೆಯನ್ನು ಕೋಟ್ಲಾದಲ್ಲಿ ಸ್ಥಾಪಿಸಲು ಮುಂದಾಗಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿ ಬುಧವಾರವಷ್ಟೇ ಡಿಡಿಸಿಗೆ ಬೇಡಿ ಪತ್ರ ಬರೆದಿದ್ದರು. ಡಿಡಿಸಿಎಯಿಂದ ಯಾವುದೇ ಪ್ರತಿಕ್ರಿಯೆ ಬರದ ಕಾರಣ ಅವರು ಶನಿವಾರ ಮತ್ತೊಂದು ಪತ್ರ ಬರೆದಿದ್ದಾರೆ.

‘ನಾನು ನಿಮಗೆ ಪತ್ರ ಬರೆದು ಕೆಲವು ದಿನಗಳಾಗಿವೆ. ನನ್ನ ಪತ್ರ ಬಹಿರಂಗವಾದ ಕೆಲವೇ ನಿಮಿಷಗಳಲ್ಲಿ ವಿಶ್ವದೆಲ್ಲೆಡೆ ಕ್ರಿಕೆಟ್‌ ಕ್ಷೇತ್ರದಿಂದ ನನಗೆ ಅಮೋಘ ಬೆಂಬಲ ದೊರಕಿದೆ. ಆದರೆ ನಿಮ್ಮಿಂದ ಯಾವುದೇ ಪ್ರತಿಕ್ರಿಯೆ ಬರದೇ ಇರುವುದರಿಂದ ಬೇಸರವಾಗಿದೆ’ ಎಂದು ಬೇಡಿ ಅವರು ಡಿಡಿಸಿಎ ಅಧ್ಯಕ್ಷ ರೋಹನ್‌ ಜೇಟ್ಲಿ ಅವರನ್ನು ಉದ್ದೇಶಿಸಿ ಬರೆದ ಪತ್ರದಲ್ಲಿ ತೀಕ್ಷ್ಣವಾಗಿ ವಿವರಿಸಿದ್ದಾರೆ.

ADVERTISEMENT

‘ನಮ್ಮ ದೇಶದಲ್ಲಿ ತಮ್ಮ ಹೆಸರು ಯಾವುದರೊಂದಿಗೆ ಇರಬೇಕೆಂದು, ತಮ್ಮ ಹೆಸರಿನ ಫಲಕ ಘನತೆಯಿಂದ ಕಾಣುವಂತೆ ಇರಬೇಕೆಂದು ನಿರ್ಧರಿಸುವ ಅಧಿಕಾರ ಜನರಿಗೆ ಇದೆ. ಕಾನೂನು ಕ್ರಮಕ್ಕೆ ಮುಂದಾಗುವಂತೆ ನನ್ನನ್ನು ಪ್ರೇರೇಪಿಸದಿರಿ’ ಎಂದಿದ್ದಾರೆ.

ಡಿಡಿಸಿಎ ಸದಸ್ಯತ್ವ ತ್ಯಜಿಸಲೂ ಬೇಡಿ ನಿರ್ಧರಿಸಿದ್ದಾರೆ. ರೋಹನ್‌ ಜೇಟ್ಲಿ ಅವರ ತಪ್ಪು ಸಲಹೆಗಳು ಮತ್ತು ಮೌನವನ್ನೂ ಬೇಡಿ ಪತ್ರದಲ್ಲಿ ಪ್ರಶ್ನಿಸಿದ್ದಾರೆ.

‘ಯಾವುದೇ ಸಹಾಯ ಯಾಚಿಸದ ಮತ್ತು ಕ್ರಿಕೆಟ್‌ ಪಾವಿತ್ರ್ಯತೆ ಧಕ್ಕೆಯಾಗದಂತೆ ಬಯಸುವ ಮಾಜಿ ಕ್ರಿಕೆಟ್‌ ಆಟಗಾರನ ಪತ್ರಕ್ಕೆ ಉತ್ತರಿಸುವ ಕನಿಷ್ಠ ಸೌಜನ್ಯ ತಮಗಿದೆ ಎಂಬ ವಿಶ್ವಾಸ ಹೊಂದಿದ್ದೇನೆ’ ಎಂದು ಬೇಡಿ ಖಾರವಾದ ಮಾತುಗಳಲ್ಲಿ ಹೇಳಿದ್ದಾರೆ.

ಕೋಟ್ಲಾದಲ್ಲಿ ಜೇಟ್ಲಿ ಪ್ರತಿಮೆಯನ್ನು ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ ಮಾಜಿ ಅಧ್ಯಕ್ಷ ಸೌರವ್‌ ಗಂಗೂಲಿ ಸೋಮವಾರ ಅನಾವರಣಗೊಳಿಸಲಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್‌ ಶಾ ಮತ್ತು ಬಿಸಿಸಿಐ ಮಾಜಿ ಮುಖ್ಯಸ್ಥ ಅನುರಾಗ್‌ ಠಾಕೂರ್ ಮೊದಲಾದ ಗಣ್ಯರು ಪಾಲ್ಗೊಳ್ಳಲಿದ್ದಾರೆ.

ಜೇಟ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದಲ್ಲಿ ಪ್ರಭಾವಿ ಮಂತ್ರಿಯಾಗಿದ್ದರು. ಕಳೆದ ವರ್ಷ ಅನಾರೋಗ್ಯದಿಂದ ಮೃತಪಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.